Advertisement

ದುರ್ಬಲರ ಆರೋಗ್ಯ ತಪಾಸಣೆ ಮಾಡಿ

11:26 AM Jul 22, 2020 | Suhan S |

ದಾವಣಗೆರೆ: ಕೋವಿಡ್ ದಿಂದ ಮರಣ ಪ್ರಮಾಣ ತಗ್ಗಿಸಲು ದುರ್ಬಲ ವರ್ಗದವರ ಸರ್ವೇ ಮಾಡಿ ಆರೋಗ್ಯ ತಪಾಸಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಆರೋಗ್ಯಅಭಿಯಾನದ ಜಿಲ್ಲಾ ಆರೋಗ್ಯ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ದಿಂದ ಉಂಟಾಗುವ ಮರಣ ತಗ್ಗಿಸಲು ದುರ್ಬಲ ವರ್ಗದವರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದರು.

ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಕೇವಲ ಕಂಟೇನ್ಮೆಂಟ್‌ ಮತ್ತು ಬಫರ್‌ ವಲಯಗಳು ಮಾತ್ರವಲ್ಲದೆ ಆರೋಗ್ಯ ಇಲಾಖೆಗೆ ಮಾಹಿತಿ ಇರುವ ದುರ್ಬಲ ವರ್ಗ ಎಂದು ಪರಿಗಣಿಸಲಾಗುವ ಶುಗರ್‌, ಬಿಪಿ, ಟಿಬಿ, ಕಿಡ್ನಿ ಸಮಸ್ಯೆ, ಕ್ಯಾನ್ಸರ್‌ ರೋಗಗಳನ್ನು ಹೊಂದಿರುವವರನ್ನು ಪರೀಕ್ಷೆಗೊಳಪಡಿಸಿ ಸೂಕ್ತ ಚಿಕಿತ್ಸೆ ನೀಡಿ ಸಾವಿನ ಸಂಭವದಿಂದ ಅವರನ್ನು ಪಾರು ಮಾಡಬೇಕು ಎಂದರು.

ಜಿಲ್ಲೆಯಾದ್ಯಂತ ಒಂದು ವಾರದೊಳಗೆ ಅವರ ಮನೆ ಮನೆಗೆ ತೆರಳಿ ಸರ್ವೇ ಮಾಡಿ, ಅವರ ಆರೋಗ್ಯ ಕುರಿತು ಮಾಹಿತಿ ಪಡೆದು ಸೂಕ್ತ ಸಲಹೆ ನೀಡುವ ಮೂಲಕ ನಿಗಾದಲ್ಲಿ ಇಡಬೇಕು. ಅಂತಹವರಿಗೆ ಕೋವಿಡ್ ಸೋಂಕು ತಗುಲಿದರೆ ಉಳಿಸುವುದು ಕಷ್ಟಸಾಧ್ಯವಾಗುವ ಹಿನ್ನೆಲೆಯಲ್ಲಿ ಈ ವಿಷಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಸಿದರು.

ಖಾಸಗಿ ಆಸ್ಪತ್ರೆಗಳಿಗೆ ಬರುವಂತಹ ನಾನ್‌ ಕೋವಿಡ್‌ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಎಬಿ-ಎಆರ್‌ಕೆ ಕಾರ್ಡ್‌ದಾರರು, ಬಿಪಿಎಲ್‌ ಕಾರ್ಡ್‌ದಾರ ನಾನ್‌ ಕೋವಿಡ್‌ ರೋಗಿಗಳನ್ನು ಎಷ್ಟೊತ್ತಿಗೆ ಬಂದರೂ ಅಡ್ಮಿಟ್‌ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲವಾದಲ್ಲಿ ಕೆಪಿಎಂಇ ಅಡಿ ನೋಂದಣಿ ರದ್ದುಗೊಳಿಸಲಾಗುವುದು. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಸಲಹೆ ನೀಡಿ ಸಹಕರಿಸಬೇಕು ಎಂದು ಎಚ್ಚರಿಕೆ ನೀಡಿದರು.

Advertisement

ಆರ್‌ಸಿಎಚ್‌ ಅಧಿಕಾರಿ ಡಾ| ಎಸ್‌.ಮೀನಾಕ್ಷಿ ಮಾತನಾಡಿ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಏಪ್ರಿಲ್‌ನಿಂದ ಗರ್ಭಿಣಿಯರ ದಾಖಲಾತಿ ಕಡಿಮೆ ಆಗಿದೆ. ಏಪ್ರಿಲ್‌ನಿಂದ ಇಲ್ಲಿಯವರೆಗೆ ಒಟ್ಟು 15 ತಾಯಿಂದಿರ ಮರಣ ಸಂಭವಿಸಿವೆ. 3 ಜನರು ಬೇರೆ ಜಿಲ್ಲೆಗೆ ಸೇರಿದವರಾಗಿದ್ದಾರೆ. 77 ಶಿಶು ಮರಣ ಸಂಭವಿಸಿದ್ದು, 41 ಹೊರ  ಜಿಲ್ಲೆಯದಾಗಿದ್ದರೆ 36 ಜಿಲ್ಲೆಯವರು. ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 1723 ಅಂಗನವಾಡಿಗಳ ಪೈಕಿ ಜೂನ್‌ ನಲ್ಲಿ ಒಂದು ವಾರ ವಿಶೇಷ ಆಂದೋಲನ ಮಾಡಿ 778 ಅಂಗನವಾಡಿಗಳ ಸುಮಾರು 46 ಸಾವಿರ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳಬೇಕು. ಚುಚ್ಚುಮದ್ದು ಕಾರ್ಯಕ್ರಮದಡಿ ಮಕ್ಕಳ ಚುಚ್ಚುಮದ್ದು ಪ್ರಮಾಣ ಲಾಕ್‌ಡೌನ್‌ ವೇಳೆ ಕಡಿಮೆಯಾಗಿದ್ದು ಇದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಎನ್‌ವಿಬಿಡಿಸಿಪಿ ಅಧಿಕಾರಿ ಡಾ| ನಟರಾಜ್‌ ಮಾತನಾಡಿ, ಜಿಲ್ಲೆಯಲ್ಲಿ ಜನವರಿಯಿಂದ ಜೂನ್‌ ವರೆಗೆ 2 ಮಲೇರಿಯಾ, 92 ಡೆಂಘೀ, 22 ಚಿಕೂನ್‌ ಗುನ್ಯಾ ಪ್ರಕರಣ ದೃಢಪಟ್ಟಿವೆ ಎಂದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಗಂಗಾಧರ್‌ ಮಾತನಾಡಿ, ಜನವರಿಯಿಂದ ಈವರೆಗೆ 940ಕ್ಷಯ ರೋಗ ಪ್ರಕರಣಗಳಿಗೆ ಚಿಕಿತ್ಸೆ, ಎಚ್‌ಐವಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಟಿಬಿ ರೋಗವುಳ್ಳವರನ್ನು ಸರ್ವೇ ಮಾಡಿ ಅವರಲ್ಲಿ ಏನಾದರೂ ಕೋವಿಡ್‌ ಲಕ್ಷಣಗಳಿವೆಯೇ ಎಂದು ಪರೀಕ್ಷಿಸಿ ಕ್ರಮ ಕೈಗೊಳ್ಳಬೇಕು. ಟಿಬಿ ಮತ್ತು ಎಚ್‌ಐವಿ ಪಾಸಿಟಿವ್‌ ಇರುವ ರೋಗಿಗಳು ಶೀತ, ಕೆಮ್ಮು, ಜ್ವರದಂತಹ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷé ವಹಿಸದೆ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು. ಡೆಂಘೀ ಹಾಗೂ ಸಾಂಕ್ರಮಿಕ ರೋಗ ತಡೆಗಟ್ಟಲು ಪರಿಣಾಮಕಾರಿ ಕ್ರಮಕ್ಕೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next