ಚೆನ್ನೈ: ದ್ರಾವಿಡ ಚಳವಳಿಯ ರೂವಾರಿ, ವಿಚಾರವಾದಿ ಪೆರಿಯಾರ್ 1971ರಲ್ಲಿ ಸೀತೆ ಮತ್ತು ಶ್ರೀರಾಮನ ಬೆತ್ತಲೆ ಫೋಟೋಗಳ ಮೆರವಣಿಗೆ ನಡೆಸಿದ್ದರು ಎಂಬ ಹೇಳಿಕೆ ನೀಡಿದ್ದ ನಟ ರಜನಿಕಾಂತ್ ಕ್ಷಮೆಯಾಚಿಸುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು. ಈ ವಿವಾದ ಮುಂದುವರಿದಿರುವ ನಡುವೆಯೇ ಚೆಂಗಲ್ ಪೇಟೆಯ ಕಲಿಯಾಪಟ್ಟೈ ಗ್ರಾಮದಲ್ಲಿದ್ದ ಪೆರಿಯಾರ್ ಪ್ರತಿಮೆಯನ್ನು ಭಗ್ನಗೊಳಿಸಿರುವ ಘಟನೆ ಶುಕ್ರವಾರ ನಡೆದಿದೆ.
ಪೆರಿಯಾರ್ ಪ್ರತಿಮೆಯ ಬಲ ಕೈ ಹಾಗೂ ಮುಖವನ್ನು ಒಡೆದು ಹಾಕಿರುವುದನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ತಮಿಳು ಮ್ಯಾಗಜೀನ್ ತುಘಲಕ್ 50ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಟ ರಜನಿಕಾಂತ್ ಅವರು, 1971ರಲ್ಲಿ ಸೇಲಂನಲ್ಲಿ ಪೆರಿಯಾರ್ ರಾಮಸ್ವಾಮಿ ಅವರು ಬೃಹತ್ ರಾಲಿ ನಡೆಸಿ, ಶ್ರೀರಾಮಚಂದ್ರ ಹಾಗೂ ಸೀತೆಯ ನಗ್ನ ಫೋಟೋ ಮೆರವಣಿಗೆ ಮಾಡಿಸಿದ್ದರು. ಆದರೆ ಈ ಬಗ್ಗೆ ಯಾವ ಪತ್ರಿಕೆಯೂ ವರದಿ ಮಾಡಿಲ್ಲವಾಗಿತ್ತು. ಆದರೆ ತುಘಲಕ್ ಪತ್ರಿಕೆ ಮಾತ್ರ ವರದಿ ಮಾಡಿ ಟೀಕಿಸಿತ್ತು ಎಂದು ಹೇಳಿದ್ದರು.
ಈ ಹೇಳಿಕೆ ಬಗ್ಗೆ ತಮಿಳುನಾಡಿನಲ್ಲಿ ಆಕ್ರೋಶವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ರಜನಿಕಾಂತ್ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದರು. ನಾನು ಪತ್ರಿಕೆಯಲ್ಲಿ ಬಂದ ವರದಿ ಬಗ್ಗೆ ಮಾತನಾಡಿದ್ದೇನೆ. ಅಂದು ಘಟನೆ ನಡೆದಿದ್ದು ಸತ್ಯ, ಈಗ ಮರೆತಿದ್ದಾರೆ. ಹೀಗಾಗಿ ನಾನು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದರು.