ಪುತ್ತೂರಿನ ಐ.ಡಿ.ಎ. ಸಭಾಭವನದಲ್ಲಿ ಪುತ್ತೂರಿನ ಸಪ್ತಸ್ವರ ಸಂಗೀತ ಕಲಾ ಶಾಲೆ ಹಾಗೂ ಕಾಮಾಕ್ಷಿ ಸಂಗೀತ ಕಲಾ ಶಾಲೆಗಳು ಜಂಟಿಯಾಗಿ ಆಯೋಜಿಸಿದ್ದ ಶಿಬಿರದಲ್ಲಿ ಚೆನ್ನೈಯ ವಿದ್ವಾನ್ ಎಸ್. ಕಸ್ತೂರಿ ರಂಗನ್ ಮತ್ತು ವಿದ್ವಾನ್ ಮುಲ್ಲಾಯ್ ವಾಸಲ್ ಚಂದ್ರಮೌಳಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಮೊದಲ ಮೂರು ದಿನಗಳು ಎಸ್. ಕಸ್ತೂರಿ ರಂಗನ್ ಅವರು ಪಂತುವರಾಳಿ ರಾಗದ ತ್ಯಾಗರಾಜರ ಕೃತಿ “ಅಪ್ಪ ರಾಮ ಭಕ್ತಿ ಎಂತೋ…’ ಎನ್ನುವ ಕೃತಿಯನ್ನು ರೂಪಕ ತಾಳದಲ್ಲಿ; ಕಲ್ಯಾಣಿ ರಾಗದ ಪುರಂದರ ದಾಸರ ಕೀರ್ತನೆ “ಅಂಜಿಕಿನ್ಯಾತಕಯ್ನಾ’ವನ್ನು ಮಿಶ್ರಛಾಪು ತಾಳದಲ್ಲಿ ಹಾಗೂ ನಿರೋಷ್ಠ ರಾಗದಲ್ಲಿ , ಮುತ್ತಯ್ಯ ಭಾಗವತರ್ ಅವರ ಕೃತಿ “ರಾಜ ರಾಜ ರಾಧಿತೇ…’ ಕೃತಿಯನ್ನು ತ್ರಿಶ್ರ ನಡೆಯಲ್ಲಿ ಅಭ್ಯಾಸ ಮಾಡಿಸಿದರು.
ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ವತ್ ವಿದ್ಯಾರ್ಥಿಗಳಿಗಾಗಿ ತೋಡಿ ರಾಗದಲ್ಲಿ ಶ್ಯಾಮ ಶಾಸಿŒಗಳ “ನಿನ್ನೇ ನಮ್ಮಿ ನಾನು …’ ಕೃತಿಯನ್ನು ಮಿಶ್ರಛಾಪು ತಾಳದಲ್ಲಿ ; ಹರಿಕಾಂಭೋದಿ ರಾಗದಲ್ಲಿ ತ್ಯಾಗರಾಜ ಸ್ವಾಮಿ ಅವರ ವಿಳಂಬ ಕೃತಿ “ದಿನ ಮಣಿ ವಂಶ …’ಗಳನ್ನೂ , ನೆರವಲ್, ಸ್ವರ ಪ್ರಸ್ತಾರಗಳನ್ನೂ ಹಾಕುವ ವಿಧಾನವನ್ನೂ ತೋರಿಸಿಕೊಟ್ಟರು. ಜತೆಗೆ ಷಣ್ಮುಖ ಪ್ರಿಯ ರಾಗ, ಆದಿತಾಳದಲ್ಲಿ “ಹರೇ ರಾಮ ಕೃಷ್ಣ …’ ರಾಗಂ ತಾನಂ ಪಲ್ಲವಿಯನ್ನು ಹೇಳಿಕೊಟ್ಟರು.
ಕಾರ್ಯಾಗಾರವನ್ನು ಗುರುಗಳಾದ ವಿದುಷಿ ರಮಾ ಪ್ರಭಾಕರ್ ಹಾಗೂ ವಿದುಷಿ ಪವಿತ್ರಾ ರೂಪೇಶ್ ಆಯೋಜಿಸಿದರು.
ಸುದಾನಾ ಎಡ್ವರ್ಡ್ ಹಾಲ್‌ನಲ್ಲಿ ಶಿಬಿರಾರ್ಥಿಗಳಿಂದ ಕೃತಿ, ಕೀರ್ತನೆಗಳ ಗೋಷ್ಠಿ ಗಾಯನ, ಕಸ್ತೂರಿ ರಂಗನ್ ಅವರಿಂದ ಹಾಡುಗಾರಿಕೆ ನಡೆಯಿತು. ಪಕ್ಕ ವಾದ್ಯದಲ್ಲಿ ಮುಲ್ಲಯ್ ವಾಸಲ್ ಚಂದ್ರಮೌಳಿ ವಯೋಲಿನ್ ನುಡಿಸಿದರೆ, ವಿದ್ವಾನ್ ರಾಧೇಶ್ ಮೈಸೂರು ಮೃದಂಗದಲ್ಲಿ ಸಾಥ್ ನೀಡಿದರು.
ಮುಲ್ಲಯ್ ವಾಸಲ್ ಚಂದ್ರಮೌಳಿ ಅವರಿಂದ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಯಿತು. ಸಂಗೀತದಲ್ಲಿ ಶ್ರುತಿ ಹಾಗೂ ತಾಳಗಳ ಇರವನ್ನು ಲಿಖೀತವಾಗಿ ಗಣಕೀಕೃತ ಪ್ರೊಜೆಕ್ಟರ್‌ಗಳನ್ನು ಉಪಯೋಗಿಸಲು ತೋರಿಸಿಕೊಟ್ಟರು. ಅಲ್ಲದೆ ಗಮಕದಲ್ಲಿನ ಸೂಕ್ಷ್ಮಗಳು, ರಾಗದಿಂದ ರಾಗಕ್ಕೆ ಗಮಕದಲ್ಲಿ ಉಂಟಾಗಬಹುದಾದ ವ್ಯತ್ಯಾಸ, ಒಂದೇ ಸ್ವರವು ಬೇರೆ ಬೇರೆ ರಾಗಗಳ ಗಮಕದಲ್ಲಿ ಹೇಗೆ ಬೇರೆ ಬೇರೆ ರೀತಿಯಲ್ಲಿ ಪ್ರಯೋಗಿಸುವುದು ಮೊದಲಾದ ಸೂಕ್ಷ್ಮವಿಷಯಗಳ ಚಿತ್ರಣವನ್ನು ನೀಡಿದರು.
ಶುಭಾ ಅಡಿಗ