Advertisement

ಬಿಂದಿಗೆ ನೀರಿಗಾಗಿ ಅಲೆಯುವ ಪರಿಸ್ಥಿತಿ

04:11 PM May 19, 2019 | Suhan S |

ತುಮಕೂರು: ನೀರು… ನೀರು ನೀರು ಎಲ್ಲೆಲ್ಲಿಯೂ ನೀರಿನದೇ ಕೂಗು. ದಿನೇ ದಿನೆ ನೀರಿಗಾಗಿ ಜನಪರಿ ತಪ್ಪಿಸುತ್ತಿರುವುದು ಮುಂದುವರಿದಿದೆ. ಬೀದಿ ಬೀದಿ ಯಲ್ಲಿ ಬಿಂದಿಗೆ ಹಿಡಿದು ಒಡಾ ಡುವುದು ನಿಂತ್ತಿಲ್ಲ. ನಗರದಲ್ಲಿ ಕೊರೆಸಿದ್ದ ಕೊಳವೆ ಬಾವಿ ಗಳಲ್ಲಿ ಜಲದ ಪ್ರಮಾಣ ಕಡಿಮೆಯಾಗುತ್ತಿದೆ. ಮಳೆ ಬರದಿದ್ದರೆ ಜೂನ್‌ ತಿಂಗಳಲ್ಲಿ ನಗರದಲ್ಲಿ ಜಲಕ್ಷಾಮ ಎದುರಾಗುವ ಲಕ್ಷಣ ಹೆಚ್ಚು ಕಂಡು ಬರುತ್ತಿದೆ. ಮುಂದೆ ಏನು ಎನ್ನುವ ಆಂತಕ ಜನರಲ್ಲಿ ಮೂಡಲಾರಂಭಿಸಿದೆ.

Advertisement

ನಗರದ 35 ವಾರ್ಡ್‌ ಗಳಲ್ಲೂ ಈ ಸುಡು ಬಿಸಿಲ ಬೇಸಿಗೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಒಂದು ಬಿಂದಿಗೆ ನೀರಿಗೆ 2ರಿಂದ 3 ರೂ. ಕೊಟ್ಟು ಖರೀದಿ ಮಾಡಬೇಕಾ ಗಿದೆ. ಬಡವರು ವಾಸಿ ಸುವ ಪ್ರದೇಶಗಳಿಗೆ ವಾರ ಕ್ಕೊಮ್ಮೆ ನೀರು ಸರಬ ರಾಜಾಗುತ್ತಿದೆ, ನೀರಿಗಾಗಿ ಜನ ಪರಿತಪಿಸುತ್ತಿದ್ದರೂ ಮಹಾನಗರ ಪಾಲಿಕೆ ಮೌನ ವಹಿಸಿದೆ.

ನೀರು ಸರಬರಾಜುಗೆ ಆಡಳಿತ ವಿಫ‌ಲ: ಎಲ್ಲಾ ಕ್ಷೇತ್ರ ದಲ್ಲೂ ಬೆಳವಣಿಗೆಯ ಹಾದಿಯಲ್ಲಿರುವ ನಗರದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲಿದೆ. ನಗರದ ಯಾವುದೇ ವಾರ್ಡ್‌ಗಳಿಗೆ ಹೋದರೂ ನೀರಿ ಗಾಗಿ ಜನ ಬಿಂದಿಗೆ ಹಿಡಿದು ಬೀದಿ ಬೀದಿ ಸುತ್ತುವುದು ಸಾಮಾನ್ಯವಾಗಿದೆ. ಈ ರೀತಿಯ ಪರಿಸ್ಥಿತಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಬಡವರು ಹಾಗೂ ಸಾಮಾನ್ಯ ಜನರು ವಾಸಿಸುವ ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ನಗರದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಪಾಲಿಕೆಯಿಂದ ಹಲವಾರು ಕಾರ್ಯ ಯೋಜನೆಗಳನ್ನು ಮಾಡಿದ್ದರೂ, ಈ ಬೇಸಿಗೆಯಲ್ಲಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ನೀರು ಸರಬರಾಜು ಮಾಡುವಲ್ಲಿ ಪಾಲಿಕೆ ಆಡಳಿತ ವಿಫ‌ಲವಾಗಿದೆ.

ಕುಸಿದ ಅಂತರ್ಜಲ: ನಗರದ ಕುಡಿಯುವ ನೀರಿನ ಜೀವನಾಡಿಯಾಗಿದ್ದ ಅಮಾನಿಕೆರೆ ಅಭಿವೃದ್ಧಿಯಾಗಿದೆ. ಆದರೆ, ಕೆರೆಗೆ ಹೇಮಾವತಿ ನೀರು ಬಿಟ್ಟಿಲ್ಲ. ಮಳೆಯ ನೀರು ಕೆರೆಗೆ ಸರಾಗವಾಗಿ ಬರುತ್ತಿಲ್ಲ. ರಾಜಗಾಲುವೆ ತೆರವುಗೊಂಡಿಲ್ಲ. ನಗರದ ಸುತ್ತಿರುವ ಯಾವುದೇ ಕೆರೆಯಲ್ಲಿ ನೀರಿಲ್ಲ. ಇದರಿಂದ ನಗರದಲ್ಲಿ ಅಂತರ್ಜಲ ಕುಸಿತ ಉಂಟಾಗಿ ನಗರ ವ್ಯಾಪ್ತಿಯಲ್ಲಿದ್ದ 634 ಬೋರ್‌ವೆಲ್ಗಳ ಪೈಕಿ ಹೀಗಾಗಲೇ 242 ಬೋರ್‌ವೆಲ್ಗಳು ನಿಂತು ಹೋಗಿದ್ದು, ಬೋರ್‌ ವೆಲ್ಗಳಿಂದ ಪ್ರತಿನಿತ್ಯ 16 ಎಂಎಲ್ಡಿ ನೀರು ಉತ್ಪತ್ತಿಯಾಗುತ್ತಿತ್ತು. ಆದರೆ, ಕೇವಲ 5 ಎಂಎಲ್ಡಿ ನೀರು ಉತ್ಪತ್ತಿಯಾಗುತ್ತಿದೆ ಎಂದು ಪಾಲಿಕೆ ಅಧಿಕಾರಿ ವಸಂತ್‌ ತಿಳಿಸಿದ್ದಾರೆ.

ನಗರದ ಬಹುತೇಕ ವಾರ್ಡ್‌ಗಳಿಗೆ ನೀರುಣಿಸುತ್ತಿದ್ದ ಕೊಳವೆ ಮಾರ್ಗಗಳು ದಿಢೀರ್‌ ನಿಂತ ಹಿನ್ನೆಲೆಯಲ್ಲಿ ಹಲವು ವಾರ್ಡ್‌ಗಳಲ್ಲಿ ಸಹಜವಾಗಿಯೇ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗತೊಡಗಿದೆ.

Advertisement

ಸಾವಿರಾರು ರೈಸಿಂಗ್‌ ಮೈನ್‌ ಅಳವಡಿಕೆ :ನಗರದ ಎಲ್ಲಾ ವಾರ್ಡ್‌ಗಳಲ್ಲಿರುವ ಸಿರಿವಂತರು, ಬಲಾಡ್ಯರು, ಹೋಟೆಲ್ಗಳು, ಕಲ್ಯಾಣ ಮಂದಿರಗಳು ಸೇರಿದಂತೆ ಗಣ್ಯಾತಿ ಗಣ್ಯರ ಮನೆಗಳಿಗೆ ದಿನದ 24 ಗಂಟೆ ನೀರು ಬರುವಂತೆ ನಗರದಲ್ಲಿ ನೀರು ಸರಬರಾಜು ಮಾಡುವ ಮುಖ್ಯ ಕೊಳವೇ ಮಾರ್ಗಕ್ಕೆ ಅನಧಿಕೃತವಾಗಿ ಸಂಪರ್ಕ ಹೊಂದಿದ್ದಾರೆ. ಪ್ರತಿ ವಾರ್ಡಿನಲ್ಲಿ 50ರಿಂದ 60 ರೈಸಿಂಗ್‌ ಮೈನ್‌ ಅಳವಡಿಕೆ ಇದೆ. ನಗರದಲ್ಲಿ ಸಾವಿರಾರು ಜನರು ಈ ರೀತಿಯ ಅನಧಿಕೃತ ಸಂಪರ್ಕ ಹೊಂದಿ, ಬಡವರಿಗೆ ಸಿಗಬೇಕಾದ ನೀರನ್ನು ಸಿರಿ ವಂತರೇ ಪಡೆಯುತ್ತಿದ್ದಾರೆ. ಈ ಬಗ್ಗೆ ಪಾಲಿಕೆಯ ಸಭೆ ಯಲ್ಲಿ ಸದಸ್ಯರುಗಳೇ ಹಲವು ಬಾರಿ ಚರ್ಚೆ ನಡೆಸಿ ದ್ದಾರೆ. ಬಡವರಿಗೆ ಕುಡಿ ಯಲು ನೀರು ಸಿಗುತ್ತಿಲ್ಲ. ಸಿರಿವಂತರ ಮನೆಯಲ್ಲಿರುವ ರೈಸಿಂಗ್‌ ಮೈನ್‌ ತೆರವು ಗೊಳಿಸಿ ಎಂದು ಆಗ್ರಹಿಸಿದ್ದಾರೆ. ಪಾಲಿಕೆ ಸದಸ್ಯರು ಸಭೆಗಳಲ್ಲಿ ಒತ್ತಾಯಿಸಿರುವುದಕ್ಕೆ ಪಾಲಿಕೆಯ ಆಡಳಿತ ವರ್ಗದಿಂದ ಕವಡೇ ಕಾಸಿನ ಕಿಮ್ಮತ್ತೂ ದೊರೆತಿಲ್ಲ.

ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹೊಂದಿರುವ ಕೊಳವೆ ಸಂಪರ್ಕ ಹಾಗೂ ಮುಖ್ಯ ಕೊಳವೆ ಮಾರ್ಗ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳದಿದ್ದರೆ, ತಮ್ಮ ಕೊಳವೇ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಪಾಲಿಕೆಯ ಆಯುಕ್ತರು ಇತರೆ ಅಧಿಕಾರಿಗಳು ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ 12 ಸಾವಿರಕ್ಕೂ ಹೆಚ್ಚು ಅನಧಿಕೃತವಾಗಿ ರೈಸಿಂಗ್‌ ಮೈನ್‌ ಹೊಂದಿರುವ ಮನೆಗಳಿವೆ ಎಂದು ಪಾಲಿಕೆ ಅಧಿಕಾರಿಗಳೇ ಹೇಳುತ್ತಾರೆ. ಆದರೆ, ಗೃಹ ಹಾಗೂ ವಾಣಿಜ್ಯ ಬಳಕೆಯ ಕೊಳಾಯಿ ಸಂಪರ್ಕ ಯಾವು ಸಹ ಇನ್ನೂ ಕಡಿತಗೊಳಿಸಿಲ್ಲ.

ಟ್ಯಾಂಕರ್‌ ನೀರಿಗೆ ಅಧಿಕ ಬೇಡಿಕೆ: ನಗರದಲ್ಲಿ ಕುಡಿಯುವ ನೀರನ ಸಮಸ್ಯೆ ತೀವ್ರಗೊಳ್ಳುತ್ತಿರು ವಂತೆಯೇ ಟ್ಯಾಂಕರ್‌ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಬಡವರು ನೀರಿಗಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ. ಆರ್ಥಿಕವಾಗಿ ಸ್ಥಿತಿವಂತರು, ಸಾಮಾನ್ಯ ಜನರು ಟ್ಯಾಂಕರ್‌ ಗಳ ಮೂಲಕ ನೀರು ತರಿಸಿಕೊಂಡು ತಮ್ಮ ನೀರಿನ ಬವಣೆ ನೀಗಿಸಿಕೊಳ್ಳುತ್ತಿದ್ದಾರೆ. ಇದರಿಂದ ನಗರದಲ್ಲಿ ಟ್ಯಾಂಕರ್‌ ನೀರಿಗೆ ಬಾರಿ ಬೇಡಿಕೆ ಬಂದಿದೆ. ನಗರದ ವಿವಿಧ ಕಡೆ ನೀರಿಗೆ ತೀವ್ರ ರೀತಿಯ ತೊಂದರೆ ಇದೆ. ಈ ಹಿಂದೆ ಚುನಾವಣೆಗೆ ನಿಲ್ಲುವ ಆಸೆ ಹೊಂದಿದ್ದ ಹಲವರು ಜನರಿಗೆ ಉಚಿತ ನೀರು ಸರಬರಾಜು ಮಾಡುತ್ತಿದ್ದರು. ಈಗ ವಿಧಾನ ಸಭೆ, ಲೋಕಸಭಾ ಚುನಾವಣೆ ಮುಗಿದಿದೆ. ಯಾರೂ ಉಚಿತ ನೀರು ಕೊಡುವ ಗೋಜಿಗೇ ಹೋಗಿಲ್ಲ. ಕೆಲವರು ಇಂದಿಗೂ ತಮ್ಮ ಸೇವೆ ಮಾಡುತ್ತಿದ್ದಾರೆ. ಪಾಲಿಕೆಯಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದೆ. ನಗರದ 5 ವಾರ್ಡ್‌ಗಳಿಗೆ ಟ್ಯಾಂಕರ್‌ ನೀರು ನೀಡಲಾಗುತ್ತಿದೆ. ಈ ಪ್ರಮಾಣ ಹೆಚ್ಚುತ್ತಲೇ ಇದೆ.

ಜಿಲ್ಲಾಡಳಿತ ವಿಫ‌ಲ: ತುಮಕೂರು ಪಾಲಿಕೆ ಸದಸ್ಯರು ಗಳು ತಮ್ಮ ರಾಜಕೀಯ ಮೇಲಾಟಗಳಲ್ಲೇ ತೊಡಗಿದ್ದು, ಜನ ಸಾಮಾನ್ಯರ ಕಷ್ಟ ಸುಖಗಳು ಇವರ ಅರಿವಿಗೆ ಬಾರದ ಂತಹ ಸ್ಥಿತಿ ನಿರ್ಮಾಣವಾಗಿದೆ. ತುಮಕೂರು ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿದೆ. ಕುಡಿಯುವ ನೀರಿಗೆ ಆದ್ಯತೆ ನೀಡಲು ಸರ್ಕಾರ ಮೇಲಿಂದ ಮೇಲೆ ಹೇಳುತ್ತಲೇ ಇದೆ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಿದ್ದರೂ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ವಿವಿಧ ಬಡಾವಣೆಗಳಲ್ಲಿ ನೀರಿನ ಹಾಹಾ ಕಾರ ಹೇಗಿದೆ ಎನ್ನುವುದನ್ನು ಒಮ್ಮೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಜನರ ಮದ್ಯೆ ಹೋದಾಗ ಮಾತ್ರ ಅರಿವಾಗುತ್ತದೆ. ಪಾಲಿಕೆೆಯ ಅಧಿಕಾರಿಗಳು ಸಭೆ ಗಳಲ್ಲೇ ಹೇಳುವ ಅಂಕಿ- ಅಂಶಗಳಂತೆ ನೀರಿನ ಸಮಸ್ಯೆ ಇಲ್ಲ ಎನ್ನುವ ಮಾತನ್ನೇ ಕೇಳುವ ಬದಲು, ವಾಸ್ತವ ಸಂಗತಿಯನ್ನು ಅರಿತು ಬಡವರಿಗೆ ಕನಿಷ್ಠ ಸೌಲಭ್ಯವಾದ ಶುದ್ಧ ಕುಡಿಯುವ ನೀರನ್ನು ಕಲ್ಪಿಸುವತ್ತ ಜಿಲ್ಲಾಡಳಿತ ಹಾಗೂ ಪಾಲಿಕೆ ಮುಂದಾಗಬೇಕಾಗಿದೆ.

ಪರಿಹಾರ ಸಿಗದಿದ್ದಲ್ಲಿ ಪ್ರತಿಭಟನೆ: ನಗರದ ಬಹು ತೇಕ ಬಡಾವಣೆಗಳಲ್ಲಿ ಕುಡಿಯುವ ನೀರಿನ ತಾತ್ವಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನೀರಿನ ಸಮಸ್ಯೆ ಯನ್ನು ಪಾಲಿಕೆ, ಜಿಲ್ಲಾಡಳಿತ ಹಾಗೂ ಜನ ನಾಯಕರು ಗಮನ ಹರಿಸಿ ಕುಡಿಯುವ ನೀರಿನ ಸಮಸ್ಯೆ ಶೀಘ್ರ ವಾಗಿ ಪರಿಹಾರ ಮಾಡದಿದ್ದಲ್ಲಿ, ನಗರದ ನಾಗರಿಕರು ತೀವ್ರ ರೀತಿಯ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸು ತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಜಾಗೃತೆವಹಿಸಿ ನಗರ ದಲ್ಲಿ ಅನಧಿಕೃತವಾಗಿರುವ ರೈಸಿಂಗ್‌ ಮೈನ್‌ಗಳನ್ನು ಕಡಿತಗೊಳಿಸಿ, ಅಗತ್ಯ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಿಕೊಡುವತ್ತ ಅಧಿಕಾರಿಗಳು ಮುಂದಾಗಬೇಕಾಗಿದೆ.

● ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next