ಮಹಾಲಿಂಗಪುರ: ಪಟ್ಟಣದಲ್ಲಿ ಹಲವು ಸಮಸ್ಯೆಗಳ ತಾಂಡವವಾಡುತ್ತಿದ್ದರೂ ಇಲ್ಲಿಯ ಪುರಸಭೆ ಅಧಿಕಾರಿಗಳು ಕಂಡೂ ಕಾಣದಂತೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಒಂದೂವರೆ ತಿಂಗಳಿನಿಂದ ಪಟ್ಟಣದಲ್ಲಿ ಸಾರ್ವಜನಿಕ ವಿದ್ಯುದ್ದೀಪದ ಸಮಸ್ಯೆಗಳು ಹೆಚ್ಚಾಗಿವೆ. ಪಟ್ಟಣದ ಗಾಂಧಿ ವೃತ್ತ, ಹಿಂದೂ ರುದ್ರಭೂಮಿಯಲ್ಲಿನ ಹೈಮಾಸ್ಟ್ ಮತ್ತು ಮರ್‌ಕೂರಿ ದೀಪಗಳು ಬಂದಾಗಿವೆ. ರಾತ್ರಿ ವೇಳೆ ಶವಸಂಸ್ಕಾರಕ್ಕಾಗಿ ರುದ್ರಭೂಮಿಗೆ ಹೋಗಲು ತೊಂದರೆಯಾಗಿದೆ. ಸಂಬಂಧಿಸಿದವರು ದುರಸ್ತಿ ಮಾಡಲು ಮುಂದಾಗಿಲ್ಲ ಎಂದು ಗಾಂಧಿ ವೃತ್ತದಲ್ಲಿನ ಔಷಧ ವ್ಯಾಪಾರಿ ಬಸನಗೌಡ ಗೋಲಪ್ಪನವರ ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚರಂಡಿ-ರಸ್ತೆ ಸಮಸ್ಯೆ ಹೇಳತೀರದು: 24×7 ಕುಡಿಯ ನೀರಿನ ಕಾಮಗಾರಿಗಾಗಿ ಪಟ್ಟಣದ ಹಲವಡೆ ರಸ್ತೆಗಳನ್ನು ಅಗೆದು ಹಾಗೇ ಬಿಟ್ಟಿದ್ದಾರೆ. ಕೆಲವು ಭಾಗದಲ್ಲಿ ಚರಂಡಿಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿಯುತ್ತಿವೆ. ಜವಳಿ ಬಜಾರ ಮತ್ತು ಕೆಂಗೇರಿಮಡ್ಡಿ ರಸ್ತೆ, ಬುದ್ನಿ ಪಿಡಿ-ಕಲ್ಪಡ ರಸ್ತೆಗಳು ಸಂಪೂರ್ಣ ಹಾಳಾಗಿದ್ದರೂ ಅಧಿಕಾರಿಗಳ ಇತ್ತ ಗಮನ ಹರಿಸುತ್ತಿಲ್ಲ. ಮೊನ್ನೆ ರಾತ್ರಿ ಸುರಿದ ಅಲ್ಪ ಮಳೆಗೆ ಚರಂಡಿಗಳು ತುಂಬಿ, ರಸ್ತೆಗಳ ಮೇಲೆ ನೀರು ಹರಿದು ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ಶಿವಲಿಂಗ ಘಂಟಿ ಆರೋಪಿಸಿದ್ದಾರೆ.
ಹೆಲ್ತ್ ಡೇ ಮೂಲಕ ಸ್ವಚ್ಛತೆಗೆ ಆದ್ಯತೆ: ಪ್ರತಿ ಗುರುವಾರ-ಶನಿವಾರದಂದು ಒಂದೊಂದು ವಾರ್ಡ್‌ನಲ್ಲಿ ಹೆಲ್ತ್ ಡೇ ಆಚರಿಸುವ ಮೂಲಕ ಆಯಾ ವಾರ್ಡ್‌ನ ಸಂಪೂರ್ಣ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕ ವಿದ್ಯುತ್ ದ್ವೀಪದ ನಿರ್ವಹಣೆಯ ಟೆಂಡರ್ ಕರೆಯಲಾಗಿದೆ. ಹೈಮಾಸ್ಟ್ ದ್ವೀಪಗಳನ್ನು ತಕ್ಷಣ ದುರಸ್ತಿಗೊಳಿಸಲಾಗುವುದು. ನಗರೋತ್ಥಾನ ಮತ್ತು 24×7 ಕಾಮಗಾರಿಯ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಶೀಘ್ರ ಕಾಮಗಾರಿ ಮುಗಿಸಲು ಹೇಳಿದ್ದೇವೆ. ಜವಳಿ ಬಜಾರ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ ಎಂದು ಮುಖ್ಯಾಧಿಕಾರಿ ಕೆ.ಆಯ್. ನಾಗನೂರ ಹೇಳಿದ್ದಾರೆ.