ರಾಯಚೂರು: ನಗರ ಸೇರಿದಂತೆ ಜಿಲ್ಲಾದ್ಯಂತ ಮಂಗಳವಾರ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆಸ್ಪದ ನೀಡದಂತೆ ಸರಳವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಜಿಲ್ಲಾಡಳಿತದಿಂದ ನಗರದ ಡಿಎಆರ್ ಪೊಲೀ ಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಧ್ವಜಾರೋಹಣ ನೆರವೇರಿಸಿದರು. ವಿವಿಧ ಪೊಲೀಸ್ ಕವಾಯತು ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ಈ ಬಾರಿಯೂ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿರಲಿಲ್ಲ.
ಬಳಿಕ ಮಾತನಾಡಿದ ಉಸ್ತುವಾರಿ ಸಚಿವ, ಸಂವಿಧಾನ ಅಧಿಕೃತ ಜಾರಿಗೊಳಿಸಿದ ದಿನದ ಸ್ಮರಣಾರ್ಥ ಗಣರಾಜ್ಯೋತ್ಸವ ಆಚರಿಸುತ್ತ ಬಂದಿದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳು ತಮ್ಮದೇ ಕೊಡುಗೆ ನೀಡುತ್ತ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯುತ್ತಿರುವುದು ಗಮನಾರ್ಹ ಎಂದರು.
ಕಳೆದ ವರ್ಷ ಕೋವಿಡ್ ಸೋಂಕು ವಿಶ್ವವನ್ನೇ ನಡುಗಿಸಿತ್ತು. ಲಸಿಕೆ ಆವಿಷ್ಕಾರಗೊಂಡಿದ್ದು, ಈಗ ಸೋಂಕು ನಿಯಂತ್ರಣಕ್ಕೆ ಬಂದಿದೆ. ಲಸಿಕೆ ಬಗ್ಗೆ ಕೆಲವರು ಮಾಡುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು. ಜಿಲ್ಲೆಗೆ ಈಗಾಗಲೇ 9 ಸಾವಿರ ಡೋಸ್ ಲಸಿಕೆ ಬಂದಿದ್ದು, ಮೊದಲ ಹಂತದಲ್ಲಿ ವೈದ್ಯರು, ಸ್ಟಾಫ್ ನರ್ಸ್‌ಗಳು, ಗ್ರೂಪ್-ಡಿ ಸಿಬ್ಬಂದಿ ಸೇರಿ 15,260 ಆರೋಗ್ಯ ಕಾರ್ಯಕರ್ತರನ್ನು ಲಸಿಕೆಗಾಗಿ ಗುರುತಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯ ಸರ್ವತೋಮುಖ ಪ್ರಗತಿಗೆ ಸರ್ಕಾರ ಬದ್ಧವಾಗಿದೆ. ಈಗಾಗಲೇ ವಿಮಾನ ನಿಲ್ದಾಣಕ್ಕೆ ಡಿಪಿಆರ್ ಸಿದ್ಧಪಡಿಸುತ್ತಿದ್ದು, ಕೆಕೆಆರ್‌ಡಿಬಿಯಡಿ 40 ಕೋಟಿ ಮತ್ತು ಡಿಎಂಎಫ್ ಅಡಿ 10 ಕೋಟಿ ಸೇರಿದಂತೆ ಒಟ್ಟು 50 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದರು. ಕಳೆದ ವರ್ಷ ಸುರಿದ ಮಳೆಯಿಂದ ಉಂಟಾದ ಬೆಳೆಹಾನಿಗೆ 17.33 ಕೋಟಿ ಪರಿಹಾರ ನೀಡಲಾಗಿದೆ. ಇನ್ನುಳಿದ 16 ಸಾವಿರ ಫಲಾನುಭವಿಗಳಿಗೆ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ.
ಪ್ರಧಾನಮಂತ್ರಿಗಳ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರದಿಂದ 196 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 75 ಕೋಟಿ ರೂ. ರೈತರ ಬ್ಯಾಂಕ್ ಖಾತೆಗೆ ಜಮೆಯಾಗಿವೆ ಎಂದು ವಿವರಿಸಿದರು. ಜಲಜೀವನ್ ಮಿಶನ್ ಯೋಜನೆಯಡಿ 313 ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಪ್ರಸಕ್ತ ಸಾಲಿನಲ್ಲಿ 225.43 ಕೋಟಿ ಅನುದಾನ ಮಂಜೂರಾಗಿದ್ದು, 313 ಕಾಮಗಾರಿಗಳ ಪೈಕಿ, 266 ಕಾಮಗಾರಿ ಟೆಂಡರ್ ಕರೆದಿದ್ದು, 213 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ ಎಂದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲೆಗೆ 2,300 ಮನೆಗಳು ಮಂಜೂರಾಗಿವೆ. ಅದರಲ್ಲಿ 2,097 ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, 80.66 ಕೋಟಿ ರೂ. ವೆಚ್ಚವಾಗಿದೆ. ಕೆಕೆಆರ್ ಡಿಬಿಯಿಂದ ಜಿಲ್ಲೆಗೆ ಈವರೆಗೆ 1,204 ಕೋಟಿ ಅನುದಾನ ಸಿಕ್ಕಿದ್ದು, 3,108 ಕಾಮಗಾರಿ ಮಂಜೂರಾಗಿವೆ. 2,468 ಕಾಮಗಾರಿಗಳು ಮುಗಿದಿದ್ದು, 736 ಕೋಟಿ ಅನುದಾನ ಭರಿಸಲಾಗಿದೆ. ಉದ್ಯೋಗಖಾತ್ರಿಯಡಿ 291 ಕೋಟಿ ಅನುದಾನ ಭರಿಸಲಾಗಿದ್ದು, 9,229 ಇಂಗು ಗುಂಡಿ, 1,764 ಕೈತೋಟ, 6,845 ಬದು ನಿರ್ಮಾಣ, 1680 ಕೃಷಿ ಹೊಂಡ ನಿರ್ಮಿಸಲಾಗಿದೆ. ಸಮುದಾಯದ ಕಾಮಗಾರಿಗಳ ಪೈಕಿ 155 ಗೋಕಟ್ಟೆ, 518 ಮಳೆ ನೀರಿನ ಕೊಯ್ಲು, 576 ಅಡುಗೆ ಕೋಣೆಗಳು, 201 ಅಂಗನವಾಡಿ ಕೇಂದ್ರಗಳು, 360 ಶಾಲಾ ಕಾಂಪೌಂಡ್, 47 ಕಲ್ಯಾಣಿಗಳು, 22 ಗ್ರಾಪಂ ಕಟ್ಟಡಗಳು, 25 ಗೋದಾಮು, 6 ಸಂತೆಕಟ್ಟೆ ಹಾಗೂ 17 ಆಟದ ಮೈದಾನಗಳ ನಿರ್ಮಿಸಲಾಗಿದೆ.
2020-21ನೇ ಸಾಲಿಗೆ ಮೂರು ಹೊಸ ಪ.ಪೂ ಕಾಲೇಜುಗಳಿಗೆ ಮಂಜೂರಾತಿ ನೀಡಿದ್ದು, 120 ಉಪನ್ಯಾಸಕರನ್ನು ನೇಮಿಸಲಾಗಿದೆ ಎಂದು ವಿವರಿಸಿದರು.
ಈ ವೇಳೆ ಶಾಸಕರಾದ ಡಾ| ಶಿವರಾಜ್ ಪಾಟೀಲ್, ದದ್ದಲ್ ಬಸನಗೌಡ, ಜಿಲ್ಲಾ ಧಿಕಾರಿ ಆರ್. ವೆಂಕಟೇಶ ಕುಮಾರ್, ಜಿಪಂ ಸಿಇಒ ಶೇಖ್ ತನ್ವೀರ್ ಅಸೀಫ್, ಎಸ್‌ಪಿ ಪ್ರಕಾಶ ನಿಕ್ಕಂ ಸೇರಿದಂತೆ ಇತರರಿದ್ದರು.