Advertisement

ಜನರನ್ನು ಸೆಳೆಯುತ್ತಿವೆ ಪಿಂಕ್‌ ಮತಗಟ್ಟೆಗಳು

12:51 PM May 12, 2018 | |

ಬೆಂಗಳೂರು: ಶನಿವಾರ ಬೆಂಗಳೂರಿನ 26 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಮತದಾನ ಪ್ರಕ್ರಿಯೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮಹಿಳಾ ಮತದಾರರನ್ನು ಸೆಳೆಯಲು ಬೆಂಗಳೂರಿನ 100 ಕಡೆ ನಿರ್ಮಿಸಿರುವ “ಸಖೀ ಪಿಂಕ್‌’ ಮತಗಟ್ಟೆಗಳು ಗಮನ ಸೆಳೆಯುತ್ತಿವೆ.

Advertisement

ಜಯನಗರ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ 26 ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ಮತದಾನ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಶುಕ್ರವಾರವೇ ಮತಗಟ್ಟೆಗಳಿಗೆ ಹಾಜರಾಗಿದ್ದು, ಮತದಾನ ಪ್ರಕ್ರಿಯೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ 30 ನಿಮಿಷ ಕಾಲ ಎಲ್ಲ ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಮತದಾನ ಪ್ರಾತ್ಯಕ್ಷಿಕೆ ನಡೆಯಲಿದ್ದು, ನಂತರದಲ್ಲಿ ಮತದಾನ ನಡೆಯಲಿದೆ.

ಬೆಂಗಳೂರಿನಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ 100 ಕಡೆಗಳಲ್ಲಿ ಪಿಂಕ್‌ ಮತಗಟ್ಟೆ ನಿರ್ಮಿಸಲಾಗಿದ್ದು, ಮತದಾನ ಪ್ರಕ್ರಿಯೆಯಲ್ಲಿ ಮಹಿಳೆ ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡುವುದು ಪಿಂಕ್‌ ಮತಗಟ್ಟೆಗಳ ಉದ್ದೇಶವಾಗಿದೆ. ಆ ಹಿನ್ನೆಲೆಯಲ್ಲಿ ಎಲ್ಲ 100 ಮತಗಟ್ಟೆಗಳನ್ನು ಗುಲಾಬಿ ಬಣ್ಣದಿಂದ ಕೂಡಿದ ಸ್ವಾಗತ ಕಮಾನು, ಬಲೂನ್‌ಗಳಿಂದ ಸಿಂಗಾರಗೊಳಿಸಲಾಗಿದ್ದು, ಮತದಾರರನ್ನು ಆಕರ್ಷಿಸುತ್ತಿವೆ.

ರಾಜ್ಯದ ಇತರೆ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ರಾಜಧಾನಿ ಬೆಂಗಳೂರಿನಲ್ಲಿ ಅತಿ ಕಡಿಮೆ ಮತದಾನ ಪ್ರಮಾಣ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಆಯೋಗದಿಂದ ಹಲವು ಪ್ರಚಾರಾಂದೋಲನಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯ ಭಾಗವಹಿಸುವಿಕೆ ಹೆಚ್ಚಿಸಲು “ಸಖೀ ಪಿಂಕ್‌’ ಮತಗಟ್ಟೆಗಳನ್ನು ಆಯೋಗ ಇದೇ ಮೊದಲ ಬಾರಿಗೆ ನಿರ್ಮಿಸಿದೆ.

ಪಿಂಕ್‌ ಮತಟ್ಟೆಯಲ್ಲಿ ಮತದಾನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನೋಡಿಕೊಳ್ಳಲಿದ್ದು,
ಒಟ್ಟು ಐದು ಮಂದಿ ಮಹಿಳೆಯರು ಇಡೀ ದಿನ ಕಾರ್ಯನಿರ್ವಹಿಸಲಿದ್ದಾರೆ. ಮಹಿಳೆಯರನ್ನು ಸೆಳೆಯಲು ಗುಲಾಬಿ ಬಣ್ಣದಿಂದ ಅಲಂಕರಿಸಲಾಗಿದ್ದರೂ, ಪಿಂಕ್‌ ಮತಗಟ್ಟೆಗಳಲ್ಲಿ ಪುರುಷ ಮತದಾರರಿಗೂ ಮತದಾನ ಮಾಡಲು ಅವಕಾಶವಿದೆ.

Advertisement

ತಿಂಡಿ-ಊಟದ ವ್ಯವಸ್ಥೆ: ನಗರದ 26 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಶುಕ್ರವಾರ ಚುನಾವಣಾ ಆಯೋಗದಿಂದ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡುತ್ತಿರುವ ಗುತ್ತಿಗೆದಾರರು ಶುಕ್ರವಾರ ಸುಮಾರು 45 ಸಾವಿರ ರೂ. ಸಿಬ್ಬಂದಿಗೆ ತಿಂಡಿ ಹಾಗೂ ಊಟ ಪೂರೈಕೆ ಮಾಡಿದ್ದಾರೆ

ಇಂದಿರಾ ಕ್ಯಾಂಟೀನ್‌ಗೆ ರಜೆ
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿರುವ 198 ಇಂದಿರಾ ಕ್ಯಾಂಟೀನ್‌ಗಳಿಗೆ ಶನಿವಾರ ರಜೆ ಘೋಷಿಸಲಾಗಿದ್ದು, ಶನಿವಾರ ಕ್ಯಾಂಟೀನ್‌ಗಳಲ್ಲಿ ತಿಂಡಿ-ಊಟ ದೊರೆಯುವುದಿಲ್ಲ. ಕ್ಯಾಂಟೀನ್‌ ಗಳಲ್ಲಿಯೂ ಸಾವಿರಾರು ಜನರು ಕೆಲಸ ಮಾಡುತ್ತಿದ್ದು, ಅವರು ಸಹ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ರಜೆ ಘೋಷಿಸಲಾಗಿದ್ದು, ನಗರದ ಜನರು ಸಹಕರಿಸಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್‌ ರಾಜನ್‌ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next