Advertisement
ದೇಶದ ಮಹಿಳೆಯರಿಗೆ ರಾಜಕೀ ಯವಾಗಿ ಹೊಸ ಶಕ್ತಿ ತಂದುಕೊಡಲಿರುವ ಈ “ನಾರಿಶಕ್ತಿ ವಂದನ್ ಅಧಿನಿಯಮ’ ಮಸೂದೆಯ ಮಂಡನೆಗೆ ನೂತನ ಸಂಸತ್ ಭವನ ಸಾಕ್ಷಿಯಾಗಿದ್ದು ಮತ್ತೂಂದು ವಿಶೇಷ. ಈ ಮಸೂದೆಯು ನೂತನ ಸಂಸತ್ ಭವನದಲ್ಲಿ ಮಂಡನೆಯಾದ ಮೊದಲ ಮಸೂದೆ ಎಂದು ಇತಿಹಾಸದ ಪುಟದಲ್ಲಿ ದಾಖಲಾಯಿತು.ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸೀಟುಗಳನ್ನು ಮೀಸಲಿಡುವಂಥ ಸಂವಿಧಾನ(120ನೇ ತಿದ್ದುಪಡಿ) ಮಸೂದೆ, 2023ರನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಲೋಕಸಭೆಯಲ್ಲಿ ಮಂಡಿಸಿದರು.
Related Articles
Advertisement
ಮಹಿಳಾ ಮೀಸಲಾತಿ ಜಾರಿಯಂಥ ಪವಿತ್ರ ಕೆಲಸಕ್ಕೆ ಇಂದು ಆ ಭಗವಂತನೇ ನನ್ನನ್ನು ಆಯ್ಕೆ ಮಾಡಿದ್ದಾನೆ. ನನಗೆ ಇಂಥದ್ದೊಂದು ಸುವರ್ಣಾವಕಾಶ ದೊರೆತಿದೆ.ಮಸೂದೆಯು ರಾಜ್ಯಸಭೆಗೆ ಬಂದಾಗ ಪಕ್ಷಭೇದ ಮರೆತು ಸರ್ವಾನುಮತ ದಿಂದ ಎಲ್ಲರೂ ಈ ಮಸೂದೆಯನ್ನು ಬೆಂಬಲಿಸಿ ಎಂದು ಕೋರುತ್ತೇನೆ. ಇದು ಮಹಿಳಾ ಕೇಂದ್ರಿತ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ತೋರಿಸಿದೆ. ಮಹಿಳಾ ಮೀಸಲಾತಿ ಮಸೂದೆ ಮಂಡನೆಯ ಮೂಲಕ ಸೆಪ್ಟಂಬರ್ 19 ಒಂದು ಐತಿಹಾಸಿಕ ದಿನವಾಗಿ ದಾಖಲಾಗಲಿದೆ. ಮಸೂದೆಯಲ್ಲಿನ ಪ್ರಮುಖ ಅಂಶಗಳು
-ಲೋಕಸಭೆ, ರಾಜ್ಯಗಳ ವಿಧಾನಸಭೆಗಳು ಮತ್ತು ಹೊಸದಿಲ್ಲಿ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ.
-ರಾಜ್ಯಸಭೆ ಮತ್ತು ರಾಜ್ಯ ವಿಧಾನಪರಿಷತ್‌ಗಳಿಗೆ ಮಹಿಳಾ ಮೀಸಲಾತಿ ಸೌಲಭ್ಯ ಅನ್ವಯಿಸುವುದಿಲ್ಲ.
-ಈ ಮೀಸಲಾತಿ ಪೈಕಿ ಮೂರನೇ ಒಂದರಷ್ಟು ಸೀಟುಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ಮೀಸಲು
-ಶೇ.33ರ ಮೀಸಲಾತಿಯಲ್ಲಿ ಇತರ ಹಿಂದುಳಿದ ವರ್ಗ(ಒಬಿಸಿ)ಗಳ ಮಹಿಳೆಯರಿಗೆ ಒಳ ಮೀಸಲಾತಿ ಇರುವುದಿಲ್ಲ
-ಜನಗಣತಿ ವರದಿ ಬಂದ ಬಳಿಕ ನಡೆಯುವ ಕ್ಷೇತ್ರ ಪುನರ್‌ವಿಂಗಡಣೆಯ ಅನಂತರ ಈ ಮೀಸಲಾತಿ ಅನುಷ್ಠಾನ
-ಪ್ರತೀ ಪುನರ್‌ವಿಂಗಡಣೆ ಪ್ರಕ್ರಿಯೆಯ ಅನಂತರ ಮಹಿಳೆಯರಿಗೆ ಮೀಸಲಾದ ಕ್ಷೇತ್ರಗಳನ್ನೂ ಬದಲಿಸಲಾಗುತ್ತದೆ.
-ಇದು ಕಾಯ್ದೆಯಾದ ಬಳಿಕ 15 ವರ್ಷಗಳ ಕಾಲ ಜಾರಿಯಲ್ಲಿರುತ್ತದೆ. ಅನಂತರದಲ್ಲಿ ಅದರ ಅವಧಿಯನ್ನು ವಿಸ್ತರಿಸುತ್ತಾ ಹೋಗಬಹುದು. ಬದಲಾಗಲಿದೆ ರಾಜ್ಯದ ರಾಜಕೀಯ ಚಿತ್ರಣ
ಬೆಂಗಳೂರು: ಮಹಿಳಾ ಮೀಸಲಾತಿ ಅಂಗೀಕಾರಗೊಂಡು ಜಾರಿಗೆ ಬಂದರೆ, ರಾಜ್ಯ ರಾಜ್ಯ ಕಾರಣದ ಚಿತ್ರಣವೂ ಬದಲಾಗಲಿದೆ. ರಾಜ್ಯದಲ್ಲಿ ಲೋಕಸಭೆಯ ಈಗಿನ ಲೆಕ್ಕಾಚಾರದ ಪ್ರಕಾರ 28 ಮತ್ತು ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಶೇ. 33ರಷ್ಟು ಅಂದರೆ ಕ್ರಮವಾಗಿ 9- 10 ಹಾಗೂ 74 ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಮಹಿಳೆಯರು ಪ್ರಾಬಲ್ಯ ಮೆರೆಯಲಿದ್ದಾರೆ. ಮಸೂದೆ ಅಂಗೀಕಾರಗೊಂಡು ಕಾನೂನು ಆದ ಅನಂತರದಲ್ಲಿ ಚುನಾವಣ ಆಯೋಗದಿಂದ ಕ್ಷೇತ್ರಗಳ ಮರುವಿಂಗಡಣೆ, ಇದಕ್ಕೂ ಮುನ್ನ ಜನಗಣತಿ ಆಗಲಿದೆ. ಆಗ ಈ ಕ್ಷೇತ್ರಗಳ ಲೆಕ್ಕಾಚಾರದಲ್ಲಿ ತುಸು ಏರುಪೇರು ಆಗುವ ಸಾಧ್ಯತೆಯೂ ಇದೆ. 2024ಕ್ಕೆ ಅನುಷ್ಠಾನ ಅಸಾಧ್ಯ?
ಬಹುತೇಕ ರಾಜಕೀಯ ಪಕ್ಷಗಳು ಮಹಿಳಾ ಮೀಸಲಾತಿಗೆ ಆಗ್ರಹಿಸುತ್ತಿರುವ ಕಾರಣ ಮಸೂದೆ ಅಂಗೀಕಾರಗೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ 2024ರ ಲೋಕಸಭೆ ಚುನಾವಣೆ ವೇಳೆ ಇದರ ಅನುಷ್ಠಾನ ಆಗುವ ಸಾಧ್ಯತೆ ಇಲ್ಲ. ಏಕೆಂದರೆ ಜನಗಣತಿ ಮುಗಿದ ಅನಂತರ, ಕ್ಷೇತ್ರ ಪುನರ್‌ವಿಂಗಡಣೆ ಆಗಲಿದ್ದು, ಬಳಿಕವೇ ಇದು ಜಾರಿಯಾಗಲಿದೆ. ಇನ್ನೂ ಗಣತಿಯೇ ಪೂರ್ಣಗೊಳ್ಳದ ಕಾರಣ ಮರುವಿಂಗಡಣೆ ಪ್ರಕ್ರಿಯೆಯು 2026ರ ಅನಂತರವೇ ನಡೆಯಲಿದೆ.
ಅಂದರೆ ಮಹಿಳಾ ಮೀಸಲಾತಿಯು 2029ರ ಲೋಕಸಭೆ ಚುನಾವಣೆ ವೇಳೆಗೆ ಜಾರಿಯಾಗುವ ಸಾಧ್ಯತೆಯೇ ಹೆಚ್ಚು. ಅಧೀರ್ ತಪ್ಪು ತಿದ್ದಿದ ಸಚಿವ ಶಾ
ಮಂಗಳವಾರ ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಮಂಡಿಸಿದ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮೊದಲು ಮಸೂದೆ ಮಂಡಿಸಲು ಕಾರಣ ನಮ್ಮ ಪಕ್ಷ ಎಂದರು. ಅದನ್ನು ಒಪ್ಪದ ಕೇಂದ್ರ ಗೃಹ ಸಚಿವ ಅಮಿತ್ ಶಾ, 15ನೇ ಲೋಕಸಭೆ ವಿಸರ್ಜನೆಗೊಂಡ ಕೂಡಲೇ ಮಂಡಿಸಿದ್ದ ಮಸೂದೆ ಕೂಡ ಲ್ಯಾಪ್ಸ್ ಆಗಿದೆ. ಹಿಂದಿನ ಸಂದರ್ಭಗಳಲ್ಲಿ ಮೀಸಲು ಮಸೂದೆ ಲೋಕಸಭೆಯಲ್ಲಿ ಅನುಮೋದನೆಗೊಂಡಿರಲಿಲ್ಲ ಎಂದರು. ಇನ್ನೊಂದೆಡೆ ಅಧೀರ್ ಮತ್ತು ಇತರ ನಾಯಕರು ಸಂವಿಧಾನದ ಪ್ರತಿ ಹಿಡಿದುಕೊಂಡು ಹೊಸ ಸಂಸತ್ ಭವನವನ್ನು ಪ್ರವೇಶಿಸಿದರು. ರಾಹುಲ್, ಹಲವು ವಿಪಕ್ಷಗಳ ನಾಯಕರು ಅವರ ಜತೆಗೆ ಇದ್ದರು. ಹೊಸ ಸಂಸತ್ ಭವನದಲ್ಲಿ ಮೊದಲ ವಾಗ್ವಾದ
ನೂತನ ಸಂಸತ್ ಭವನದಲ್ಲಿ ನಡೆದ ಮೊದಲ ಮಸೂದೆ ಮಂಡನೆಯಲ್ಲೇ ಆಡಳಿತರೂಢ ಹಾಗೂ ವಿಪಕ್ಷಗಳ ನಡುವೆ ಭಾರೀ ಮಾತಿನ ಜಟಾಪಟಿ ನಡೆಯಿತು. ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ” ರಾಜಕೀಯ ಪಕ್ಷಗಳು ದುರ್ಬಲ ಮಹಿಳೆಯರನ್ನು ಆಯ್ಕೆ ಮಾಡುತ್ತವೆ’ ಎಂದು ಹೇಳಿಕೆ ನೀಡಿ, ಟೀಕೆಗೆ ಗುರಿಯಾದರು. ಮಹಿಳಾ ಮೀಸಲಾತಿ ಮಸೂದೆ ಕುರಿತ ಚರ್ಚೆ ವೇಳೆ “ಪರಿಶಿಷ್ಟ ಜಾತಿಯ ಮಹಿಳೆಯರ ಸಾಕ್ಷರತೆ ಕಡಿಮೆಯಾಗಿದೆ. ಇದೇ ಕಾರಣಕ್ಕಾಗಿಯೇ ರಾಜಕೀಯ ಪಕ್ಷಗಳು ದುರ್ಬಲ ಮಹಿಳೆಯರನ್ನು ಆಯ್ಕೆ ಮಾಡುವ ಅಭ್ಯಾಸ ಹೊಂದಿವೆ ಎಂದರು. ಇದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ನಮ್ಮ ಪಕ್ಷದಿಂದ ನಾವೆಲ್ಲರೂ ಅಧಿಕಾರ ಪಡೆದಿದ್ದೇವೆ ಹಾಗಾದರೆ ನಾವು ದುರ್ಬಲರೇ, ರಾಷ್ಟ್ರಪತಿ ದ್ರೌಪದಿ ಮುರ್ಮು ದುರ್ಬಲರೇ ? ಅವರು ಸಶಕ್ತರು, ಖರ್ಗೆ ಅವರ ಈ ಹೇಳಿಕೆ ಸಲ್ಲದು ಎಂದರು. ಈ ಮಸೂದೆ ನಮ್ಮದು
ಕೇಂದ್ರ ಮಂಡಿಸಿದ ಮಹಿಳಾ ಮೀಸ ಲಾತಿ ಮಸೂದೆಯನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು “ಈ ಮಸೂದೆ ತಮ್ಮದು’ ಎಂದು ಹೇಳಿಕೊಂಡಿದ್ದಾರೆ.
2010ರ ಮಾ. 9ರಂದು ಯುಪಿಎ ಸರಕಾರ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿತ್ತು. ಆದರೆ ಲೋಕಸಭೆಯಲ್ಲಿ ಕೈಗೆತ್ತಿಕೊಳ್ಳಲು ವಿಫಲವಾಗಿತ್ತು.