ಚಿಕ್ಕಮಗಳೂರು: ಚುನಾವಣೆಯಿಂದ ಚುನಾವಣೆಗೆ ಬಂದು ಹೋಗುವಂತಹ ಜನಪ್ರತಿನಿಧಿ ನಾನಲ್ಲ. ಸಾವು-ನೋವು, ಶುಭ ಕಾರ್ಯಗಳು ಸೇರಿದಂತೆ ಊರ ಜಾತ್ರೆಯಲ್ಲಿ ಮನೆ ಮಗನಾಗಿ ಭಾಗಿಯಾಗಿ ತಮ್ಮ ಪ್ರೀತಿ-ವಿಶ್ವಾಸ ಉಳಿಸಿಕೊಂಡಿದ್ದೇನೆ ಎಂಬ ನಂಬಿಕೆ ಇದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ನಗರ ಹೊರವಲಯದ ಮತ್ತಾವರದಲ್ಲಿ ಸೋಮವಾರ ನಡೆದ ಗ್ರಾಮ ವಾಸ್ತವ್ಯದಲ್ಲಿ ಅವರು ಮಾತನಾಡಿದರು. ಚುನಾವಣೆ ಬಂದಿದೆಯೆಂದು ಶಾಸಕರು ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಇಂತಹ ಕೆಟ್ಟ ಎಂಎಲ್‌ಎ ನಾವು ನೋಡೇ ಇಲ್ಲ. ಕ್ಷೇತ್ರ ಬಿಟ್ಟು ತೊಲಗು ಎಂದು ಚಳವಳಿ ಮಾಡುತ್ತೇನೆಂದು ವಿರೋಧ ಪಕ್ಷದವರ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಮಾಧ್ಯಮದವರು ಪ್ರಶ್ನೆ ಕೇಳಿದ್ದರು. ನನಗೆ ಮತ ಹಾಕಿದ ಜನ ನನ್ನ ಮಾಲೀಕರು. ನಾನು ಕೆಟ್ಟವನಾ? ಒಳ್ಳೆಯವನಾ ಎಂಬುದು ಜನಕ್ಕೆ ಬಿಟ್ಟ ವಿಚಾರ.
ಒಳ್ಳೆ ಶಾಸಕ ಅನಿಸಿದ್ದರೆ ಕೈ ಮೇಲೆತ್ತುವ ಮೂಲಕ ನೀವು ತೀರ್ಮಾನಿಸಿ ತೀರ್ಪು ನೀಡಿ ಎಂದು ಗ್ರಾಮಸ್ಥರಿಗೆ ಕೇಳಿದಾಗ
ಸಭೆಯಲ್ಲಿ ಕುಳಿತಿದ್ದವರು ಒಕ್ಕೊರಲಾಗಿ ಕೈ ಎತ್ತಿ ಬೆಂಬಲ ವ್ಯಕ್ತಪಡಿಸಿದರು.
ಯಾವುದೇ ಫಾರಂ ನಂ 53 ಅರ್ಜಿ ಬಂದಾಗ ಒಂದು ರೂ. ಲಂಚ ನಾನು ಪಡೆದಿದ್ದರೂ ಯಾವುದೇ ಮುಲಾಜು ನೋಡದೆ ಮನೆಗೆ ಕಳುಹಿಸಿ ಎಂದು ಹೇಳಿದ ಸಿ.ಟಿ.ರವಿ, ನಾನು ಶಾಶ್ವತ ಅಲ್ಲ. ಅಧಿಕಾರವೂ ಶಾಶ್ವತ ಅಲ್ಲ ಎಂಬ ಅರಿವು ನನಗಿದೆ. ಅಧಿಕಾರ ಬಂದಿದೆಯೆಂದು ಮೆರೆಯಬೇಡ. ಅಧಿಕಾರ ಕೊಟ್ಟಿರುವ ಜನರನ್ನು ಮರೆತು ರಾಜಕಾರಣ ಮಾಡಬೇಡ. ಯಾರ ಮನಸು ಮುರಿಯಬೇಡ ಎಂಬ ಹಿರಿಯರು ಕೊಟ್ಟ ಸಲಹೆ ಪಾಲಿಸುತ್ತಿದ್ದೇನೆ ಎಂದು ತಿಳಿಸಿದರು.
2017ರಲ್ಲಿ ಅಭಿವೃದ್ಧಿ ಕಾರ್ಯಗಳಿಗೆ 2 ಕೋಟಿ.ರೂ. ಮಂಜೂರು ಮಾಡಲಾಗಿದೆ. ಗ್ರಾಮ ವಿಕಾಸಯೋಜನೆಯಡಿ 1 ಕೋಟಿ ರೂ. ನೀಡಲಾಗಿದೆ. ಸಿಮೆಂಟ್ ರಸ್ತೆ ಮತ್ತು ಡಾಂಬರೀಕರಣಕ್ಕೆ 10 ಲಕ್ಷ ರೂ. ಮತ್ತಾವರಕ್ಕೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಯುವಂತೆ ಗ್ರಾಮಸ್ಥರು ಎಚ್ಚರ ವಹಿಸಬೇಕು ಎಂದು ಸೂಚಿಸಿದರು. ದುಮ್ಮಗೆರೆ ಗ್ರಾಮದ ಬಾಕ್ಸ್ ಚರಂಡಿಗೆ 10 ಲಕ್ಷ ರೂ. ನೀಡಿರುವೆ. ವಿಶೇಷ ಅನುದಾನಕ್ಕೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸದ್ಯದಲ್ಲೆ ಹಣ ಬಿಡುಗಡೆಯಾಗಲಿದೆ ಎಂದು ನುಡಿದರು. ವಿವಿಧ ಗ್ರಾಮಗಳ 38 ಜನ ಗ್ರಾಮಸ್ಥರು ಸಮಸ್ಯೆಗಳ ಕುರಿತು ಕೇಳಿದ ಪ್ರಶ್ನೆಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಉತ್ತರ ಕೊಡಿಸಿ ಹಲವು ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ತಾಕೀತು ಮಾಡಿದರು. ಗ್ರಾಮ ವಾಸ್ತವ್ಯ ಅಂಗವಾಗಿ ಕಬ್ಬಡಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಶಾಲೆಯಲ್ಲಿ ವಾಸ್ಯವ್ಯ ಮಾಡಿದರು.
ಜಿಪಂ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ, ಸದಸ್ಯರಾದ ಹಿರಿಗಯ್ಯ, ಜಿ.ಸೋಮಶೇಖರ್, ತಾಪಂ ಅಧ್ಯಕ್ಷ ಈ.ಆರ್.ಮಹೇಶ್, ಸದಸ್ಯ ಯು.ಸಿ.ಮಹೇಶ್, ಎಪಿಎಂಸಿ ಅಧ್ಯಕ್ಷ ಕವೀಶ್, ಉಪಾಧ್ಯಕ್ಷ ರಾಜೀವ್, ಸದಸ್ಯ ವಿಕ್ರಾಂತ್, ಮೂಗ್ತಿಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆನಂದ್, ಪಾಪಣ್ಣ ಮತ್ತಿತರರು ಇದ್ದರು.