ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾ.ಪಂ. ವ್ಯಾಪ್ತಿಯ ಪೆರ್ಲಾಪು ಎಂಬಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವ ಸಲುವಾಗಿ ಮಂಜೂರು ಮಾಡಿದ್ದ ಜಾಗದಲ್ಲಿ ನಾಲ್ಕು ಕುಟುಂಬಗಳು ಅಕ್ರಮವಾಗಿ ಶೆಡ್ ನಿರ್ಮಿಸಿದ್ದು, ಶಾಸಕ ಹರೀಶ್ ಪೂಂಜ ಸೂಚನೆಯಂತೆ ತೆರವು ಕಾರ್ಯಾಚರಣೆಯನ್ನು ಮಂಗಳವಾರ ಸ್ಥಗಿತಗೊಳಿಸಲಾಗಿದೆ.
ಇಳಂತಿಲ ಗ್ರಾಮದ ಸರ್ವೆ ನಂಬ್ರ 354/3ರಲ್ಲಿ 2.13 ಎಕ್ರೆ ಜಾಗವನ್ನು ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಪುತ್ತೂರು ಉಪ ವಿಭಾಗಾಧಿಕಾರಿ ಮಂಜೂರು ಮಾಡಿದ್ದರು. ಗ್ರಾ.ಪಂ. ನಿವೇಶನ ರಹಿತ ಫಲಾನುಭವಿಗಳ ಪಟ್ಟಿ ಮಾಡಿ ನಿರ್ಣಯ ಅಂಗೀಕರಿಸಿತ್ತು. ಆದರೆ, ಈ ಜಾಗದಲ್ಲಿ ಅನಿತಾ ತೋಮಸ್, ಭಾರತಿ ಗಣೇಶ್, ಭಾಗ್ಯಾ ದೇವದಾಸ್ ಹಾಗೂ ಧನ್ಯಾ ಪದ್ಮನಾಭ ಎಂಬವರು ಶೆಡ್ ನಿರ್ಮಿಸಿ ವಾಸ್ತವ್ಯ ಹೂಡಿದ್ದರು. ಶೆಡ್‌ಗಳ ತೆರವಿಗೆ ಗ್ರಾ.ಪಂ. ಮಂಗಳವಾರ ಮುಂದಾ ಗಿತ್ತು. ಶೆಡ್ ನಿರ್ಮಿಸಿದವರ ವಿರೋಧದ ಹಿನ್ನೆಲೆಯಲ್ಲಿ ಶಾಸಕರು ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ಮುಂದುವರಿಸದಂತೆ ಸೂಚಿಸಿದರು.
ಗ್ರಾ.ಪಂ. ಆಡಳಿತ ಉಪ್ಪಿನಂಗಡಿ ಪೊಲೀಸರ ನೆರವಿನೊಂದಿಗೆ ಅಕ್ರಮ ತೆರವು ಕಾರ್ಯಾಚರಣೆಗೆ ಸ್ಥಳಕ್ಕೆ ತೆರಳಿತ್ತು. ಆಗ ಶೆಡ್ ನಿರ್ಮಿಸಿಕೊಂಡವರು ಆಕ್ಷೇಪ ವ್ಯಕ್ತಪಡಿಸಿ, “ನಮಗೆ ಬೇರೆ ಮನೆ ಇಲ್ಲದ ಕಾರಣ ನಾವು ಇಲ್ಲಿಂದ ಹೋಗುವುದಿಲ್ಲ’ ಎಂದು ಪಟ್ಟು ಹಿಡಿದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗೀತಾ ಸಾಲ್ಯಾನ್, “ಈ ಜಾಗ ನಿವೇಶನ ರಹಿತರ ಪಟ್ಟಿಯಲ್ಲಿ ಇರುವವರಿಗೆ ಹಂಚುವಂಥದ್ದು. ಅದನ್ನು ನಿವೇಶನ ಮಾಡುವ ಸಲುವಾಗಿ ಸಮತಟ್ಟು ಮಾಡಬೇಕಾಗಿದೆ. ತಾವು ತಾತ್ಕಾಲಿಕವಾಗಿ ವಸತಿಗೆ ಬೇರೆ ಕಡೆ ವ್ಯವಸ್ಥೆ ಮಾಡಿಕೊಳ್ಳಿ’ ಎಂದು ಸೂಚಿಸಿದರು. “ನಿಮ್ಮ ಅರ್ಜಿ ಇಲ್ಲದ ಕಾರಣ ನಿಮಗೆ ಇಲ್ಲಿ ನಿವೇಶನ ನೀಡಲು ಬರುವುದಿಲ್ಲ. ಬೇರೆ ಜಾಗಕ್ಕೆ ಪ್ರಯತ್ನಿಸಲಾಗುವುದು’ ಎಂದರು. “ನಾವು ಇಲ್ಲಿಂದ ಹೋಗುವುದಿಲ್ಲ. ಶಾಸಕರ ಗಮನಕ್ಕೆ ತಂದಿದ್ದೇವೆ. ಅವರು ಬಂದು ತೀರ್ಮಾನ ನೀಡಿದರೆ ಪಾಲಿಸುತ್ತೇವೆ’ ಎಂದು ಶೆಡ್ ನಿರ್ಮಿಸಿದ ಕುಟುಂಬಸ್ಥರು ಹೇಳಿದರು. ಇದಕ್ಕೆ ಸಮ್ಮತಿಸಿ, ಕಾರ್ಯಾ ಚರಣೆ ಸ್ಥಗಿತಗೊಳಿಸಲಾಯಿತು.
ಗ್ರಾ.ಪಂ. ಉಪಾಧ್ಯಕ್ಷೆ ಗುಲಾಬಿ, ಸದಸ್ಯ ರಾದ ಮನೋಹರ್ ಕುಮಾರ್, ಯು.ಟಿ. ಫಯಾಝ್ ಅಹ್ಮದ್, ಚಂದ್ರಾವತಿ, ಚಂದ್ರಕಲಾ ಭಟ್, ತಾ.ಪಂ. ಸದಸ್ಯ ಕೃಷ್ಣಯ್ಯ ಆಚಾರ್ಯ, ಕಾರ್ಯದರ್ಶಿ ಶೀಲಾವತಿ, ಜಿ.ಪಂ. ಕಿರಿಯ ಸಹಾಯಕ ಎಂಜಿನಿಯರ್ ಗಫೂರ್ ಸಾಬ್, ಗ್ರಾ.ಪಂ. ಸಿಬಂದಿ ಸತೀಶ್, ಶಶಿಧರ್, ಸುಂದರ ನಾಯ್ಕ, ಯಶೋಧರ, ಸ್ಥಳೀಯರಾದ ರವಿ, ರಮೇಶ್ ಅಂಬೊಟ್ಟು ಉಪಸ್ಥಿತರಿದ್ದರು.