ಕಾಸರಗೋಡು: ಮನುಷ್ಯ ಅಮಲು ಪದಾರ್ಥಗಳ ಬಳಕೆಯಿಂದ ಬುದ್ಧಿ ಸ್ವಾಸ್ತ್ಯಕಳೆದು ಮೃಗವಾಗುತ್ತಾನೆ. ಮನಸ್ಸು ಶುದ್ಧವಿದ್ದರೆ ನಾವು ಮತ್ತು ನಮ್ಮ ಪರಿಸರ ಶುದ್ಧವಾಗಿರುತ್ತದೆ. ನಾವು ಶುದ್ಧರಾಗಿ, ಲೋಕ ಪರಿಶುದ್ಧಗೊಂಡು ಮಾದಕ ಮುಕ್ತ ಭಾರತ ನಿರ್ಮಾಣ ವಾಗಬೇಕು ಎಂದು ಉಪನ್ಯಾಸಕ ಕೇಶವ ಶರ್ಮ ಹೇಳಿದರು.
ಪೆರ್ಲ ನಾಲಂದ ಮಹಾವಿದ್ಯಾ ಲಯದ ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ನಡೆದ ಮಾದಕ ವ್ಯಸನ ವಿರೋಧಿ ದಿನದಂದು ಅವರು ಮಾತನಾಡಿದರು.
ಇಂದು ಯುವ ಜನಾಂಗ ಶೋಕೀ ಜೀವನಕ್ಕೆ ಮರುಳಾಗಿ ಮಾದಕ ದ್ರವ್ಯಗಳ ದಾಸರಾಗಿರುವುದು ಸಾಮಾನ್ಯವಾಗಿದೆ. ಅದು ಮೊದಮೊದಲು ಸ್ನೇಹಿತನಾಗಿ ಬಂದು ಕೊನೆಗೆ ಶತ್ರುವಾಗಿ ನಮ್ಮ ಸಂಸಾರ ಬೀದಿಪಾಲಾಗಿಸುತ್ತದೆ. ಆದುದರಿಂದ ಪ್ರಾಥಮಿಕ ಶಾಲಾ ಮಟ್ಟದಿಂದಲೇ ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿ ಸುವುದು ಅತೀ ಅಗತ್ಯ ಎಂದರು.
ಕಾಲೇಜು ಪ್ರಾಂಶುಪಾಲ ಪ್ರೊಣಪಿ.ಶಂಕರನಾರಾಯಣ ಹೊಳ್ಳ ಅವರು ಮಾದಕ ವ್ಯಸನದ ವಿರುದ್ಧ ಸಂದೇಶ ಸಾರುವ ಪೋಸ್ಟರ್ ರಚನಾ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡುತ್ತಾ ಮಾದಕ ವ್ಯಸನದಂತೆ ಯುವಜನಾಂಗವನ್ನು ಇಂದು ಮೊಬೈಲ್‌ಗಳು ದಾರಿತಪ್ಪಿಸುತ್ತಿವೆ. ವಿದ್ಯಾರ್ಥಿಗಳು ಅದರಿಂದ ದೂರ ಇರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದರು. ಉಪನ್ಯಾಸಕ ಸುರೇಶ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅರ್ಪಿತಾ ವಂದಿಸಿದರು. ವಿದ್ಯಾರ್ಥಿ ವಿಕಾಸ್ ಕಾರ್ಯಕ್ರಮ ನಿರೂಪಿಸಿದರು.