ಚಿಕ್ಕಂದಿನಲ್ಲಿ ನನಗಿದ್ದುದು ಒಂದೇ ಆಸೆ. ಅದು, ಪೊಲೀಸ್ ಇನ್ಸ್ ಪೆಕ್ಟರ್ ಆಗಬೇಕು ಅನ್ನುವುದು. ಇಂಥದೊಂದು ಆಸೆ ಜೊತೆಯಾಗಲು ಬಾಲ್ಯದಲ್ಲಿ ನಾನು ನೋಡಿದ ಸಿನಿಮಾಗಳೇ ಕಾರಣ. ಅದರಲ್ಲೆಲ್ಲ, ಕೇಡಿಗರ ಡೆನ್‌ಗೆ ನುಗ್ಗುತ್ತಿದ್ದ ಇನ್ಸ್ ಪೆಕ್ಟರ್ ವೇಷದ ನಾಯಕ, ಕೇಡಿಗಳನ್ನು ಹಿಗ್ಗಾಮುಗ್ಗಾ ಚಚ್ಚುತ್ತಿದ್ದುದು, ಕೇಡಿಗಳ ಕಾರ್ ಅನ್ನು ಪೊಲೀಸ್ ಎಂಬ ನಾಮಫಲಕ ಹೊಂದಿದ್ದ ಬೈಕ್ ಅಥವಾ ಜೀಪ್ ನಲ್ಲಿ ಹಿಂಬಾಲಿಸುತ್ತಿದ್ದುದನ್ನು ನಾನು ಕಣ್ಣೆವೆ ಮಿಟುಕಿಸದೆ ನೋಡುತ್ತಿದ್ದೆ. ಭವಿಷ್ಯದಲ್ಲಿ ನಾನೂ ಇನ್ಸ್ ಪೆಕ್ಟರ್ ಆಗಬೇಕು, ಸಿನಿಮಾದ ಹೀರೋ ರೀತಿಯಲ್ಲೇ ಕೇಡಿಗಳನ್ನು ಮಟ್ಟ ಹಾಕಬೇಕು ಎಂದೆಲ್ಲಾ ಕನಸು ಕಂಡಿದ್ದೆ.
ಅದ್ಸರಿ. ಇನ್ಸ್ ಪೆಕ್ಟರ್ ಆಗುವುದು ಹೇಗೆ? ಈ ಸಂಬಂಧವಾಗಿ, ಆ ದಿನಗಳಲ್ಲಿ ನಮಗಿದ್ದ ಅಂದಾಜೇ ಬೇರೆ ಇತ್ತು. ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಮುಗಿಸಿ, ಪೊಲೀಸ್ ಕಟಿಂಗ್ ಮಾಡಿಸಿಕೊಂಡು, ಚೆನ್ನಾಗಿ ಡ್ರಿಲ್ ಮಾಡುವುದನ್ನು ಕಲಿತು, ಪೊಲೀಸ್ ಇಲಾಖೆ ನಡೆಸುವ ರನ್ನಿಂಗ್ ರೇಸ್‌ನಲ್ಲಿ ನಾಲ್ಕು ಕಿಲೋಮೀಟರ್ ಓಡಿಬಿಟ್ಟರೆ, ಪೊಲೀಸ್ ಕೆಲಸ ಸಿಕ್ಕೇ ಸಿಗುತ್ತದೆ. 10 ವರ್ಷ ಪೊಲೀಸ್ ಆಗಿ ದುಡಿದರೆ, ನಂತರ ಎಎಸ್‌ಐ ಹುದ್ದೆಗೆ ಪ್ರಮೋಷನ್ ಪಡೆಯಬಹುದು. ಆನಂತರ ಮತ್ತೆ ಐದು ವರ್ಷ ಅದೇ ಹುದ್ದೆಯಲ್ಲಿ ಮುಂದುವರಿದು, ಆ ಸಮಯದಲ್ಲೇ ಇಲಾಖಾ ಪರೀಕ್ಷೆಗಳಲ್ಲಿ ಪಾಸ್ ಆಗಿಬಿಟ್ಟರೆ, ಇನ್ಸ್ ಪೆಕ್ಟರ್ ಹುದ್ದೆ ಸಿಕ್ಕೇ ಸಿಗುತ್ತದೆ ಎಂಬುದು ನನ್ನ ನಂಬಿಕೆಯಾಗಿತ್ತು. ಆದರೆ ಮುಂದೆ ಆಗಿದ್ದೇ ಬೇರೆ.
ನಾನೇನೋ ಡ್ರಿಲ್ ಮತ್ತು ರನ್ನಿಂಗ್ ರೇಸ್‌ನಲ್ಲಿ ಚೆನ್ನಾಗಿ ಅಭ್ಯಾಸ ಮಾಡಿದ್ದೆ. ಪೊಲೀಸ್ ನೇಮಕಾತಿಗೆ ಸಂಬಂಧಿಸಿದಂತೆ ಪತ್ರಿಕೆಯಲ್ಲಿ ಮಾಹಿತಿ ಪ್ರಕಟವಾದಾಗ, ಜಿಲ್ಲಾ ಕೇಂದ್ರಕ್ಕೂ ಹೋದೆ. ಆದರೆ, ನನ್ನ ಎತ್ತರ ನೋಡಿದ ಹಲವರು- “ಪೊಲೀಸ್ ಹುದ್ದೆಗೆ ಸೆಲೆಕ್ಟ್ ಆಗಬೇಕು ಅಂದರೆ, ಸ್ವಲ್ಪ ಜಾಸ್ತಿಯೇ ಉದ್ದ ಇರಬೇಕು. ನಿಮಗೆ ನಿಮ್ಮ ಹೈಟ್ ಕೈ ಕೊಡಬಹುದು’ ಅಂದರು. ಅಂಥದೇನೂ ಆಗಲಾರದು ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಅಷ್ಟೇ ಅಲ್ಲ, ಒಂದು ವೇಳೆ ಹೈಟ್‌ನ ವಿಷಯಕ್ಕೇ ನನಗೆ ಕಡಿಮೆ ಅಂಕಗಳು ಬಂದರೆ, ರನ್ನಿಂಗ್ ರೇಸ್‌ನಲ್ಲಿ ಜಾಸ್ತಿ ಅಂಕ ಪಡೆದು ಅದನ್ನು ಸರಿದೂಗಿಸಿಕೊಳ್ಳಬೇಕು ಎಂದೂ ನಿರ್ಧರಿಸಿದೆ.
ನಾವು ಅಂದುಕೊಂಡಂತೆಯೇ ಎಲ್ಲವೂ ಆಗುವುದಿಲ್ಲ ತಾನೇ? ನನ್ನ ವಿಷಯದಲ್ಲೂ ಹಾಗೇ ಆಯಿತು. ಅವತ್ತು ನನ್ನ ಎತ್ತರವೇ ನನಗೆ ಮುಳುವಾಯಿತು. ಪೊಲೀಸ್ ಹುದ್ದೆ ಸಿಗುವುದು ಸಾಧ್ಯವೇ ಇಲ್ಲ ಎಂದು ಅಲ್ಲಿದ್ದ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿಬಿಟ್ಟರು. ಡಿಗ್ರಿ ಮುಗಿಸಿ ಪರೀಕ್ಷೆ ಬರೆದು, ನೇರವಾಗಿ ಇನ್ಸ್ ಪೆಕ್ಟರ್ ಆಗಬಹುದು ಎಂದೂ ಹಲವರು ಹೇಳಿದರು. ಆದರೆ, ಇನ್ಸ್ ಪೆಕ್ಟರ್ ಆಗಬೇಕು ಅಂದರೂ ಹೈಟ್ ಇರಲೇಬೇಕು ಎಂಬ ಸಂಗತಿ ಕೂಡ ಆಗಲೇ ಅರಿವಿಗೆ ಬಂತು. ಮುಂದೆ ಮಾಡುವುದೇನು? ಹೊಟ್ಟೆಪಾಡು ನಡೆಯಲೇಬೇಕಲ್ಲವಾ? ಯಾವುದೋ ಒಂದು ನೌಕರಿ ಮಾಡಲೇಬೇಕಿತ್ತು.
ಆಗಲೇ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಕರೆದಿರುವ ಸಂಗತಿ ಕೂಡ ಗೊತ್ತಾಯಿತು. ಶ್ರದ್ಧೆಯಿಂದ ಪರೀಕ್ಷೆ ಬರೆದೆ. ಈ ಬಾರಿ ಅದೃಷ್ಟ ಕೈ ಕೊಡಲಿಲ್ಲ. ಎಸ್‌ಐ ಆಗದಿದ್ದರೆ ಏನಂತೆ, ಎಸ್‌ಡಿಎ ಆಗುವಲ್ಲಿ ಯಶಸ್ಸು ಪಡೆದೆ… ಈಗ ಯಾವುದೇ ಸಿನಿಮಾದಲ್ಲಿ ಇನ್ಸ್ ಪೆಕ್ಟರ್ ಪಾತ್ರಧಾರಿಯನ್ನು ನೋಡಿದರೂ ನಾನು ಕಂಡಿದ್ದ ಕನಸು ನೆನಪಾಗುತ್ತದೆ. ಅಂದುಕೊಂಡಂತೆ ಆಗಲಿಲ್ಲವಲ್ಲ ಅನ್ನಿಸಿ ಬೇಸರವೂ ಆಗುತ್ತದೆ.
ನಾಗೇಂದ್ರ ಅರಸ್, ಚಿತ್ರದುರ್ಗ