ಬೆಂಗಳೂರು: ಆಂಧ್ರ ಮಾದರಿಯಲ್ಲಿ ಸದ್ಯವೇ ಕನ್ನಡಿಗರಿಗೂ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಯಾಗಲಿದೆಯೇ?
ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಕಾಯ್ದೆ ಜಾರಿಗೆ ತರಲು ಸರಕಾರದ ಮಟ್ಟದಲ್ಲಿ ಪರಿಶೀಲನೆ ನಡೆಯುತ್ತಿದೆ.
ರಾಜ್ಯದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋ ಗಾವಕಾಶ ಕಲ್ಪಿಸಿಕೊಡಲು “ದಿ ಕರ್ನಾಟಕ ಎಂಪ್ಲಾಯ್‌ಮೆಂಟ್ ಆಫ್ ನೇಟಿವ್ ಕ್ಯಾಂಡಿ ಡೇಟ್ ಇನ್ ಪ್ರೈವೇಟ್ ಸೆಕ್ಟರ್ ಆ್ಯಕ್ಟ್-2020′ ಅನುಷ್ಠಾನ ಮಾಡಲು ಪರಿಶೀಲಿಸಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಹೇಳಿದೆ.
ಇದು ಜಾರಿಗೊಂಡರೆ ಸಾಕಷ್ಟು ಕನ್ನಡಿಗರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ.ಇತ್ತೀಚೆಗೆ ನಡೆದ ವಿಧಾನಮಂಡಲದ ಅಧಿವೇಶನದ ವೇಳೆ ವಿಧಾನಪರಿಷತ್ತಿನಲ್ಲಿ ಈ ವಿಷಯ ಪ್ರಸ್ತಾವವಾದಾಗ ಕಾರ್ಮಿಕ ಇಲಾಖೆ ಲಿಖೀತವಾಗಿ ಇದನ್ನು ತಿಳಿಸಿತ್ತು.
ಆಂಧ್ರದಲ್ಲಿ ಸ್ಥಳೀಯರಿಗೆ ಕೈಗಾರಿಕೆ ಮತ್ತು ಕಾರ್ಖಾನೆಗಳಲ್ಲಿ ಉದ್ಯೋಗ ಮೀಸಲು ಕಾಯ್ದೆ-2019 ಜಾರಿಗೆ ತಂದು ಸ್ಥಳೀಯರಿಗೆ ಶೇ. 75ರಷ್ಟು ಉದ್ಯೋಗ ಮೀಸಲಿಡಲಾಗಿದೆ. ರಾಜ್ಯದಲ್ಲೂ ಸ್ಥಳೀಯರಿಗೆ ಇಂಥ ಕಾಯ್ದೆ ಜಾರಿಗೆ ತರುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಹೇಳಿತ್ತು.
ಆದರೆ ಈ ವಿಚಾರ ಅಷ್ಟೊಂದು ಮುಂದಕ್ಕೆ ಹೋಗಿಲ್ಲ. ಅಧಿಕಾರಿಗಳ ಒಂದು ಸಭೆಯಷ್ಟೇ ಆಗಿದ್ದು, ಆಂಧ್ರಪ್ರದೇಶ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಮೀಸಲಾತಿ ಹೇಗಿದೆ ಎಂಬ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.
ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಕಾನೂನು ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾಯ್ದೆ ಜಾರಿಗೆ ತರುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಕಾನೂನು ಸಾಧಕ- ಬಾಧಕಗಳನ್ನು ಅಧ್ಯಯನ ನಡೆಸಲಾಗುವುದು.
-ಶಿವರಾಮ್ ಹೆಬ್ಟಾರ್, ಕಾರ್ಮಿಕ ಸಚಿವರು