ಹುಮನಾಬಾದ: ನಿರ್ದಿಷ್ಟ ಗುರಿ, ಅನುಭವಿ ಗುರುವಿನ ಮಾರ್ಗದರ್ಶನದ ಜೊತೆಯಲ್ಲಿ ನಿರಂತರ ಪರಿಶ್ರಮ ಪಡುವ ವ್ಯಕ್ತಿ ಜೀವನದಲ್ಲಿ ಅಸಾಧ್ಯವಾದದ್ದನ್ನು ಸಾಧಿಸಬಲ್ಲ ಎಂದು ಸಾಹಿತಿ ಡಾ|ಚಿದಾನಂದ ಚಿಕ್ಕಮಠ್ ಹೇಳಿದರು.
ಹಳ್ಳಿಖೇಡ(ಕೆ) ಹತ್ತಿರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಇಂಗ್ಲಿಷ್, ಗಣಿತ, ವಿಜ್ಞಾನ ಒಳಗೊಂಡಂತೆ ಯಾವೊಂದು ವಿಷಯಗಳೂ ಕಠಿಣವಲ್ಲ. ಆ ಮನಸ್ಥಿತಿಗೆ ನಮ್ಮಲ್ಲಿನ ಪೂರ್ವಾಗ್ರಹ ಪೀಡಿತ ಯೋಚನೆಯೇ ಕಾರಣ. ಪುಸ್ತಕಗಳನ್ನು ನಾವು ಪ್ರೀತಿಸಿದರೆ ಅವು ನಮ್ಮನ್ನು ಪ್ರೀತಿಸುತ್ತವೆ. ಸರ್ಕಾರ ಬಡ ಹಾಗೂ ಹಿದುಳಿದ ವರ್ಗದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಏನೆಲ್ಲ ಸೌಲಭ್ಯ ಕಲ್ಪಿಸಿದೆ. ವಿದ್ಯಾರ್ಥಿಗಳು ಅದರ ಸದ್ಬಳಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೀಂದ್ರಪ್ಪ ಪೋಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಾಚಿಸುವಂತಹ ನೂತನ ಕಟ್ಟಡ ನಿರ್ಮಾಣಕ್ಕೆ ಈ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ರಾಜಶೇಖರ ಪಾಟೀಲ ಅವರೆ ಕಾರಣ. ಮಕ್ಕಳು ವ್ಯರ್ಥ ಕಾಲಹರಣ ಮಾಡದೇ ಕೇವಲ ಓದಿನತ್ತ ಚಿತ್ತ ಹರಿಸಬೇಕು. ಗ್ರಾಪಂ ವತಿಯಿಂದ ಸಾಧ್ಯವಾದ ನೆರವು ಕೊಡಲು ಯಾವತ್ತೂ ಸಿದ್ಧವಿರುವುದಾಗಿ ಹೇಳಿದರು.
ವಕೀಲರ ಸಂಘದ ಕೋಶಾಧ್ಯಕ್ಷ ವಿಜಯಕುಮಾರ ನಾತೆ, ಗ್ರಾಮದ ಗಣ್ಯ ಸುಭಾಷ ವಾರದ, ತಾಲೂಕು ದೈಹಿಕ ಶಿಕ್ಷಣ ಶಿಕಣಾಧಿಕಾರಿ ಶ್ರವಣಕುಮಾರ ಭೂತಾಳೆ, ಅನುಭವಿ ಶಿಕ್ಷಕ ರಮೇಶ ರಾಜೋಳೆ, ಮಲ್ಲಿಕಾರ್ಜುನ ಬಿರಾದಾರ ಮಾತನಾಡಿದರು. ಪ್ರಾಚಾರ್ಯ ಫುಲಸಿಂಗ್ ರಾಠೊಡ್ ಅಧ್ಯಕ್ಷತೆ ವಹಿಸಿದ್ದರು.
ಪಾಲಕರ ಪ್ರತಿನಿಧಿ ಧೂಳಪ್ಪ ಸಾಗರ್, ಸವಿತಾ ಹೊನ್ನಾ, ಸುರೇಖಾ ಧೋತ್ರೆ, ಬಸವರಾಜ ಸ್ಥಾವರ ಮಠ್, ನರನಾಳ ಮಲ್ಲಿಕಾರ್ಜುನ ಇದ್ದರು. ಸೋಪಾ ಸ್ವಾಗತಿಸಿದರು. ಎಸ್.ಮಂಜುಳಾ ವಾರ್ಷಿಕ ವರದಿ ಮಂಡಿಸಿದರು. ಜ್ಯೋತಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಸ್ವಾಮಿ ಮತ್ತು ಮೈಲಾರಿ ಬುಕ್ಕಾ ನಿರೂಪಿಸಿದರು. ಆನಂದ ವಂದಿಸಿದರು.