ಪೆರ್ಲ : ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಪ್ರಸಿದ್ಧ ಕ್ಷೇತ್ರ ಶಬರಿಮಲೆಯ ಮೂಲ ಸಂಪ್ರದಾಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದು, ಆಚಾರ ಅನುಷ್ಠಾನಗಳನ್ನು ಕಾಪಾಡಲು ಕಾನೂನು ಪರಿಷ್ಕರಣೆ ಮಾಡುವುದರೊಂದಿಗೆ ಕೇಂದ್ರ ಸರಕಾರ ಮುಂದೆ ಬರಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯ ನಿರ್ವಾಹಕ ಅಧ್ಯಕ್ಷ ಕೆ. ಸುಧಾಕರನ್ ಆಗ್ರಹಿಸಿದ್ದಾರೆ. ವಿಶ್ವಾಸವನ್ನು ಸಂರಕ್ಷಿಸಿ ವರ್ಗೀಯತೆಯನ್ನು ಹೋಗಲಾಡಿಸುವ ಘೋಷಣ ವಾಕ್ಯದೊಂದಿಗೆ ಕೆಪಿಸಿಸಿ ಆಯೋಜಿಸುವ ವಿಶ್ವಾಸ ಸಂರಕ್ಷಣಾ ಜಾಥದ ಸಂಘಟನಾ ಸಮಿತಿ ರಚನಾ ಸಭೆಯನ್ನು ಉದ್ಘಾಟಿಸಿ ಅವರು ಹೇಳಿದರು.
ಶಬರಿಮಲೆಯಲ್ಲಿ ಆಚಾರ, ಅನುಷ್ಠಾನ ಕಾಪಾಡಬೇಕಿದೆ
ಎಂಟು ಕೋಟಿ ಜನತೆಯ ವಿಶ್ವಾಸಕ್ಕೆ ಧಕ್ಕೆ ತರುವ ರೀತಿಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆ ತೀರ್ಪಿನ ಮರು ಪರಿಶೀಲನೆ ನಡೆಸುವಲ್ಲಿ ಯಾವುದೇ ಆಡಳಿತ ವ್ಯವಸ್ಥೆಯ ಅನುಕಂಪ ಬೇಕಾಗಿಲ್ಲ. ವಿಶ್ವಾಸದ ವಿಷಯದಲ್ಲಿ ಜನಹಿತ ಕಾಪಾಡಲು ಸಂವಿಧಾನ ವ್ಯವಸ್ಥೆ ಕಲ್ಪಿಸಿದ್ದು ಸುಪ್ರೀಂ ಕೋರ್ಟ್ ತೀರ್ಪನ್ನು ಆ ವ್ಯವಸ್ಥೆಯೊಂದಿಗೆ ಮರು ಪರಿಶೀಲಿಸಿ ಈ ಹಿಂದಿನಿಂದ ಕಾಯ್ದುಕೊಂಡು ಬಂದಿರುವ ರೀತಿಯಲ್ಲಿಯೇ ಶಬರಿಮಲೆಯಲ್ಲಿ ಆಚಾರ ಅನುಷ್ಠಾನಗಳನ್ನು ಕಾಪಾಡಬೇಕಾಗಿದೆ ಎಂದು ನುಡಿದರು.
ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆಯನ್ನು ಹಕೀಂ ಕುನ್ನಿಲ್ ವಹಿಸಿದರು. ಕೆ.ಪಿ. ಕುಂಞಕೃಷ್ಣನ್, ಕೆ. ನೀಲಕಂಠನ್, ಪಿ.ಕೆ. ಫೈಸಲ್, ಸುಂದರ ಆರಿಕ್ಕಾಡಿ, ಸಿವಿ ಜೇಮ್ಸ್, ವಿನೋದ್ ಕುಮಾರ್ ಪಿಳೈಯಿಲ್ವೀಡ್, ಬಾಲಕೃಷ್ಣನ್ ಪೆರಿಯ, ಕರುಣ್ ತಾಪ್ಪಾ, ಕೆಪಿ ಪ್ರಕಾಶನ್, ಗೀತಾ ಕೃಷ್ಣನ್, ಕೆ. ಸ್ವಾಮಿ ಕುಟ್ಟಿ, ಉಮ್ಮರ್ ಬೋರ್ಕಳ, ಕೆ.ವಾರಿಜಾಕ್ಷನ್, ಕೆ. ಖಾಲೀದ್, ಸಾಜೀದ್ ಮೌವ್ವಾಲ್, ಶಾರದಾ ವೈ, ಹರ್ಷಾದ್, ಆನಂದ ಮವ್ವಾರ್,ನಾಸರ್ ಮೊಗ್ರಾಲ್, ಮಂಜುನಾಥ ಆಳ್ವ ಮೊದಲಾವರು ಮಾತನಾಡಿದರು. ಸೋಮ ಶೇಖರ್ ಶೇಣಿ ಸ್ವಾಗತಿಸಿ ಬಿಎಸ್ ಗಾಂಭೀರ ವಂದಿಸಿದರು.
ಇದೇ ಸಂದರ್ಭದಲ್ಲಿ ಸಂಘಟನ ಸಮಿತಿಯನ್ನು ರಚಿಸಲಾಯಿತು. ಸಮಿತಿ ಅಧ್ಯಕ್ಷರಾಗಿ ಸೋಮಶೇಖರ್ ಶೇಣಿ, ಸಂಚಾಲಕರಾಗಿ ಸುಂದರ ಆರಿಕ್ಕಾಡಿ, ಹರ್ಷಾದ್, ಆನಂದ ಮೌವಾರ್, ಕೋಶಾಧಿಕಾರಿಯಾಗಿ ಮಂಜುನಾಥ ಆಳ್ವ ರವರನ್ನು ಆಯ್ಕೆ ಮಾಡಲಾಯಿತು. ನ. 8ರಂದು ಅಪರಾಹ್ನ 3 ಗಂಟೆಗೆ ಪೆರ್ಲದಲ್ಲಿ ಆರಂಭವಾಗುವ ಕೆ. ಸುಧಾಕರನ್ ನೇತೃತ್ವದ ಉತ್ತರ ವಲಯ ವಾಹನ ಪ್ರಚಾರ ಜಾಥವನ್ನು ಕೆಪಿಸಿಸಿ ಮಾಜೀ ಅಧ್ಯಕ್ಷ ಎಂ.ಎಂ. ಹಸ್ಸನ್ ಉದ್ಘಾಟಿಸಲಿದ್ದು ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ.