Advertisement

ಪೆರಿಯಾರ್ ಗ್ರಾಮದ ಭೂ ವಿವಾದ ಹಾಗೂ ದೌರ್ಜನ್ಯದ ಬಗ್ಗೆ ವಾರದಲ್ಲಿ ವರದಿ ನೀಡಲು ಆದೇಶ

09:32 PM Feb 28, 2022 | Team Udayavani |

ಹುಣಸೂರು : ತಾಲೂಕಿನ ಪೆರಿಯಾರ್(ಮಾರಪ್ಪನಕಟ್ಟೆ) ಗ್ರಾಮದ ಪೌರಕಾರ್ಮಿಕರ ಕಾಲೋನಿಯ ಜಮೀನು ವಿವಾದ ಹಾಗೂ ದೌರ್ಜನ್ಯ ಸಂಬಂಧ ವಾರದೊಳಗೆ ವರದಿ ನೀಡುವಂತೆ ರಾಜ್ಯ ಸಫಾರಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಆದೇಶಿಸಿದರು.

Advertisement

ತಾಲೂಕಿನ ಬಿಳಿಕೆರೆ ಹೋಬಳಿಯ (ಪೆರಿಯಾರ್)ಮಾರಪ್ಪನಕಟ್ಟೆಯ ಪೌರಕಾರ್ಮಿಕ ಕುಟುಂಬಗಳು ಕಳೆದ 40-50ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಮೈಸೂರಿನ ಸರಕಾರಿ ನೌಕರನ ಪತ್ನಿ ದೇವಮ್ಮ ಎಂಬುವವರು ಅಕ್ರಮವಾಗಿ ಅತಿಕ್ರಮಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆಂಬ ಹಾಗೂ ಈ ಸಂಬಂಧ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ಅನ್ಯಾಯವಾಗಿದ್ದು. ಆಯೋಗದ ಅಧ್ಯಕ್ಷರಿಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಭೇಟಿ ನೀಡಿ, ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಎಂ.ಶಿವಣ್ಣನವರು ಸಮಸ್ಯೆಗಳನ್ನು ಆಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಮಾಯಕರ ವಿರುದ್ದ ಪ್ರಕರಣ : ರಾಜ್ಯ ಪೌರಕಾರ್ಮಿಕರ ಸಂಘದ ಅಧ್ಯಕ್ಷ, ಶ್ರೀರಂಗಪಟ್ಟಣ ಪುರಸಭೆ ಮಾಜಿ ಅಧ್ಯಕ್ಷರಾದ ಕೃಷ್ಣ ಮಾತನಾಡಿ ಗ್ರಾಮದಲ್ಲಿ 22ಪೌರಕಾರ್ಮಿಕ ಕುಟುಂಬಗಳಿದ್ದು, ಎಲ್ಲ ಕುಟುಂಬಗಳು 40ವರ್ಷಗಳ ಹಿಂದೆಯೇ ಕಾಡುಕಡಿದು ಭೂಮಿಯನ್ನು ಸಾಗುವಳಿ ಮಾಡುತ್ತಿದ್ದರು. ಕೆಲವರಿಗೆ 1974-75ರಲ್ಲಿ ಸಾಗುವಳಿ ಸಿಕ್ಕಿದೆ. ಹಲವರು ಅಜ್ಞಾನದಿಂದಾಗಿ ಇನ್ನೂ ಅರ್ಜಿ ಹಾಕಿಲ್ಲ. ಈ ವೇಳೆ ಮೈಸೂರು ಮೂಲದ ಸರಕಾರಿ ನೌಕರನ ಪತ್ನಿ ದೇವಮ್ಮ ಎಂಬುವವರು ಅಕ್ರಮವಾಗಿ ಗ್ರಾಮದ ಕೆಲವರ 8ಎಕರೆ ಭೂಮಿಯನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಗ್ರಾಮದವರು ಪ್ರಶ್ನಿಸಲು ಹೋದರೆ ಅವರ ಮೇಲೆ ವಿನಾಕಾರಣ ಹಲ್ಲೆ ನಡೆಸಿ, ಬಿಳಿಕೆರೆ ಠಾಣೆಯಲ್ಲಿ ಅಮಾಯಕರ ವಿರುದ್ದವೇ ಪ್ರಕರಣ ದಾಖಲಿಸಿದ್ದಾರೆ.

ಅಲ್ಲದೆ ಕಂದಾಯ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಅಕ್ರಮ ದಾಖಲೆ ಮಾಡಿಸಿಕೊಂಡು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರೂ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಆದೇಶಿಸಿದ್ದರೂ ಪೊಲೀಸರ ಬೆಂಬಲದೊಂದಿಗೆ ಕೃಷಿ ಮಾಡಲು ಹೊರಟಿದ್ದನ್ನು ಪ್ರಶ್ನಿಸಿದರೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ 11ಮಹಿಳೆಯರ ವಿರುದ್ದ ಪ್ರಕರಣ ದಾಖಲಿಸಿದ್ದರೆ, ನಮ್ಮವರು ನೀಡಿದ ದೂರನ್ನೇ ಪಡೆಯದೆ ನಮ್ಮ ವಿರುದ್ದವೇ ದೌರ್ಜನ್ಯವೆಸಗಿ ಅಮಾನವೀಯವಾಗಿ ಇನ್ಸ್‍ಪೆಕ್ಟರ್ ನಿಂದಿಸಿ, ಬೆದರಿಸಿ ಕಳುಹಿಸಿದ್ದಾರೆ. ನಮ್ಮ ಜಮೀನಿಗೆ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರ ವಿರುದ್ದವೂ ಸಹ ಪ್ರಕರಣ ದಾಖಲಾಗಿದೆ ಎಂದು ಆರೋಪಿಸಿದರು.

ತಪ್ಪಿತಸ್ಥರ ವಿರುದ್ದ ಕ್ರಮವಾಗಲಿ :
ಕೊಡಗು ಜಿಲ್ಲಾಧ್ಯಕ್ಷ ಪಳನಿಪ್ರಕಾಶ್ ಇಲ್ಲಿ ಮುಗ್ದಜನರಿಗೆ ಕಾನೂನಿನ ಅರಿವಿಲ್ಲ. ಭಯದಿಂದ ಬದುಕುತ್ತಿದ್ದಾರೆ. ದೌರ್ಜನ್ಯ ನಡೆಸಿರುವ ಪೊಲೀಸರ ವಿರುದ್ದ ಕ್ರಮವಾಗಲಿ ಎಂದರೆ. ಅಪ್ಪಣ್ಣಯ್ಯ ಹಿಂದಿನ ಕಂದಾಯ ಅಧಿಕಾರಿ, ಸರ್ವೆಯರ್‍ಗಳ ಕುಮ್ಮಕ್ಕಿನಿಂದ ದಾಖಲೆ ನಿರ್ಮಿಸಲು ನೆರವಾಗಿದ್ದು, ಇವರುಗಳ ವಿರುದ್ದ ಕ್ರಮವಾಗಲೆಂದು ಕೋರಿದರು.

Advertisement

ಭಯವಿದೆ ಊರು ತೊರೆಯಲು ನೆರವಾಗಿ :
ಗ್ರಾಮದ ಪೌರಕಾರ್ಮಿಕ ಮುಖಂಡರಾದ ಕರ್ಪಯ್ಯ, ಕುಪ್ಪರಾಜ್, ಪಳನಿಸ್ವಾಮಿ,ರವಿಚಂದ್ರನ್, ಸುರೇಶ್ ಮತ್ತಿತರರು ಇಲ್ಲಿ ನಮ್ಮ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ.ಪೊಲೀಸ್ ಠಾಣೆಯಲ್ಲಿ ನಮಗೆ ನ್ಯಾಯ ಸಿಗುತ್ತಿಲ್ಲ. ನಮ್ಮ ಭೂಮಿ ನಮಗೆ ಬಿಡಿಸಿಕೊಡಿ, ಪೊಲೀಸರ ಮೊಕದಮ್ಮೆ ಹಿಂಪಡೆದು ಅಮಾಯಕರಾದ ನಮ್ಮನ್ನು ಪಾರುಮಾಡಿ, ಇಲ್ಲದಿದ್ದಲ್ಲಿ ಊರನ್ನೇ ತೊರೆಯುತ್ತೇವೆ, ನ್ಯಾಯಾಲಯದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದ್ದರೂ ಬಿಳಿಕೆರೆ ಪೊಲೀಸರು ದೇವಮ್ಮರ ಪರವಾಗಿ ನಿಂತಿದ್ದಾರೆಂದರು.

ಭಯಬಿಡಿ, ನಿಮ್ಮೊಂದಿಗೆ ಆಯೋಗವಿದೆ : ನಿಮ್ಮ ಭೂಮಿ ಸಮಸ್ಯೆ ಹಾಗೂ ಪೊಲೀಸ್ ದೌರ್ಜನ್ಯದ ಬಗ್ಗೆ ಸಂಪೂರ್ಣ ಮನವರಿಕೆಯಾಗಿದೆ. ಪೌರಕಾರ್ಮಿಕರ ವಿಚಾರದಲ್ಲಿ ಪ್ರತ್ಯೇಕ ಕಾನೂನಿದೆ. ಯಾರೇ ತಪ್ಪೆಸಗಿದ್ದರೂ ಅವರ ವಿರುದ್ದ ಕ್ರಮ ಗ್ಯಾರೆಂಟಿ, ಈ ಸಂಬಂಧ ಗೃಹ,ಕಂದಾಯ ಸಚಿವರೊಂದಿಗೆ ಶೀಘ್ರವೇ ಚರ್ಚಿಸಿ ಅಗತ್ಯ ಕ್ರಮವಹಿಸುತ್ತೇನೆ. ಈ ಭೂವಿವಾದ, ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಇ.ಓ. ಸಮಾಜಕಲ್ಯಾಣಾಧಿಕಾರಿ ಹಾಗೂ ಡಿವೈಎಸ್‍ಪಿಯವರುಗಳು ಸಮಗ್ರ ತನಿಖೆ ನಡೆಸಿ ವಾರದೊಳಗೆ ವರದಿ ನೀಡುವಂತೆ ಸೂಚಿಸಿದ್ದೇನೆ. ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡೊಲ್ಲ. ನೀವು ಗ್ರಾಮ ತೊರೆಯುವ ಅವಶ್ಯವಿಲ್ಲವೆಂದು ಅಭಯ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಡಾ.ಅಶೋಕ್, ತಾ.ಪಂ.ಇಓ ಗಿರೀಶ್, ಸಮಾಜಕಲ್ಯಾಣಾಧಿಕಾರಿ ಮೋಹನ್‍ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಲಕ್ಷಿ, ಪಿಡಿಓ ಛಾಯಾದೇವಿ, ಸಫಾಯಿ ಕರ್ಮಾಚಾರಿ ಸಮಿತಿ ಸದಸ್ಯರಾದ ಮಹೇಶ್, ಲಕ್ಷ್ಮಿ, ಶಾರದಮ್ಮ,ಮುಖಂಡರಾದ ಪೆರುಮಾಳ್, ಶಿವಣ್ಣ ಸೇರಿದಂತೆ ಅನೇಕ ಮುಖಂಡರು ಹಾಗೂ ಪೌರಕಾರ್ಮಿಕ ಕುಟುಂಬದವರು, ಅಂಬೇಡ್ಕರ್ ಅಭಿವೃದ್ದಿ ನಿಗಮದ ಎಂ.ಡಿ.ಮುನಿರಾಜು, ಜಿಲ್ಲಾ ಸಫಾಯಿ ಕರ್ಮಾಚಾರಿಗಳ ಅಭಿವೃದ್ದಿ ನಿಗಮದ ಚಂದ್ರು, ಕಾರ್ಮಿಕ ಅಧಿಕಾರಿ ಲಕ್ಷ್ಮೀಶ್ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next