ಬೆಂಗಳೂರು: ಬಡವರಿಗೆ ಅಗ್ಗದ ದರದಲ್ಲಿ ಜೆನರಿಕ್ ಔಷಧಗಳನ್ನು ನೀಡುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ. ಇದರಿಂದಾಗಿ ಕೋಟ್ಯಾಂತರ ಮಂದಿಗೆ ಪ್ರಯೋಜನವಾಗಿದೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ತಿಳಿಸಿದರು.
ಜನೌಷಧ ದಿನದ ಅಂಗವಾಗಿ ಫಲಾನುಭವಿಗಳು ಮತ್ತು ಜನೌಷಧ ಕೇಂದ್ರಗಳ ಮಾಲಕರ ಜತೆ ಸೋಮವಾರ ನಗರದ ಸದರ್ನ್ ಹೊಟೇಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೆನರಿಕ್ ಔಷಧಗಳು ಶೇ. 80ರಷ್ಟು ಕಡಿಮೆ ದರದಲ್ಲಿ ಸಿಗುತ್ತದೆ. ಗುಣಮಟ್ಟದ ಔಷಧಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ ಲಾಗುತ್ತಿದೆ. ಖಾಸಗಿ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಸಹ ಬಡವರಿಗೆ ಜೆನರಿಕ್ ಔಷಧ ಬರೆದು ಕೊಡಬೇಕು. ಮುಂದಿನ ದಿನದಲ್ಲಿ ಜನೌಷಧಗಳನ್ನು ಪ್ರತೀ ಪಿಎಚ್‌ಸಿಗೂ ತಲುಪಿಸುವ ಸಂಪೂರ್ಣ ಪ್ರಯತ್ನ ಮಾಡಲಾಗುತ್ತದೆ ಎಂದರು.
ರಾಜ್ಯದಲ್ಲಿ 952 ಸ್ಟೋರ್
ಇಡೀ ರಾಜ್ಯದಲ್ಲಿ 952 ಸ್ಟೋರ್‌ಗಳಿದ್ದು, ಮುಂದಿನ ಆರು ತಿಂಗಳೊಳಗೆ ಪ್ರತಿಯೊಂದು ಸಿಎಚ್‌ಸಿಗಳಲ್ಲಿ ಜನೌಷಧ ಮಳಿಗೆ ತೆರೆಯಲು ನಿರ್ಧರಿಸಿದ್ದು, ಶೀಘ್ರದಲ್ಲಿ ಕರ್ನಾಟಕ ಅತ್ಯಧಿಕ ಜೆನರಿಕ್ ಔಷಧ ಮಳಿಗೆಯನ್ನು ಹೊಂದಿರುವ ರಾಜ್ಯವಾಗಲಿದೆ. ಮೈಸೂರಿನಲ್ಲಿ ಬಹಳಷ್ಟು ದೊಡ್ಡ ಸಂಖ್ಯೆಯಲ್ಲಿ ಜೆನರಿಕ್ ಮಳಿಗೆಗಳು ಕಾರ್ಯಾಚರಿಸುತ್ತಿದೆ ಎಂದು ಸಚಿವರು ಹೇಳಿದರು. ಕೇಂದ್ರ ಸಚಿವ ಭಗವಂತ ಖುಬಾ ಇದ್ದರು.
ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ಯೂ ಸೋಮವಾರ ಜನೌಷಧಿ ದಿನದ ಅಂಗವಾಗಿ ಫಲಾನುಭವಿಗಳು ಮತ್ತು ಮಾಲಕರ ಜತೆ ಪ್ರಧಾನಿ ನರೇಂದ್ರ ಮೋದಿಯವರು ಸಂವಾದ ನಡೆಸಿದರು.