Advertisement

ಮನರಂಜಿಸಿದ ಗಾನ ವೈಭವ

06:00 AM Sep 28, 2018 | |

ಯಕ್ಷಸಮೂಹ ಯಕ್ಷಗಾನ ಕಲಾ ಪ್ರತಿಷ್ಠಾನ(ರಿ.) ಕೆಳ ಕುಂಜಾಲು, ನೀಲಾವರ ಇದರ ದಶಮಾನೋತ್ಸವದ ಪ್ರಯುಕ್ತ ಸಮೂಹ ಸಡಗರ-18 ಇದರ ಸರಣಿ ಕಾರ್ಯಕ್ರಮಗಳ ಅಂಗವಾಗಿ ತೆಂಕು ಮತ್ತು ಬಡಗುತಿಟ್ಟಿನ ಖ್ಯಾತ ಭಾಗವತರುಗಳಾದ ಸುರೇಶ ಶೆಟ್ಟಿ, ಶಂಕರನಾರಾಯಣ, ಉದಯಕುಮಾರ ಹೊಸಾಳ ಮತ್ತು ಭವ್ಯಶ್ರೀ ಹರಿ ಕುಲ್ಕುಂದ ಗಾನ ವೈಭವ ನಡೆಸಿಕೊಟ್ಟರು. ಮೊದಲಿಗೆ ಗಣಪತಿ ಸ್ತುತಿಯ “ಗಜಮುಖದವಗೆ…’ ಹಾಡನ್ನು ಭವ್ಯಶ್ರೀ ಆರಂಭಿಸಿ ಮುಂದೆ “ಒಳ್ಳಿತಾದವಲು…’ ಎಂಬಲ್ಲಿಂದ ಉಳಿದ ಇಬ್ಬರು ಭಾಗವತರು ಅದನ್ನು ಮುಂದುವರೆಸಿದರು. ಅನಂತರ ಮೂವರೂ ಒಡ್ಡೋಲಗದ ಪೀಠಿಕಾ ಪದ್ಯದಲ್ಲಿ ಶ್ರೀರಾಮ ಪಟ್ಟಾಭಿಷೇಕದ “ವೀರ ದಶರಥ ನೃಪತೀ…’ ಹಾಡನ್ನು (ಷಣ್ಮುಖಪ್ರಿಯ ರಾಗ, ತ್ರಿವುಡೆ ತಾಳ) ಭವ್ಯಶ್ರೀಯವರು ಹಾಡಿದರೆ, ಸುರೇಶರವರು ಅದೇ ತಾಳ ಮತ್ತು ಮಧ್ಯಮಾವತಿ ರಾಗದಲ್ಲಿ “ತುರಗವನ್ನು ಶೃಂಗರಿಸಿ…’ ಹಾಡನ್ನು ಹಾಡಿದ್ದು, ಉದಯ ಅವರು “ಮಂತ್ರಿ ಮಹಾವೀರ…’ ಹಾಡನ್ನು ಹಾಡಿ (ಕಾಂಬೋಜಿ ರಾಗ, ಝಂಪೆತಾಳ) ಮನ ರಂಜಿಸಿದರು. ಎರಡನೇ ಸುತ್ತಿನಲ್ಲಿ ಶೃಂಗಾರ ರಸದ “ನೋಡೇ ತಂಗಿ ಸುಲಲಿತಾಂಗಿ…’ (ಕನಕ ಕೌಮುದಿ) ಯನ್ನು ಭವ್ಯಶ್ರೀಯವರು, ಚಂದ್ರಹಾಸ ಚರಿತೆಯ ” ಅರೆರೇ ಏನು ಸೊಬಗು…'(ರಾಗ ಯಮನ್‌ಕಲ್ಯಾಣಿ, ಆದಿ ಏಕ ಕೋರೆ) ಅನ್ನು ಸುರೇಶರವರು ಮತ್ತು ಬಬ್ರುವಾಹನ ಕಾಳಗದ ಬಹಳ ಸುಂದರವಾದ ಚಿತ್ರಾಂಗದೆಯ “ಅಹುದೇ ಎನ್ನಯ ರಮಣ…'(ಆರಭಿ) ಹಾಡನ್ನು ಉದಯ ಅವರು ಸೊಗಸಾಗಿ ಪ್ರಸ್ತುತಪಡಿಸಿದರು. ಭಕ್ತಿ ರಸದಲ್ಲಿ- ಮನ್ಮಥೋಪಖ್ಯಾನದ “ಆಡಿದ ನಾಟ್ಯವ…’ಹಾಡನ್ನು ಭವ್ಯಶ್ರೀಯವರೂ, ಮಾಯಾಪುರಿ ಮಹಾತ್ಮೆಯ “ಪರಮ ಪುರುಷ ವಿಶ್ವಮೂರ್ತಿಯ…'(ಹಿಂದೋಳರಾಗ, ರೂಪಕ, ಏಕ ಕೋರೆ) ಹಾಡನ್ನು ಸುರೇಶ್‌ ಶೆಟ್ಟಿಯವರೂ ಹಾಗೂ ಭೀಷ್ಮ ಪರ್ವದ “ಶ್ರೀ ಮನೋಹರ ವಿಶ್ವ ಮೂರ್ತಿಯ…'(ಶುದ್ಧಸಾವೇರಿ, ಆದಿ ಏಕ ಕೋರೆ) ಹಾಡನ್ನು ಉದಯರವರೂ ಹಾಡಿ ಖುಷಿ ನೀಡಿದರು. ಕರುಣಾ ರಸದಲ್ಲಿ ಸುದರ್ಶನ ವಿಜಯದ “ಕರಿಯ ಪೊರೆದೆನಾ…’ ಭಾಮಿನಿಯನ್ನು ಹಾಡಿ, “ಮನ್ನಿಸೆನ್ನ ಅಪರಾಧವ…’ ರೇವತಿ ರಾಗ, ಚೌತಾಳದಲ್ಲಿ ಭವ್ಯಶ್ರೀಯವರು ಹಾಡಿದರೆ, ಕರ್ಣಾರ್ಜುನ ಕಾಳಗದ “ಅತುಲ ಬಲ ನಡೆ ತಂದು ಭಾಮಿನಿಯ ತರುವಾಯ “ಮಗನೇ ನಿನ್ನ…’ ಹಾಡನ್ನು ಉದಯರವರು ಆನಂದ ಭೈರವಿ, ಕೋರೆ ತಾಳದಲ್ಲಿ ಪ್ರಸ್ತುತ ಪಡಿಸಿದರು. ಮುಂದೆ ಭಾಮಿನಿ ಸುತ್ತಿನಲ್ಲಿ ವೀರಮಣಿ ಕಾಳಗದ “ಪುರಹರನು ಮನದೊಳಗೆ ಯೋಚಿಸಿ….’ ಈ ಭಾಮಿನಿಯನ್ನು ಭವ್ಯಶ್ರೀಯವರು ಹಾಡಿದ ನಂತರ ಸುರೇಶ ಮತ್ತು ಉದಯರವರು ಒಟ್ಟಾಗಿ ಭೀಷ್ಮ ವಿಜಯದ “ಪರಮ ಋಷಿ ಮಂಡಲ….’ ಹಾಡನ್ನು ಹಾಡಿ ತಮ್ಮ ಪ್ರತಿಭೆ ಮೆರೆದರು. ಕೊನೆಯದಾಗಿ ವೀರರಸ ಮತ್ತು ಏರು ಪದ್ಯಗಳನ್ನು ಕೆಲವೊಂದು ಪ್ರಸಂಗಗಳಿಂದ ಆಯ್ದುಕೊಂಡು ಹಾಡಿದರು. ಒಟ್ಟಿನಲ್ಲಿ ಈ ಮೂವರೂ ತಮ್ಮ ಸೊಗಸಾದ ಕಂಠ ಸಿರಿಯಿಂದ ನೆರೆದ ಯಕ್ಷಪ್ರೇಮಿಗಳ ಮನಸೂರೆಗೊಂಡರು. “ಮಾರನ‌ಯ್ಯನ ಮಾತ…’ ಮೋಹನ ರಾಗ, ಅಷ್ಟ ತಾಳದ ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ಮಂಗಲವನ್ನಿತ್ತರು. ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಮತ್ತು ಅಕ್ಷಯ ರಾವ್‌ ವಿಟ್ಲ ಹಾಗೂ ಚೆಂಡೆಯಲ್ಲಿ ಶ್ರೀನಿವಾಸ ಪ್ರಭು ಸಹಕರಿಸಿದರು. ಪ್ರೊ| ಎಸ್‌. ವಿ. ಉದಯಕುಮಾರ್‌ ಶೆಟ್ಟಿಯವರು ಕವಿ ಕಾವ್ಯವನ್ನು ರಾಗ, ತಾಳ ಸಹಿತ ಕಾರ್ಯಕ್ರಮದ ನಿರೂಪಣೆ ಮಾಡಿದರು. 

Advertisement

 ಕೆ. ದಿನಮಣಿ ಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next