Advertisement

ಡಿಎಂಎಫ್‌ ಬಳಕೆಗೆ ಜನರ ಸಹಭಾಗಿತ್ವ ಹೆಚ್ಚಲಿ: ಅಶೋಕ್‌

04:45 PM Dec 17, 2018 | Team Udayavani |

ಬಳ್ಳಾರಿ: ಗಣಿ ಬಾಧಿತ ಜನರ ಕಲ್ಯಾಣಕ್ಕಾಗಿ ಇರುವ ಜಿಲ್ಲಾ ಖನಿಜ ನಿಧಿ(ಡಿಎಂಎಫ್‌) ಮತ್ತದರ ಅನುಕೂಲತೆಗಳ ಬಗ್ಗೆ ತಿಳಿವಳಿಕೆ ಇಲ್ಲದಿರುವುದರಿಂದ ಜನಸಾಮಾನ್ಯರು ಸಮಸ್ಯೆಗಳ ಸುಳಿಗೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಎಂಎಂಪಿ ಪ್ರಧಾನ ಕಾರ್ಯದರ್ಶಿ ಅಶೋಕ್‌ ಶ್ರೀಮಾಲಿ ಹೇಳಿದರು.

Advertisement

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ, ಡಿಎಂಎಫ್‌ ನಿಧಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಗಣಿಬಾಧಿತ ಪ್ರದೇಶ, ಅಲ್ಲಿನ ಜನರ ಕಲ್ಯಾಣಕ್ಕಾಗಿ ಇರುವ ಜಿಲ್ಲಾ ಖನಿಜ
ನಿಧಿಯ ಬಗ್ಗೆ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು. ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಗಣಿಬಾಧಿತ ಜನರು ವಿಕಾಸವಾಗಬೇಕಾದರೆ ಆ ಪ್ರದೇಶಗಳಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ಆಗಬೇಕು. ಅದಕ್ಕಾಗಿ ಜಿಲ್ಲಾ ಖನಿಜ ನಿಧಿ ಸಮರ್ಪಕವಾಗಿ ಬಳಕೆಯಾಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದರು.

ಎಂಎಂಪಿ ಕಾರ್ಯಕಾರಣಿ ಸದಸ್ಯ ಶಿವಕುಮಾರ ಮಾಳಗಿ ಮಾತನಾಡಿ, ಬಳ್ಳಾರಿ ಜಿಲ್ಲೆ ಗಣಿಗಾರಿಕೆಯ ಹಣ ಒಟ್ಟು 768 ಕೋಟಿ ರೂ.ಗಳಷ್ಟಿದೆ. ಇದರಲ್ಲಿ 391 ಕೋಟಿ ರೂ. ಗಳಿಗೆ 264 ಯೋಜನೆಗಳನ್ನು ಅಂದಾಜು ಮಾಡಲಾಗಿತ್ತು, ಇದರಲ್ಲಿ ಕೇವಲ 24 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಲಾಗಿದೆ. ಜನರಿಗೆ ಡಿಎಂಎಫ್‌ ಫಂಡ್‌ ಬಗ್ಗೆ ಮಾಹಿತಿ
ಇಲ್ಲದಿರುವುದೇ ಮುಖ್ಯ ಕಾರಣವಾಗಿದೆ. ಗ್ರಾಮ ಮಟ್ಟದಲ್ಲಿ ಗ್ರಾಮ ಸಭೆಯಲ್ಲಿ ಇದರ ಬಗ್ಗೆ ಚರ್ಚೆಗಳಾಗಬೇಕು. ಡಿಎಂಎಫ್‌ ಫಂಡ್‌ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದರು. 

ಗಣಿಬಾಧಿತ ಜನರ ಕಲ್ಯಾಣಕ್ಕಾಗಿ ರೂಪಿಸುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಜನರು ಪಾಲ್ಗೊಳ್ಳುವಿಕೆ ಕಡ್ಡಾಯವಾಗಬೇಕು. ಅವರ ತೀರ್ಮಾನವೆ ಅಂತಿಮವಾಗಬೇಕು. ಡಿಎಂಎಫ್‌ ಯೋಜನೆಗಳನ್ನು ಪ್ರತಿ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ರೂಪಿಸಬೇಕು ಎಂದು ಹೇಳಿದರು.

ಆ ಪಂಚಾಯತ್‌ ರೂಪಿಸಿದ ಕ್ರಿಯಾ ಯೋಜನೆಗೆ ಅಗತ್ಯವಾಗಿರುವ ಅನುದಾನವನ್ನು ಡಿಎಂಎಫ್‌ ವತಿಯಿಂದ ಒದಗಿಸಿ ಕೊಡಬೇಕು. ಪಿಎಂಕೆಕೆವೈ ಅಡಿಯಲ್ಲಿ ಕೈಗೊಳ್ಳುವ ಎಲ್ಲ ಕಾರ್ಯಕ್ರಮಗಳು ಗಣಿಬಾಧಿತ ಗ್ರಾಮ ಮತ್ತು ಪಟ್ಟಣ ಕೇಂದ್ರೀಕೃತವಾಗಿದ್ದು, ಮೈಕ್ರೊ ಲೆವೆಲ್‌ ಪ್ಲಾನಿಂಗ್‌ ಇರಬೇಕು. ಫಲಾನುಭವಿಗಳ ಆಯ್ಕೆಯನ್ನು ಗ್ರಾಮ ಮತ್ತು ಪಟ್ಟಣ ಸಭೆಗಳು ನಡೆಸುವ ಮೂಲಕ ಮಾಡಬೇಕು ಎಂದರು.

Advertisement

ಫಲಾನುಭವಿಗಳ ಆಯ್ಕೆಯಲ್ಲಿ ಗಣಿಗಾರಿಕೆಯಿಂದ ನೇರವಾಗಿ ಬಾಧಿತರಾದ ಎಲ್ಲ ಸಮುದಾಯಗಳ ಜನರಿಗೆ ಮೊದಲ
ಆದ್ಯತೆ ನೀಡಬೇಕು. ಡಿಎಂಎಫ್‌ ಅಡಿಯಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಪ್ರತಿ ಗ್ರಾಮಮಟ್ಟದಲ್ಲೂ ವ್ಯಾಪಕ ಪ್ರಚಾರ ನೀಡಬೇಕು. ಗ್ರಾಮಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಬೇಕು ಎಂದು ತಿಳಿಸಿದರು. 

ಸಾಮಾಜಿಕ ಹೋರಾಟಗಾರ ಮಲ್ಲಿಸ್ವಾಮಿ ಮಾತನಾಡಿದರು. ಬಳಿಕ ಗಣಿ ಕುರಿತು ಸಾಕ್ಷಾಚಿತ್ರ ಪ್ರದರ್ಶಿಸಲಾಯಿತು. ಗಣಿಬಾಧಿತ ಜನರೊಂದಿಗೆ ಸಂವಾದ ನಡೆಯಿತು. ಸಮಾವೇಶದಲ್ಲಿ ಡಿಎಸ್ಸೆಸ್‌ ಮುಖಂಡ ಜೆ. ಜಗನ್ನಾಥ್‌, ಎಂಎಂಪಿ ಕಾರ್ಯಕಾರಿಣಿ ಸದಸ್ಯೆ ಭಾಗ್ಯಾ, ಜಿಲ್ಲಾ ಗಣಿ ಕಾರ್ಮಿಕ ಸಂಘದ ವೈ. ಗೋಪಿ, ಸಾಮಾಜಿಕ ಹೋರಾಟಗಾರ ಅಮರೇಶಪ್ಪ, ಬಸವರಾಜ್‌, ಗಾಳೆಮ್ಮ, ದೇವಮ್ಮ, ರೂಪಾ, ಲಕ್ಷ್ಮೀ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next