Advertisement

ಚೀನ ಸವಾಲಿಗೆ ಸಿದ್ಧ ; ಗಡಿ ಸಮಸ್ಯೆ ಪ್ರಬುದ್ಧತೆಯಿಂದ ಇತ್ಯರ್ಥ: ರಕ್ಷಣಾ ಸಚಿವ ಸ್ಪಷ್ಟನೆ

09:56 AM Dec 06, 2019 | Team Udayavani |

ಹೊಸದಿಲ್ಲಿ: ಭಾರತ ಮತ್ತು ಚೀನ ದೇಶಗಳ ಗಡಿ ವಿವಾದವು ಎರಡೂ ದೇಶಗಳ ಗ್ರಹಿಕೆಗೆ ಸಂಬಂಧಪಟ್ಟಿದ್ದಾಗಿದೆ. ಅದನ್ನು ಸೌಹಾರ್ದಯುತವಾಗಿ ಬಗೆಹರಿಸುವುದೇ ಕೇಂದ್ರದ ಉದ್ದೇಶ ಎಂದು ಲೋಕಸಭೆಯಲ್ಲಿ ಬುಧವಾರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

ಒಂದು ವೇಳೆ ಚೀನ ಇನ್ನಾವುದೇ ದುಃಸ್ಸಾಹಸ ಕೈಗೊಂಡರೂ ಅದನ್ನು ಎದುರಿಸಲು ಭಾರತ ಸಿದ್ಧವಾಗಿದೆ ಎಂದಿದ್ದಾರೆ. ಇಷ್ಟು ಮಾತ್ರವಲ್ಲ, ಸಮಸ್ಯೆಯನ್ನು ಸೌಹಾರ್ದಯುತವಾಗಿ ಚರ್ಚಿಸಿ ಅವನ್ನು ಬಗೆಹರಿಸಿಕೊಳ್ಳುವಷ್ಟು ಪ್ರಬುದ್ಧತೆಯನ್ನು ಹೊಂದಿವೆ ಎಂದು ಹೇಳಿದ್ದಾರೆ.

ಶೂನ್ಯ ವೇಳೆಯಲ್ಲಿ, ಇತ್ತೀಚೆಗೆ, ಭಾರತೀಯ ಸಾಗರ ಗಡಿಯೊಳಗೆ ಚೀನದ ಯುದ್ಧ ನೌಕೆಯೊಂದು ಅನಧಿಕೃತವಾಗಿ ಪ್ರವೇಶ ಪಡೆದಿದ್ದು ಹಾಗೂ ಭಾರತೀಯ ನೌಕಾಪಡೆ ಆ ಸಮರ ನೌಕೆಯನ್ನು ಭಾರತದ ಸಾಗರ ಗಡಿಯಿಂದ ಹೊರಹಾಕಿದ್ದ ಪ್ರಕರಣವನ್ನು ಸದನದ ಗಮನಕ್ಕೆ ತಂದ ಕಾಂಗ್ರೆಸ್‌ನ ಅಧೀರ್‌ ರಂಜನ್‌ ಚೌಧರಿ, ಈ ಬಗ್ಗೆ ಸರಕಾರದ ಪ್ರತಿಕ್ರಿಯೆಗೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಉತ್ತರ ನೀಡಿದ ರಾಜನಾಥ್‌ ಸಿಂಗ್‌, ‘ಗಡಿ ಭಾಗದಲ್ಲಿ ಚೀನ ದೇಶದ ಸೈನಿಕರಿಂದ ಗಡಿ ಉಲ್ಲಂಘನೆಯಾಗುವ ಪ್ರಕರಣಗಳನ್ನು ಭಾರತೀಯ ಯೋಧರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ’ ಎಂದರು.

ಸರಕಾರಕ್ಕೆ ಇದೆ ಹಕ್ಕು: ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಸರಕಾರ ಅಂಚೆಯವನಂತೆ ಕೆಲಸ ಮಾಡಲಾಗದು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಯ ಪ್ರಶ್ನೋತ್ತರ ವೇಳೆ ಯಲ್ಲಿ ತೃಣಮೂಲ ಕಾಂಗ್ರೆಸ್‌ನ ಸಂಸದ ಕಲ್ಯಾಣ್‌ ಬ್ಯಾನರ್ಜಿ ಮಾತನಾಡಿ, ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸರಕಾರ ಹಸ್ತಕ್ಷೇಪ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದರು.

ಇದಕ್ಕೆ ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ ರವಿಶಂಕರ್‌ ಪ್ರಸಾದ್‌, ‘ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಸಹಭಾಗಿತ್ವ ಹೊಂದಿರುವುದರಿಂದ ನೇಮಕಾತಿಯ ಬಗ್ಗೆ ಮಾತನಾಡುವ ಹಕ್ಕನ್ನು ಸರಕಾರ ಹೊಂದಿರುತ್ತದೆ’ ಎಂದರು.

Advertisement

ನಿರ್ಮಲಾರ ಕ್ಷಮೆ ಕೋರಿದ ಚೌಧರಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ನಿರ್ಬಲ ಸೀತಾರಾಮನ್‌ ಎಂದು ಟೀಕಿಸಿದ್ದ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಅನುದಾನಗಳ ಬಗ್ಗೆ ನಡೆದ ಚರ್ಚೆಯ ವೇಳೆ ವಿಪಕ್ಷಗಳಿಂದ ಬಂದ ಪ್ರಶ್ನೆಗಳಿಗೆ ಉತ್ತರಿಸಲು ನಿರ್ಮಲಾ ಎದ್ದು ನಿಂತ ಕೂಡಲೇ, ಚೌಧರಿ ಅವರು ನಿರ್ಮಲಾರವರ ಕ್ಷಮೆ ಕೋರಿದರಲ್ಲದೆ, ತಮ್ಮ ನಡವಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಸಮಿತಿಯಿಂದ ಸೂಕ್ತ ಸಲಹೆ
ಉದ್ರಿಕ್ತ ಗುಂಪುಗಳಿಂದ ಆಗುವ ಥಳಿಸಿ ಹತ್ಯೆ ಪ್ರಕರಣಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ನ್ಯಾಯ ತೀರ್ಮಾನ ಮಾಡುವ ನಿಟ್ಟಿಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ ಕ್ರಿಮಿನಲ್‌ ದಂಡ ಸಂಹಿತೆ (ಸಿಆರ್‌ಪಿಸಿ) ನಿಯಮಗಳಲ್ಲಿ ಬದಲಾವಣೆ ತರುವಂತೆ ಸಲಹೆ ನೀಡಲು ಸಮಿತಿಯೊಂದನ್ನು ರಚಿಸಿರುವುದಾಗಿ ಕೇಂದ್ರ ಗೃಹ ಸಚಿವ ರಾಜ್ಯಸಭೆಗೆ ತಿಳಿಸಿದ್ದಾರೆ.

ಥಳಿತ ಹತ್ಯೆಗಳಿಗೆ ಸೂಕ್ತ ಶಿಕ್ಷೆ ಜಾರಿಯಾಗುವಂತೆ ಪ್ರತ್ಯೇಕ ಕಾನೂನು ರೂಪಿಸಬೇಕೆಂದು ರಾಜ್ಯಸಭೆಯಲ್ಲಿನ ವಿವಿಧ ಪಕ್ಷಗಳ ಸದಸ್ಯರು ಸರಕಾರವನ್ನು ಒಕ್ಕೊರಲಿನಿಂದ ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದ ಶಾ, ‘ಈಗಾಗಲೇ ಥಳಿಸಿ ಹತ್ಯೆ ಪ್ರಕರಣಗಳನ್ನು ನಿಭಾಯಿಸುವ ಬಗ್ಗೆ ಸ್ಪಷ್ಟನೆ ನೀಡುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ’ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next