Advertisement
ಮಗುವೊಂದು ಹುಟ್ಟಿದರೆ ಮನೆಯಲ್ಲಿ ಹೂವೊಂದು ಅರಳಿದಂತೆ! “ಕಂದನ ತಲೇನ ಮೂಸಿ ನೋಡು, ಹೇಗೆ ಘಮ್ ಅಂತಿದೆ!’ ಎಂದು ಹೇಳುವ ಅಜ್ಜಿಯರನ್ನು ನೀವು ಕಂಡಿರಬಹುದು. ಇದನ್ನು ಕೇಳಿದ ತಾಯಿ, ಅತ್ಯಂತ ಸುವಾಸನೆಯ ಹೂವೊಂದು ನನ್ನ ಪಕ್ಕ ಇದೆಯೆಂದು ಪುಳಕಿತಳಾಗುತ್ತಾಳೆ. ಪುಟ್ಟ ಮಗುವನ್ನು ಎತ್ತಿಕೊಂಡು ಆಘ್ರಾಣಿಸುವ ಅದೆಷ್ಟೋ ಮಂದಿಯನ್ನು ನೀವು ಗಮನಿಸಿರಬಹುದು. ಶಿಶುವಿಗೆ ಇಂಥ ಸುವಾಸನೆ ಬಂದಿದ್ದಾದರೂ ಹೇಗೆ?
Related Articles
Advertisement
ಶಿಶುವಿನ ನರುಗಂಪು ತಾಯಿಯ ಮೆದುಳಿನ “ಡೊಪಮೈನ್’ ಹಾರ್ಮೋನ್‌ನನ್ನು ಪ್ರಚೋದಿಸುತ್ತದೆ. ಇದು ತಾಯಿಯಲ್ಲಿ ಆನಂದ, ಆಹ್ಲಾದವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ಡ್ರಗ್‌ಗಿಂತಲೂ ಮಿಗಿಲಾದ ಸಂತೋಷವನ್ನು ನೀಡುತ್ತದಂತೆ! ಯಾವುದೇ ಪರಿಶ್ರಮದ ಕೆಲಸದಿಂದ ದಣಿದಿರಲಿ. ಸುಸ್ತಾಗಿರಲಿ, ಮಗುವಿನತ್ತ ಧಾವಿಸಿ ಬರುವಂತೆ ಪ್ರೇರೇಪಿಸುತ್ತದೆ. ಆದರೆ, ಈ ಸುವಾಸನೆಯು ಆರು ವಾರಗಳ ನಂತರ ಕುಗ್ಗುತ್ತಾ ಹೋಗುತ್ತದೆ. ಇದು ವೈಜಾnನಿಕ ಸತ್ಯ! ಅದೆಷ್ಟೇ ಹೆರಿಗೆ ನೋವು ಅನುಭವಿಸಿದ್ದರೂ, ಸಿಸೇರಿಯನ್ ಆಪರೇಷನ್ ಆಗಿ ದೇಹ ವಿಶ್ರಾಂತಿಯನ್ನು ಬಯಸುತ್ತಿದ್ದರೂ, ಮಗುವನ್ನು ಬಾಚಿ ತಬ್ಬಿಕೊಂಡು ಎದೆಗಾನಿಸಿಕೊಳ್ಳಲು ಮಾತೃಹೃದಯ ಕಾತರಿಸುತ್ತದೆ. ನಿದ್ದೆ, ಹಸಿವು, ಬಳಲಿಕೆ, ನೋವು ಯಾವುದನ್ನೂ ಲೆಕ್ಕಿಸದೆ ತಾಯಿ ಮಗುವನ್ನು ಅಪ್ಪಿಕೊಳ್ಳುತ್ತಾಳೆ; ಮುದ್ದಾಡುತ್ತಾಳೆ; ಆಘ್ರಾಣಿಸುತ್ತಾಳೆ. ಅಪಾರ ನೆಮ್ಮದಿ, ಸಂತೃಪ್ತಿಯನ್ನು ಕಂಡುಕೊಳ್ಳುತ್ತಾಳೆ. ಅನಿರ್ವಚನೀಯ ಆನಂದವನ್ನು ಅನುಭವಿಸುತ್ತಾಳೆ. ಹಾಗೆಯೇ ಶಿಶುವಿಗೂ ತಾಯಿಯ ಸಾಮೀಪ್ಯ, ವಾಸನೆ ಅತ್ಯಂತ ಹಿತವೆನಿಸುತ್ತದೆ.—-
ಗಂಡಸರಿಗೆ ಪರಿಮಳ ಗೊತ್ತಾಗಲ್ವಾ?
ಮಗು ಹುಟ್ಟಿದ ಸಂದರ್ಭದಲ್ಲಿ ಮಗುವಿನ ಶರೀರದಲ್ಲಿ ಉಳಿದಿರಬಹುದಾದ ಗರ್ಭಪೊರೆಯಲ್ಲಿನ ಅಮ್ನಾಟಿಕ್ ದ್ರವ ಅಥವಾ ವರ್ನಿಕ್ ಕೇಸಿಯೋಸಾ (ಹೊಟ್ಟೆಯಲ್ಲಿದ್ದಾಗ ಮಗುವನ್ನು ಆವರಿಸುವ ಬೆಣ್ಣೆಯಂಥ ವಸ್ತು)ದಿಂದ ಈ ಸುವಾಸನೆ ಹೊರಹೊಮ್ಮುತ್ತದಂತೆ. ತಾಯಿ- ಮಗುವಿನ ಬಾಂಧವ್ಯವು ಗಾಢವಾಗಿದ್ದಾಗ ಮಾತ್ರ ಈ ಸುವಾಸನೆಯ ಅರಿವಾಗಬಲ್ಲದು ಎನ್ನುತ್ತಾರೆ ವಿಜ್ಞಾನಿಗಳು. ತಾಯಿಯಂತೆಯೇ, ತಂದೆಗೂ-ಶಿಶುವಿಗೂ ಸುವಾಸನೆಯ ಬಂಧವಿದೆಯೇ ಎಂಬುದರ ಬಗ್ಗೆಯೂ ವಿಜ್ಞಾನಿಗಳು ಸಂಶೋಧನೆ ಮುಂದುವರಿಸಿದ್ದಾರೆ! – ರಾಜೇಶ್ವರಿ ಜಯಕೃಷ್ಣ