ಉಳ್ಳಾಲ: ಒಂದು ಸರಕಾರಿ ಸಂಸ್ಥೆ ಬೆಳೆಯ ಬೇಕಾದರೆ ಕೇವಲ ಜನಪ್ರತಿನಿಧಿಗಳಿಂದ ಸಾಧ್ಯವಿಲ್ಲ. ಆ ಸಂಸ್ಥೆಗೆ ಸಂಬಂಧಿಸಿದ ಊರಿನ ಸಂಘ ಸಂಸ್ಥೆ ಮತ್ತು ಜನರ ಸಹಕಾರ ಇದ್ದರೆ ಒಂದು ಮಾದರಿ ಸಂಸ್ಥೆಯಾಗಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಅಂಬ್ಲಿಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಯಲ್ಲಿ ಅಂಬ್ಲಿಮೊಗರು ಪ್ರದೇಶದ ಜನರ ಸಹಕಾರದಿಂದ ಮಾದರಿ ಸಂಸ್ಥೆಯಾಗಿ ಬೆಳೆದಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ವಿಧಾನಸಭೆ ವಿಪಕ್ಷದ ಉಪ ನಾಯಕ ಹಾಗೂ ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಅಂಬ್ಲಿಮೊಗರು ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯತ್ತ ಸಮುದಾಯ ಕಾರ್ಯಕ್ರಮ, ನೂತನ ಯು.ಕೆ.ಜಿ. ತರಗತಿ ಉದ್ಘಾಟನೆ ಮತ್ತು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸಮ್ಮಾನ ನೆರವೇರಿಸಿ ಮಾತನಾಡಿ, ಅಂಬ್ಲಿಮೊಗರುವಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಯೊಂದಿಗೆ ಹೆಕೂಲ್ ಆರಂಭಕ್ಕೆ ಇಲ್ಲಿನ ಶಿಕ್ಷಕರ ಸಂಘ – ಸಂಸ್ಥೆಗಳ ಜನರ ಸಹಕಾರದಿಂದ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಗೊಂಡು ವಿದ್ಯಾರ್ಥಿಗಳಿಗೆ ಇನ್ನಷ್ಟು ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸಲಾಗುವುದು ಎಂದರು.
ಮುಂಬಯಿ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಕ್ಕಳು ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನಕೊಡಬೇಕು ಎಂದರು.
ಹರೇಕಳ ಗ್ರಾ.ಪಂ. ಅಧ್ಯಕ್ಷೆ ಲತಾ, ಉಪಾಧ್ಯಕ್ಷ ಮೊಹಮ್ಮದ್ ಇಕ್ಬಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಪ್ರಶಾಂತ್ ಕುಮಾರ್, ಮುನ್ನೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರೆಹನಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬುಸಾಲಿ, ತಾ.ಪಂ. ಮಾಜಿ ಸದಸ್ಯ ಸುದರ್ಶನ್ ಶೆಟ್ಟಿ, ಗ್ರಾ. ಪಂ. ಮಾಜಿ ಅಧ್ಯಕ್ಷ ಸಂಜೀವ ಶೆಟ್ಟಿ, ವಿಠಲ್ ಶೆಟ್ಟಿ, ಪ್ರಮುಖರಾದ ಸದಾಶಿವ ಶೆಟ್ಟಿ ಪಡ್ಯಾರ ಮನೆ ಉಪಸ್ಥಿತರಿದ್ದರು.
ಈ ಸಂದರ್ಭ ಪ.ಪೂ. ಕಾಲೇಜು ಸ್ಥಾಪನೆ ಮತ್ತು ಅಡುಗೆ ಸಿಬಂದಿ ವೇತನ ಹೆಚ್ಚಳಕ್ಕೆ ಶಾಸಕ ಯು.ಟಿ. ಖಾದರ್ ಅವರಿಗೆ ಶಾಲಾ ಮುಖ್ಯೋಪಧ್ಯಾಯರು, ಶಾಲಾಭಿವೃದ್ಧಿ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಶಾಲೆಗೆ ಕೊಡುಗೆ ನೀಡಿದ ದಾನಿಗಳನ್ನು ಮತ್ತು ಸಹಕರಿಸಿದ ಸ್ಥಳೀಯ ಸಂಘ – ಸಂಸ್ಥೆಗಳನ್ನು ಗೌರವಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಶೆಟ್ಟಿ ಸ್ವಾಗತಿಸಿ, ಶಿಕ್ಷಕಿ ಗೀತಾ ನಿರೂಪಿಸಿದರು, ಶಿಕ್ಷಕರಾದ ಅಹ್ಮದ್ ವಂದಿಸಿದರು.