Advertisement

ಮೊನ್ನೆ ಹೇಗೋ ಬದುಕಿದ್ದೇವೆ; ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಖಂಡಿತ ಮುಳುಗುತ್ತೇವೆ !

12:21 PM Oct 07, 2020 | Suhan S |

ಇದು ಪ್ರವಾಹೋತ್ತರ ವಿಮರ್ಶೆ. ಮುಂದಿನ ಸಂಕಷ್ಟ ಸಂದರ್ಭವನ್ನು ಇನ್ನಷ್ಟು ಸಮರ್ಥವಾಗಿ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಚರ್ಚೆ. ಉದಯವಾಣಿ ಪತ್ರಿಕೆಯ “ಪ್ರವಾಹದಿಂದ ಕಲಿಯಬೇಕಾದ್ದೇನು’ ಎಂಬ ಜನಾಭಿಪ್ರಾಯ ಅಭಿಯಾನಕ್ಕೆ ಸಾಕಷ್ಟು ಮಂದಿ ಓದುಗರು, ನಾಗರಿಕರು ಸ್ಪಂದಿಸಿದರು. ಇವುಗಳನ್ನು ಸಮಗ್ರಗೊಳಿಸಿ ಇಲ್ಲಿ ನೀಡಲಾಗಿದೆ. ಇಲ್ಲಿಗೆ ಈ ಅಭಿಯಾನ ಪೂರ್ಣಗೊಂಡಿದೆ. ನಾಗರಿಕರು ಸಲಹೆ ನೀಡಿರುವಂತೆ ಮಳೆಗಾಲಕ್ಕೆ ಮುನ್ನ ವಾರ್ಷಿಕ ಕ್ರಮಗಳು (ನದಿ ಹಾಗೂ ತೋಡುಗಳ ಸ್ವತ್ಛಗೊಳಿಸುವಿಕೆ ಇತ್ಯಾದಿ) ಹಾಗೂ ಕೆಲವು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಲೇಬೇಕು. ಇದು ಜನಾಗ್ರಹವೂ ಕೂಡ.

Advertisement

ಉಡುಪಿ, ಅ. 6: ಉಡುಪಿಯಲ್ಲಿ ಕಳೆದ ತಿಂಗಳು ಸಂಭವಿಸಿದ ಜಲಪ್ರಳಯದಂಥ ಸಂಕಷ್ಟ ಸ್ಥಿತಿಯಿಂದ ಕಲಿಯುವುದೇನು? ಎಂಬ ಉದಯವಾಣಿಯ ಜನಾಭಿಪ್ರಾಯದಲ್ಲಿ ವ್ಯಕ್ತವಾದ ಕೆಲವು ಪ್ರಮುಖ ಅಂಶಗಳೆಂದರೆ ಪೂರ್ವ ಸಿದ್ಧತೆಯ ಕೊರತೆ, ನದಿ ಪಾತ್ರದ ಪ್ರದೇಶಗಳ ಅತಿಕ್ರಮಣ ತೆರವು ಹಾಗೂ ನಗರದ ನೀರು ಹರಿದು ಹೋಗಲು ಸುಸಜ್ಜಿತವಾದ ಒಳಚರಂಡಿ ವ್ಯವಸ್ಥೆಯ ಜಾರಿ.

ಇದರೊಂದಿಗೆ ಹಲವರು ಟಾಸ್ಕ್ ಫೋರ್ಸ್‌ ರಚನೆ, ಜನರಿಗೆ ಮಾಹಿತಿ ಕಾರ್ಯಾಗಾರ, ಪ್ರಕೃತಿ ನಾಶಕ್ಕೆ ಕಡಿವಾಣದಂಥ ಬಹಳ ಉಪಯುಕ್ತ ಹಾಗೂ ದೀರ್ಘ‌ಕಾಲಿಕ ಪರಿಣಾಮವನ್ನು ಬೀರುವಂಥ ಸಲಹೆಗಳನ್ನು ನೀಡಿದ್ದಾರೆ. ಬಹಳಷ್ಟು ಮಂದಿ ನಾಗರಿಕರು ಬಹಳ ಉತ್ಸಾಹದಿಂದ ಈ ಜನಾಭಿಪ್ರಾಯ ಅಭಿಯಾನದಲ್ಲಿ ಪಾಲ್ಗೊಂಡರು.

ಜಲ ಪ್ರಳಯದಂಥ ಸ್ಥಿತಿಯನ್ನು ಆ ಬಳಿಕ ಹೇಗೆ ನಿಭಾಯಿಸಿದೆವು? ಸಾವು-ನೋವು ಸಾಧ್ಯತೆಯನ್ನು ಹೇಗೆ ಕಡಿಮೆ ಮಾಡಿದೆವು? ಜಿಲ್ಲಾಡಳಿತ, ನಗರಾಡಳಿತ ಹಾಗೂ ಜನಪ್ರತಿನಿಧಿಗಳು ಯಾವ ರೀತಿ ಕ್ರಿಯಾಶೀಲರಾಗಿದ್ದರು ಎಂಬುದರ ವಿಮರ್ಶೆ ಇಲ್ಲಿ ಮಾಡದೇ, ಎಲ್ಲ ಓದುಗರೂ ಬಹಳ ಮುಖ್ಯವಾಗಿ “ಈ ಬಾರಿ ಹೇಗೋ ಆಯಿತು. ಸಮಸ್ಯೆ ಎಂಬುದು ಬರೀ ಸೊಂಟದವರೆಗೆ ಬಂದಿದೆ. ಬದುಕಿದೆವು. ಹೀಗೇ ನಮ್ಮ ವ್ಯವಸ್ಥೆ ಮುಂದುವರಿದರೆ ಮುಂದಿನ ಬಾರಿ ಮುಳುಗುತ್ತೇವೆ’ ಎಂದು ತಮ್ಮ ಸಲಹೆಗಳ ಮೂಲಕ ಎಚ್ಚರಿಸಿದ್ದಾರೆ. ನಿಜ, ಘಟನೆ ಮೂಗಿನ ನೇರಕ್ಕೆ ಬರುತ್ತದೆಂದು ತಿಳಿಯುತ್ತಿದ್ದಂತೆ ಜಿಲ್ಲಾಡಳಿತ, ನಗರಾಡಳಿತ, ಜನಪ್ರತಿನಿಧಿಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆಗೆ ಇಳಿದಿರಬಹುದು. ಎನ್‌ಡಿಆರ್‌ಎಫ್ ನೆರವೂ ಕೂಡಲೇ ಸಿಕ್ಕಿತು. ಆದರೆ ಈ ಸಮಾಧಾನ ಎಲ್ಲ ಸಂದರ್ಭಗಳಲ್ಲೂ ನಮ್ಮ ಕೈ ಹಿಡಿಯದು ಎಂಬುದು ಸ್ಪಷ್ಟ.

ಎಡವಿದ್ದೆಲ್ಲಿ ಎಂಬುದು ಎಲ್ಲರಿಗೂ ಗೊತ್ತಿದೆ  :  ಈ ಬಾರಿಯ ಜಲ ಪ್ರಳಯದ ಸಂದರ್ಭದಲ್ಲಿ ಎಡವಿದ್ದು ಹೇಗೆ ಹಾಗೂ ಎಲ್ಲಿ ಎಂಬುದು ಎಲ್ಲರಿಗೂ ಗೊತ್ತಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಪರಿಸ್ಥಿತಿಯನ್ನು ಹತೋಟಿಗೆ ತರಲು ಹೆಣಗಾಡಿದರು. ಇದು ಪರಿಸ್ಥಿತಿಯ ಅನಂತರದ ವಿಮರ್ಶೆ. ಆದರೆ ಇಂಥದೊಂದು ಪರಿಸ್ಥಿತಿಯ ಪೂರ್ವಸಿದ್ಧತೆಯಲ್ಲಿ ಬಹಳಷ್ಟು ಕೊರತೆ ಇತ್ತು ಎಂಬುದನ್ನು ಪರಿಣಾಮವೇ ಪ್ರಕಟಪಡಿಸಿದೆ.

Advertisement

ಉದಯವಾಣಿಯು ಮಳೆಗಾಲಕ್ಕೆ ಮೂರು ತಿಂಗಳು ಮುನ್ನ ಇಂದ್ರಾಣಿ ನದಿಯ ಶೋಚನೀಯ ಸ್ಥಿತಿ ಕುರಿತು ಸಾದ್ಯಂತವಾಗಿ ವರದಿ ಮಾಡಿತ್ತು. ಅದರಲ್ಲಿ ನಗರದಲ್ಲಿನ ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ ಇಂದ್ರಾಣಿ ಹೇಗೆ ಸಹಕಾರಿ ಎಂಬುದನ್ನೂ ವಿವರಿಸಲಾಗಿತ್ತು. ಮಳೆಗಾಲದ ಮೊದಲು ಅದನ್ನು ಸ್ವತ್ಛಗೊಳಿಸುವ ಅಗತ್ಯವನ್ನೂ ಪ್ರತಿಪಾದಿಸಿತ್ತು. ಆದರೆ ವಾಸ್ತವದಲ್ಲಿ ಇಂದ್ರಾಣಿ ನದಿಯ ಕೆಲ ಭಾಗಗಳ ಸ್ವತ್ಛತೆ ಆರಂಭವಾಯಿತಾದರೂ ಅದು ಪೂರ್ತಿಗೊಂಡಿರಲಿಲ್ಲ. ಅಷ್ಟರಲ್ಲಿ ಕೊರೊನಾ ಆವರಿಸಿತು. ಎಲ್ಲವೂ ಬದಿಗೆ ಸರಿಯಿತು.

ಇದರೊಂದಿಗೆ ವೈಜ್ಞಾನಿಕ ವ್ಯವಸ್ಥೆಗಳ ಕೊರತೆ. ಹೆಚ್ಚಿನ ರಸ್ತೆಗಳಲ್ಲಿ ನೀರು ಹರಿದುಹೋಗಲು ಸರಿಯಾದ ಚರಂಡಿಯೇ ಇಲ್ಲ. ಇನ್ನು ಕೆಲವೆಡೆ ನೆಪ ಮಾತ್ರಕ್ಕೆ ಎಂಬಂತಿದ್ದು, ಸಾಧಾರಣ ಮಳೆಗೂ ನೀರು ಹರಿಯಲು ಸಾಲುತ್ತಿಲ್ಲ. ಇದ್ದ ಚರಂಡಿಗೆ ಹೆಜ್ಜೆಗೊಂದರಂತೆ ಇರುವ ಅಡೆ-ತಡೆಗಳು. ಪ್ರತಿಯೊಬ್ಬರ ಮನೆ, ಅಂಗಡಿಗಳ ಬುಡಕ್ಕೂ ವಾಹನ ಬರಬೇಕು. ಅದಕ್ಕಾಗಿ ಚರಂಡಿಗೆ ಹಾಕಿದ್ದ ಮಣ್ಣು ಈ ಬಾರಿ  ಮನೆಯೊಳಗೂ ನುಗ್ಗಿತು.

ಪರಿಹಾರ ಇಲ್ಲವೇ? :  ಖಂಡಿತಕ್ಕೂ ಇದೆ. ಆದರೆ ಎಲ್ಲರಲ್ಲೂ ಬದ್ಧತೆ ಇರಬೇಕಷ್ಟೇ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಂದ ಹಿಡಿದು ಜನಪ್ರತಿನಿಧಿಗಳು, ಅಧಿಕಾರಿಗಳು ಹೀಗೆ ಎಲ್ಲರೂ ಎಚ್ಚೆತ್ತು ಭವಿಷ್ಯದ ದೃಷ್ಟಿಯಲ್ಲಿ ಯೋಜನೆ ರೂಪಿಸಿ, ಜಾರಿಗೆ ತಂದರಷ್ಟೇ ಶೇ. 80ರಷ್ಟು ಕಡಿಮೆ ಮಾಡಬಹುದು.

ಓದುಗರ  ಪ್ರಮುಖ ಸಲಹೆಗಳು  :

  • ಜನರು ಸ್ವಯಂ ಜಾಗರೂಕ ರಾಗಿ ತಮ್ಮ ಪರಿಸರದ ತೋಡು, ನದಿ ರಕ್ಷಿಸುವುದು.  ಚರಂಡಿ, ತೋಡುಗಳನ್ನು ವರ್ಷಕ್ಕೆ  2 ಬಾರಿ ತಪ್ಪದೆ ಸ್ವಚ್ಛಗೊಳಿಸುವುದು.
  • ಪ್ಲಾಸ್ಟಿಕ್‌ ವಸ್ತುಗಳ ಸಹಿತ ಯಾವುದೇ ತ್ಯಾಜ್ಯವನ್ನು ತೋಡು, ನದಿಗೆ ಎಸೆಯದಿರುವುದು.
  • ವರ್ಷಕ್ಕೊಮ್ಮೆಯಾದರೂ ಚರಂಡಿ, ತೋಡು, ನದಿಯ ಹೂಳೆತ್ತುವುದು, ಗಿಡಗಳನ್ನು ಸವರುವುದು.
  • ಈಗಾಗಲೇ ನಡೆಸಿರುವ ತೋಡು,  ನದಿ ಬದಿಯ ಅತಿಕ್ರಮಣವನ್ನುತೆರವುಗೊಳಿಸುವುದು.
  • ಕೆಲವೆಡೆ ಪ್ರಮುಖ ತೋಡುಗಳ ದಿಕ್ಕನ್ನೇ ಬದಲಾಯಿಸಿದ್ದು, ಇದನ್ನು ಸರಿಪಡಿಸುವುದು.
  • ಕೆಲವು ತೋಡುಗಳು ಮಧ್ಯದಲ್ಲಿಯೇ  ತಡೆಯಾಗಿ ನೀರು ಸಾಗಲು  ಅಡ್ಡಿಯಾಗಿರುವುದು.’
  • ಗದ್ದೆಗಳಿಗೆ ಮಣ್ಣು ತುಂಬಿಸಿ ಅವೈಜ್ಞಾನಿಕವಾಗಿ ಕಟ್ಟಡಗಳನ್ನು ನಿರ್ಮಿಸಿರುವುದು.
  • ವಸತಿ ಸಮುಚ್ಚಯಗಳನ್ನು ನಿರ್ಮಿಸುವಾಗ ನೀರು ಹರಿದುಹೋಗಲು ವ್ಯವಸ್ಥೆ  ಮಾಡದಿರುವುದು.
  • ನಗರದಲ್ಲಿಯೂ ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದು. ಸಹಜವಾಗಿ ನೀರು ಹರಿದುಹೋಗುವಂತೆ ವ್ಯವಸ್ಥೆ ಇಲ್ಲದಿರುವುದು.
  • ನೆರೆ ಎದುರಿಸಲು ಸಮರ್ಪಕ ತರಬೇತಿ ಪಡೆದ ತಂಡವನ್ನು ರಚಿಸುವುದು.
  • ಅತಿಕ್ರಮಣಕಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು.

 

ಪಾಠಕಲಿಯಬೇಕೀಗ ;  ಮೂವತ್ತೆಂಟು ವರ್ಷಗಳ ಹಿಂದೆ ಇಂಥದೊಂದು ಸ್ಥಿತಿ ಉದ್ಭವಿಸಿದಾಗ ಪತ್ರಿಕಾ ವರದಿಗಳಷ್ಟೇ ಸಾಕ್ಷಿ ಇದ್ದವು. ಆದರೀಗ ಎಲ್ಲೆಲ್ಲಿ ಸಮಸ್ಯೆಯಾಯಿತು? ಹೇಗೆ ಸಮಸ್ಯೆಯಾಯಿತು ಎಂಬುದನ್ನು ವಿಮರ್ಶಿಸಲು ವೀಡಿಯೋ ದಾಖಲೆಯೂ ಇದೆ. ಇದನ್ನೆಲ್ಲ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳು, ಪ್ರಕೃತಿ ವಿಕೋಪ ಎದುರಿಸುವ ತಂಡಗಳಿಗೆ ಸಮರ್ಪಕ ತರಬೇತಿ ಎಲ್ಲವೂ ಸಾಧ್ಯವಾಗಬೇಕು. ತಗ್ಗು ಪ್ರದೇಶಗಳಲ್ಲಿ ಕೈಗೊಳ್ಳಬಹುದಾದ ಶಾಶ್ವತ ಕ್ರಮಗಳ ಕುರಿತೂ ಗಮನಹರಿಸಬೇಕು. ಬದ್ಧತೆಯಿಂದ ಇದನ್ನು ಜಾರಿಗೊಳಿಸದಿದ್ದರೆ ಈ ಬಾರಿ ಸಂಕಷ್ಟದಲ್ಲೂ ಅಷ್ಟೊಂದು ಸಾವು ನೋವು ಸಂಭವಿಸಲಿಲ್ಲ ಎಂದು ಸಮಾಧಾನ ಪಟ್ಟೆವೋ, ಆ ಸಮಾಧಾನ ಮುಂದಿನ ಬಾರಿ ಇರದು ಎಂಬುದನ್ನು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಅರಿತುಕೊಳ್ಳಬೇಕಾದುದು ತೀರಾ ಅಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next