Advertisement

ಅಕ್ಷರ ಜಾತ್ರೆ ಕಣ್ತುಂಬಿಕೊಂಡ ಜನತ

10:31 AM Dec 09, 2018 | Team Udayavani |

ಕಲಬುರಗಿ: ತೊಗರಿ ಕಣಜ, ಸೂರ್ಯ ನಗರಿ ಎಂದೇ ಖ್ಯಾತಿ ಪಡೆದಿರುವ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಶನಿವಾರ ವಿವಿಧ ಜಾನಪದ ಕಲಾತಂಡಗಳ ಮೆರಗಿನೊಂದಿಗೆ ಸರ್ವಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. 50 ವರ್ಷಗಳ ಇತಿಹಾಸ ಹೊಂದಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ಮಹಿಳಾ ಅಧ್ಯಕ್ಷರಾಗಿ ಡಾ| ನಾಗಾಬಾಯಿ ಬುಳ್ಳಾ ಕನ್ನಡದ ರಥವೇರಿ ಕಂಗೊಳಿಸಿದರು. ನೆಹರೂ ಗಂಜ್‌ ಪ್ರದೇಶದ ನಗರೇಶ್ವರ ಶಾಲೆಯಿಂದ ಕನ್ನಡ ಭವನದ ವರೆಗೆ ಸರ್ವಾಧ್ಯಕ್ಷರ ಮೆರವಣಿಗೆಗೆ ಜಿಪಂ ಅಧ್ಯಕ್ಷೆ
ಸುವರ್ಣಾ ಮಾಲಾಜಿ ಕನ್ನಡದ ಧ್ವಜ ತೋರುವ ಮೂಲಕ ಚಾಲನೆ ನೀಡಿದರು.

Advertisement

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಮೇಯರ್‌ ಮಲ್ಲಮ್ಮ ವಳಕೇರಿ, ಸುವರ್ಣಾ ಮಲಾಜಿ ರಥವನ್ನು ಏರಿ ಸಮ್ಮೇಳನ ಸರ್ವಾಧ್ಯಕ್ಷರಿಗೆ ಸಾಥ್‌ ಕೊಟ್ಟರು. ಅಲ್ಲಿಂದ ಡಾ| ನಾಗಾಬಾಯಿ ಬುಳ್ಳಾ, ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಮೆರವಣಿಗೆಯಲ್ಲಿ ಸಾಗಿದರು.

ಇದಕ್ಕೂ ಮುನ್ನ ಕನ್ನಡ ಭವನ ಆವರಣದಲ್ಲಿ ಬೆಳಗ್ಗೆ ರಾಷ್ಟ್ರ ಧ್ವಜಾರೋಹಣವನ್ನು ಡಾ| ನಾಗಾಬಾಯಿ ಬುಳ್ಳಾ , ಪರಿಷತ್‌ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ನೆರವೇರಿಸಿದರು.

ಜನಮನ ಸೆಳೆದ ಮೆರವಣಿಗೆ: ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಕನ್ನಡದ ಕಂಪು ಹರಡಿತು. ಹಸಿರು, ಕೆಂಪು ರಂಗಿನ ಕನ್ನಡದ ಬಾವುಟ ಹಿಡಿದವರು, ಶಾಲನ್ನು ಹೆಗಲೇರಿಸಿಕೊಂಡವರು, ಹಲಗೆ, ತಮಟೆ ಮತ್ತು ವಿವಿಧ ವಾದ್ಯ ನುಡಿಸುವವರು ಪಾಲ್ಗೋಂಡಿದ್ದರು. ಬೆಳಗಾಗುತ್ತಲೇ ದೇಶಿ ಕಲಾತಂಡಗಳ ಸೊಗಡು, ಸೊಬಗನ್ನು ಜನತೆ ಕಣ್ತುಂಬಿ ಕೊಂಡರೆ, ಹತ್ತು ಗಂಟೆಯಾದರೂ ಹೊರಬಾರದ ಸೂರ್ಯ ಕನ್ನಡದ ಬಾವುಟದಲ್ಲಿ ಮರೆಯಾದಂತೆ ಎನ್ನಿಸಿತ್ತು.

ರಥದ ಎದುರು ವಿದ್ಯಾರ್ಥಿನಿಯರ ಪೂರ್ಣಕುಂಭ ಕಳಶ. ಹುಲಿ ವೇಷಧಾರಿಗಳ ಆರ್ಭಟ. ಕರಡಿ ವೇಷಧಾರಿ ಕುಣಿತ. ಶಹನಾಯಿ ವಾದನ, ಸಂಗಮೇಶ ಹೂವಿನಹಳ್ಳಿ ಮತ್ತು ಸಂಗಡಿಗರ ಪೋತರಾಜರ ಘರ್ಜನೆ ಗಮನ ಸೆಳೆಯಿತು. ಭೀಮಣ್ಣ ಭಜಂತ್ರಿ ಸಂಗಡಿಗರ ಚಿಟ್ಟಲಗಿ ಮೇಳ, ಬೀರಲಿಂಗೇಶ್ವರ ಡೊಳ್ಳಿನ ತಂಡ, ಮಲ್ಲಿನಾಥ ರಾಮಣ್ಣ ತಂಡದವರ ಭಜನೆ, ಮಳೆಪ್ಪ ಕರ್ಜಿಗಿ ಮೌಲಾಲಿ ಹೆಜ್ಜೆ ಸಂಘದ ಸಾಹಸಮಯ ಕುಣಿತ, ಸುನೀಲ ಮಾಂಗ ಮತ್ತು ಸಂಗಡಿಗರ ಹಲಗಿವಾದನ ಮಧ್ಯೆ ಮಹೇಶ್ವರಿ ಹಲಗೆ ತಂಡದ ಮಹಿಳೆಯರು ಹಲಗೆ ಬಡಿದಿದ್ದು ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

Advertisement

ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸಮ್ಮೇಳನದ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆಯಲ್ಲಿ ವಿವಿಧ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ಸೇವಾದಳ ಮತ್ತು ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸದಸ್ಯರು, ಕನ್ನಡಾಭಿಮಾನಿಗಳು, ಕನ್ನಡಾಸಕ್ತರು ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ಕಂಡಿದ್ದು: ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಕಲಾತಂಡಗಳ ಮೂಲಕ ಗಮನ ಸೆಳೆದರೆ, ಮತ್ತೂಂದು ಕಡೆ ಪ್ರೇಕ್ಷಕರು ಮೆರವಣಿಗೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವಲ್ಲಿ ತಲ್ಲೀನರಾಗಿದ್ದರು. ಕನ್ನಡ ಭವನ ಆವರಣ ಮತ್ತು ಹೊಗರಡೆ ಪುಸ್ತಕ ಮಳಿಗೆ, ಖಾದಿ ಬಟ್ಟೆಗಳ ಮಳಿಗೆಗಳು ಜನರಿಂದ ತುಂಬಿದ್ದವು. ಸಮ್ಮೇಳನಕ್ಕೆ ಆಗಮಿಸಿದವರಿಗಾಗಿ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

ಬದುಕಿನ ಸಮೃದ್ಧತೆಗೆ ಕಲಿಯಿರಿ ಕನ್ನಡ: ಡಾ| ಬುಳ್ಳಾ 
ಕಲಬುರಗಿ: ಜೀವನ ನಿರ್ವಹಣೆಗಾಗಿ ಇಂಗ್ಲಿಷ್‌ ಕಲಿಯುವುದೊಂದಿಗೆ ಬದುಕಿನ ಸಾಂಸ್ಕೃತಿಕ ಸಮೃದ್ಧತೆಗಾಗಿ ಕನ್ನಡ ಕಲಿಯುವ ಮೂಲಕ ನಮ್ಮ ಸಾಂಸ್ಕೃತಿಕ ಅಸ್ಮಿತೆ ಉಳಿಸಿಕೊಳ್ಳಬೇಕಿದೆ ಎಂದು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಡಾ| ನಾಗಾಬಾಯಿ ಬುಳ್ಳಾ ಹೇಳಿದರು.

ನಗರದ ಕನ್ನಡ ಭವನದ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನಗಳ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕೀಯ ಭಾಷಣ ಮಾಡಿದ ಅವರು, ಹೊರನಾಡು, ಹೊರದೇಶಕ್ಕೆ ಕೆಲಸ ಹುಡುಕಿಕೊಂಡು ಹೋಗಬೇಕಾದರೆ,
ಜಾಗತಿಕ ಭಾಷೆಯಾದ ಇಂಗ್ಲಿಷ್‌ನ್ನು ನಾವೆಲ್ಲರೂ ಕಲಿಯಬೇಕು, ಕನ್ನಡಿಗರಾಗಿದ್ದು, ನನಗೆ ಇಂಗ್ಲಿಷ್‌ ಮಾತ್ರ ಬರುತ್ತದೆ. ಕನ್ನಡ ಬರುವುದಿಲ್ಲ ಎಂಬ ಕುಂಠಿತ ವ್ಯಕ್ತಿತ್ವದ ಬೆಳವಣಿಗೆ ಸರ್ವಥಾ ಸಾಧುವಲ್ಲ, ಸಮರ್ಥನೀಯವೂ ಅಲ್ಲ ಎಂದರು.

ಕನ್ನಡ ಅನ್ನ ಕೊಡುವ ಭಾಷೆಯಾದರೆ ಮಾತ್ರ ಉಳಿಯಲು, ಬೆಳೆಯಲು ಸಾಧ್ಯವಿದೆ. ಜಾಗತೀಕರಣದ ಸಂದರ್ಭದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಅವಕಾಶಕೊಟ್ಟರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಕನ್ನಡ ನೆಲದಲ್ಲಿ ಬದುಕುವವರೆಲ್ಲರೂ ಕನ್ನಡ ಮಾತನಾಡಬೇಕು, ಕಲಿಯಬೇಕು, ಅದರ ಅಭಿವೃದ್ಧಿಗೆ ಶ್ರಮಿಸಬೇಕು. ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಕನ್ನಡ ಬಳಕೆಯಾಗಬೇಕೆಂಬ ಹಲವು ವರ್ಷಗಳ ಕನಸು ಕನ್ನಡಿಗರದ್ದಾಗಿದೆ. ಇದಕ್ಕೆ ಪೂರಕವಾಗಿ ಇಂಗ್ಲಿಷ್‌ ಕಡತಗಳಿಗೆ ನ.1ರಿಂದ ಸಹಿ ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದನ್ನು ಅಭಿಮಾನದಿಂದ ಸ್ವಾಗತಿಸೋಣ ಎಂದರು.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇ-ಪತ್ರಿಕೆ, ಇ-ಪುಸ್ತಕ, ಇ-ಸುದ್ದಿ, ಕಥೆ, ಕವನ, ಚುಟುಕು ಪ್ರಚಲಿತವಾಗಿದೆ. ಒಂದೆಡೆ ಸಮಯದ ಅಭಾವ ಕಾಡುತ್ತಿದ್ದು, ಪತ್ರಿಕೆ, ಪುಸ್ತಕ ಓದುವಷ್ಟು ಸಮಯವಿಲ್ಲ. ಇನ್ನೊಂದೆಡೆ ಇದೇ ಅವಧಿಯಲ್ಲಿ ಮಹಾಕಾವ್ಯಗಳು ಸೃಷ್ಟಿಯಾಗುತ್ತಿವೆ. ಇದೊಂದು ಪರ್ವಕಾಲ, ಬದಲಾವಣೆ ನಿಸರ್ಗದ ನಿಯಮ. ಬದಲಾವಣೆ ಪ್ರಕ್ರಿಯೆಯನ್ನು ಧನಾತ್ಮಕವಾಗಿ ಸ್ವೀಕರಿಸಬೇಕು ಎಂದು ಕರೆ ನೀಡಿದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ| ಗೀತಾ ನಾಗಭೂಷಣ, ಈ ಹಿಂದೆ ಪತ್ರ ಬರಹದಿಂದ ಕನ್ನಡ ಭಾಷೆ ಶಕ್ತಿಯುತವಾಗಿತ್ತು. ಹೊಸ ಪದಗಳ ಹುಡುಕಾಟ ನಡೆಯುತ್ತಿತ್ತು. ಆದರೆ, ಇಂದು ಮೊಬೈಲ್‌, ಕಂಪ್ಯೂಟರ್‌ ಬಂದ ನಂತರ ಓದುವುದು ಮತ್ತು ಬರೆಯುವುದೇ ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ವರ್ಷ ಮಹಿಳೆ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದು ಸಂತೋಷವಾಗಿದೆ. ಮುಂಬರುವ ಅಖೀಲ ಭಾರತ ಸಾಹಿತ್ಯ ಸಮ್ಮೇಳನವು ಕಲಬುರಗಿಯಲ್ಲೇ ನಡೆಯುವಂತಾಗಲಿ ಎನ್ನುವ ಆಶಯ ವ್ಯಕ್ತಪಡಿಸಿದರು. ಸಮ್ಮೇಳನದ ವೇದಿಕೆಗೆ ಲಿಂ. ಡಾ| ಸಿದ್ದಲಿಂಗ ಮಹಾಸ್ವಾಮೀಜಿ ಹೆಸರಿಡಲಾಗಿದ್ದು, ಜ್ಯೋತಿ ಬೆಳಗಿಸುವುದ ಮೂಲಕ ಡಾ| ಗೀತಾ ನಾಗಭೂಷಣ ಸಮ್ಮೇಳನಕ್ಕೆ ಚಾಲನೆ ನೀಡಿದರು. ನಾಟ್ಯಾಂಜಲಿ ಕಲಾ ಕೇಂದ್ರದ ವಿದ್ಯಾರ್ಥಿಗಳು ಹಚ್ಚೇವು ಕನ್ನಡ ದೀಪ ನೃತ್ಯ ಪ್ರಸ್ತುತ ಪಡಿಸಿದರು.

ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಡಾ| ವೀರಣ್ಣ ದಂಡೆ ಮಾತನಾಡಿದರು. ಇದೇ ವೇಳೆ “ನಮ್ಮೂರ ಹಿರಿಮೆ’ ಸ್ಮರಣ ಸಂಚಿಕೆ, “ಚಿಗುರೆಲೆ’ ಕವನ ಸಂಕಲನವನ್ನು ಗಣ್ಯರು ಬಿಡುಗಡೆಗೊಳಿಸಿದರು. ಜಿಲ್ಲೆ ಮತ್ತು ನೆರೆ ಜಿಲ್ಲೆಗಳ ಹಲವು ಸಾಹಿತಿಗಳು, ಗಣ್ಯರು, ಕನ್ನಡಾಸಕ್ತರು, ಅಭಿಮಾನಿಗಳು
ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next