Advertisement

ಶೇ. 90 ಜನರಲ್ಲಿ ಸ್ವಚ್ಛತೆಯ ಜಾಗೃತಿ: ಸ್ವಚ್ಛ ಮಂಗಳೂರು ರೂವಾರಿ ಶ್ರೀ ಏಕಗಮ್ಯಾನಂದ ಸ್ವಾಮೀಜಿ

12:02 PM Oct 03, 2019 | sudhir |

ಐದು ವರ್ಷಗಳಲ್ಲಿ ಮಳೆಗಾಲದ 10 ವಾರ ಹೊರತುಪಡಿಸಿ ಪ್ರತಿ ರವಿವಾರ ಮಂಗಳೂರು ನಗರದ ಸ್ವತ್ಛತೆಯಲ್ಲಿ ತೊಡಗಿಸಿಕೊಂಡಿದ್ದ ರಾಮಕೃಷ್ಣ ಮಿಷನ್‌ನ “ಸ್ವಚ್ಛ ಮಂಗಳೂರು’ ಅಭಿಯಾನವು ಜನರಲ್ಲಿ ಹೊಸ ಪರಿವರ್ತನೆಗೆ ಕಾರಣವಾಗಿದೆ. ಈ ಅಭಿಯಾನವು ಜನಾಂದೋಲನವಾಗಿ ಪರಿವರ್ತನೆಯಾಗುವ ಮೂಲಕ ಸ್ವಚ್ಛತೆಯೊಂದಿಗೆ ನಗರ ಸುಂದರೀಕರಣಕ್ಕೂ
ಸಾಕ್ಷಿಯಾಗಿದೆ. ರವಿವಾರದಂದು ನಗರದ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಬೃಹತ್‌ ಸ್ವಚ್ಛತಾ ಆಂದೋಲನದೊಂದಿಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಜನ ಬೆಂಬಲ-ಮೆಚ್ಚುಗೆಗೆ ಪಾತ್ರವಾಗಿದ್ದ ಐದು ವರ್ಷದ ಈ ಸ್ವಚ್ಛ ಮಂಗಳೂರು ಅಭಿಯಾನ ಸಮಾಪನಗೊಳ್ಳುತ್ತಿದೆ. ಈ ಅಭಿಯಾನದುದ್ದಕ್ಕೂ ಮುಂಚೂಣಿಯಲ್ಲಿ ನಿಂತು ಜನರನ್ನು ನಗರ ಸ್ವಚ್ಛತೆಯತ್ತ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದವರು ರಾಮಕೃಷ್ಣ ಮಿಷನ್‌ನ ಶ್ರೀ ಏಕಗಮ್ಯಾನಂದ ಸ್ವಾಮೀಜಿ. ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕರೂ ಆಗಿರುವ ಅವರು “ಸ್ವಚ್ಛ ಮಂಗಳೂರು’ ಅಭಿಯಾನದ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ್ದಾರೆ.

Advertisement

ಸ್ವಚ್ಛ ಮಂಗಳೂರು ಅಭಿಯಾನ ಆಂದೋಲನವಾದದ್ದು ಹೇಗೆ?
2014 ಅಕ್ಟೋಬರ್‌ ತಿಂಗಳಲ್ಲಿ ಕೇಂದ್ರ ಸರಕಾರವು ಸ್ವಚ್ಛತೆ ಕಾರ್ಯಕ್ರಮಕ್ಕೆ ಕರೆ ಕೊಟ್ಟಿತು. ಪತ್ರವೂ ಬಂತು. ಅದರಂತೆ 2015ರಿಂದ ಪ್ರತಿ ರವಿವಾರ ಸ್ವಚ್ಛ ಭಾರತ ಅಭಿಯಾನ ರೂಪಿಸಿದೆವು. ಅಭಿಯಾನ ಆಂದೋಲನವಾಗುತ್ತದೆ ಎಂದು ಅನಿಸಿಯೇ ಇರಲಿಲ್ಲ. ಮೊದ ಮೊದಲು 50-100 ಜನ ಸೇರಿಕೊಂಡು ನಗರದ ಸ್ವಚ್ಛತೆ, ಶ್ರಮದಾನ ಮಾಡತೊಡಗಿದೆವು; ತೊಡಗಿಸಿಕೊಳ್ಳುವವರ ಸಂಖ್ಯೆ ಜಾಸ್ತಿಯಾಯಿತು. ಸಂಘ-ಸಂಸ್ಥೆಗಳು, ಸಾರ್ವಜನಿಕರು ಸ್ವಯಂಸ್ಫೂರ್ತಿಯಿಂದ ಆಗಮಿಸಿ ಕೈ ಜೋಡಿಸಿದರು. ಸ್ವಚ್ಛತೆಯ ಜತೆಗೆ ಜಾಗೃತಿ ಕಾರ್ಯಕ್ರಮಗಳೂ ನಡೆದವು. ಆ ಮೂಲಕ ಇದೊಂದು ಜನಾಂದೋಲನವಾಗಿ ಪರಿವರ್ತನೆಯಾಯಿತು.

ಅಭಿಯಾನ ಜನಜಾಗೃತಿ ಮೂಡಿಸುವಲ್ಲಿ ಎಷ್ಟರ ಮಟ್ಟಿಗೆ ಸಫಲವಾಗಿದೆ?
ಶೇ. 95ರಷ್ಟು ಜನರಲ್ಲಿ ಸ್ವಚ್ಛತೆ ಕುರಿತಂತೆ ಜಾಗೃತಿ ಮೂಡಿದೆ. ಸಾಮಾಜಿಕ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಜನರಲ್ಲಿ ಕಂಡಿದ್ದೇವೆ. ಆರಂಭದಲ್ಲಿ ನೋಡಿದಾಗ ನಗರದಲ್ಲಿ ಸುಮಾರು 900ರಷ್ಟು ಕಸ ಎಸೆಯುವ ಸ್ಥಳಗಳಿದ್ದವು. ಸ್ವಚ್ಛತಾ ಸ್ವಯಂ ಸೇವಕರು ಇದರ ಬಗ್ಗೆಯೂ ಜಾಗೃತಿ ಕೈಗೊಂಡರು. ಇದರ ಪರಿಣಾಮ 5 ವರ್ಷಗಳಲ್ಲಿ ಅಂತಹ ಜಾಗಗಳು ಬಹುತೇಕ ಇಲ್ಲವಾಗಿವೆ.

ಹಾಗಾದರೆ, ಸುಶಿಕ್ಷಿತರಲ್ಲಿ ಸಾಮಾಜಿಕ ಪ್ರಜ್ಞೆಯ ಕೊರತೆ ಇದೆಯೇ ?
ಶಿಕ್ಷಿತರು, ಶಿಕ್ಷಿತರಲ್ಲದವರು ಎಂಬುದಾಗಿ ವಿಶ್ಲೇಷಣೆ ಮಾಡಲು ಬರುವುದಿಲ್ಲ. ಶಿಕ್ಷಣ ಪದ್ಧತಿಯಲ್ಲಿ ಸ್ವತ್ಛತಾ ಜಾಗೃತಿ ಸೇರಿಸಬೇಕಿತ್ತು ಎಂದು ಸ್ವಾಮಿ ವಿವೇಕಾನಂದರು ಕೂಡ ಹೇಳಿದ್ದರು. ಜನರಿಗೆ ನಮ್ಮ ಮನೆ ಸ್ವತ್ಛ ಇರುವುದರೊಂದಿಗೆ ಊರು ಸ್ವಚ್ಛ ಇರಬೇಕೆಂಬ ಮನಸ್ಥಿತಿಯೂ ಇರಬೇಕು. ಹಾಗಿದ್ದಲ್ಲಿ ಮಾತ್ರ ನಗರ ಸ್ವಚ್ಛತೆಗೆ ಅವರು ತೊಡಗಿಸಿಕೊಳ್ಳಬಹುದು. ಆ ಮನೋಭಾವ ಎಳವೆಯಿಂದಲೇ ಮೂಡಿಸಿದಾಗ ಸ್ವಚ್ಛತೆಯಲ್ಲಿ ಜನ ಪಾಲುದಾರರಾಗಲು ಸಾಧ್ಯ.

ಪಚ್ಚನಾಡಿ ಜನತೆ ಬದುಕು ಮತ್ತೆ ಮೊದಲಿನಂತಾಗಬೇಕು. ಪಾಲಿಕೆಗೆ ಏನು ಸಲಹೆ ಮಾಡುವಿರಿ?
ಪಾಲಿಕೆಗೆ ಸಲಹೆ ಎನ್ನುವುದಕ್ಕಿಂತಲೂ ಜನರಿಗೆ ಸಲಹೆ ಕೊಡಬಹುದು. ಪಚ್ಚನಾಡಿಗೆ ಕಸ ಹೋಗುವುದು ನಿಲ್ಲಬೇಕು. ಮುಂದಿನ 20 ವರ್ಷಗಳಲ್ಲಿ ಅಲ್ಲಿ ಕಸ ವಿಲೇವಾರಿ ತಾಣ ಇರಬಾರದು. ಅಲ್ಲಿ ಸುಂದರವಾದ ಅಂತಾರಾಷ್ಟ್ರೀಯ ಮೈದಾನ ಇರಬೇಕು. ಇದೇ ನಮ್ಮ ಕನಸು; ಜನರ ಕನಸಾಗಬೇಕು. ಇಚ್ಛಾಶಕ್ತಿ ಇದ್ದಲ್ಲಿ ಪಚ್ಚನಾಡಿ ಸಮಸ್ಯೆ ಪರಿಹಾರ ಸಾಧ್ಯ. ಸ್ವತ್ಛ ಮಂಗಳೂರು ಅಭಿಯಾನದ ಮುಖಾಂತರ ಈಗಾಗಲೇ ಮಡಕೆ ಗೊಬ್ಬರಗಳನ್ನು ಕೊಡುತ್ತಿದ್ದೇವೆ.

Advertisement

5 ವರ್ಷಗಳಲ್ಲಿ ರಾಮಕೃಷ್ಣ ಮಿಷನ್‌ ಜತೆ ಸ್ಥಳೀಯಾಡಳಿತ ಕೈಜೋಡಿಸುತ್ತಿದ್ದಲ್ಲಿ ಮತ್ತಷ್ಟು ಬದಲಾವಣೆ ಕಾಣಬಹುದಿತ್ತೇ ?
ಪಾಲಿಕೆ ನಮ್ಮೊಂದಿಗೆ ಬರಲಿಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಸರಕಾರಿ ವ್ಯವಸ್ಥೆಯನ್ನು ಇದರೊಂದಿಗೆ ಜೋಡಿಸಿಕೊಳ್ಳಬಾರದು ಎಂಬುದೇ ನಮ್ಮ ಉದ್ದೇಶವಾಗಿತ್ತು. ಸರಕಾರಿ ವ್ಯವಸ್ಥೆ ಜತೆಗೂಡಿದಾಗ ಜನ ತೊಡಗಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸ್ವಚ್ಛ ಮಂಗಳೂರು ಅಭಿಯಾನ ಜನರಿಂದ, ಜನರಿಗಾಗಿ, ಜನರೇ ಮಾಡುವ ಕಾರ್ಯಕ್ರಮವಾಗಿತ್ತು. ಸರಕಾರದಿಂದ ಯಾವುದೇ ಅನುದಾನವನ್ನೂ ಈ ಕಾರ್ಯಕ್ರಮಕ್ಕೆ ಪಡೆದುಕೊಳ್ಳಲಿಲ್ಲ.

ಮಂಗಳೂರಿನಲ್ಲಿ ಸದ್ಯದ ಕಸ ನಿರ್ವಹಣೆ ವ್ಯವಸ್ಥೆ ಹೇಗಿದೆ ?
ಯೋಜನೆಯನ್ನು ಸರಿಯಾಗಿ ರೂಪಿಸುವುದರಲ್ಲಿ ನಾವು ಸೋತಿದ್ದೇವೆ ಎನ್ನಬಹುದು. ಅದರಿಂದಾಗಿಯೇ ಜನ ಅದಕ್ಕೆ ಸ್ಪಂದಿಸುವುದಿಲ್ಲ. ಜನರ ತಪ್ಪು ಎನ್ನುವುದಕ್ಕಾಗಲ್ಲ. ಇನ್ನೂ ಅಚ್ಚುಕಟ್ಟಾಗಿ ಕಸ ನಿರ್ವಹಣೆ ಮಾಡಿದ್ದರೆ, ಕಸದ ಸಮಸ್ಯೆ ಅಷ್ಟೊಂದು ಗಾಢವಾಗಿ ಕಾಡುತ್ತಿರಲಿಲ್ಲ.

5 ವರ್ಷಗಳ ಸ್ವತ್ಛ ಮಂಗಳೂರು ಅಭಿಯಾನ ಮುಗಿಯುತ್ತಿದೆ, ಮುಂದೇನು?
ಐದು ವರ್ಷದ ಕಾರ್ಯಕ್ರಮ ಮುಗಿದಿದೆ. ಮುಂದೇನು ಎಂಬ ಬಗ್ಗೆ ನವೆಂಬರ್‌ ತಿಂಗಳಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದ್ದೇವೆ. ಒಂದಷ್ಟು ಮಂದಿಯನ್ನು ಕರೆಸಿ ಅವರ ಅಭಿಪ್ರಾಯ ಸಂಗ್ರಹ ಮಾಡಿಕೊಂಡು ಮುಂದುವರಿಯಲಾಗುತ್ತದೆ.

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next