Advertisement

ಬಿಸಿಲ ತಾಪ ತಾಳದೆ ಬಾಯಾರಿದ ಜನ-ಜಾನುವಾರು

05:18 PM Mar 04, 2021 | Team Udayavani |

ವಾಡಿ: ಭೀಕರ ಭೀಮಾ ಮತ್ತು ಕಾಗಿಣಾ ನದಿಗಳ ಮಹಾ ಪ್ರವಾಹದಿಂದ ತತ್ತರಿಸಿದ್ದ ಸಿಮೆಂಟ್‌ ನಾಡಿನಲ್ಲೀಗ ರಣಬಿಸಿಲಿನ ಆರ್ಭಟ ಆರಂಭವಾಗಿದ್ದು, ಬಿಸಿಲ ತಾಪ ತಾಳಲಾಗದೆ ಜನರು ತಂಪು ನೀರಿನ ಮೊರೆ ಹೋಗುತ್ತಿದ್ದಾರೆ. ಗಾಳಿ-ನೆರಳಿಗಾಗಿ ಪರಿತಪಿಸುತ್ತ ಬಿಸಿಯುಸಿರು ಹೊರಹಾಕುತ್ತಿದ್ದಾರೆ.

Advertisement

ಸಿಮೆಂಟ್‌ ಕಾರ್ಖಾನೆಗಳಿರುವ ಕಾರಣಕ್ಕೆ ನೂರಾರು ಕಲ್ಲು ಗಣಿಗಳನ್ನು ಹೊಂದಿರುವ ಕಲಬುರಗಿ ಉದರದಲ್ಲೀಗ ಬಿಸಿಲ ಬೆಂಕಿಯ ಉಗ ಹಾರುತ್ತಿದೆ. ವಾಡಿ, ಚಿತ್ತಾಪುರ, ಶಹಾಬಾದ ನಗರ ಪ್ರದೇಶಗಳ ವ್ಯಾಪ್ತಿಯ ನೆಲದಲ್ಲಿ ಪದರುಗಲ್ಲಿನ ಹಾಸಿಗೆ ಹರಡಿಕೊಂಡಿದ್ದು, ಬಿಸಿಲ ತಾಪ ಏರಿಕೆಯಾಗಲು ಪ್ರಮುಖ ಕಾರಣ ಎನ್ನಬಹುದು. ಮಾರ್ಚ್‌ ಆರಂಭದಲ್ಲೇ 38 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಏಪ್ರಿಲ್‌ ಮತ್ತು ಮೇ ತಿಂಗಳ ಬಿಸಿಲ ಭೀಕರತೆ ಹೇಗಿರಬಹುದು ಎನ್ನುವುದನ್ನು ಮನಗಾಣಬಹುದಾಗಿದೆ.

ನದಿ ದಂಡೆ ಊರುಗಳು ಮುಳುಗಡೆ ಆಗುವಷ್ಟು ಜಲಾಕ್ರೋಶ ಭುಗಿಲೆದ್ದ ಪರಿಸರದಲ್ಲೀಗ ಬಿಸಿಲು ಕೆಂಡ ಕಾರುತ್ತಿದೆ. ಬಾಯಾರಿಕೆ ನೀಗಿಸಿಕೊಳ್ಳಲು ಉಳ್ಳವರು ಫ್ರಿಡ್ಜ್ ನೀರಿನ ಮೊರೆ ಹೋಗುತ್ತಿದ್ದರೆ, ಬಡವರ ಮನೆಗಳಲ್ಲಿ ಗೋಣಿ ಚೀಲ ಮತ್ತು ಬಳಕೆಯಾಗದ ಬಟ್ಟೆಗಳಿಂದ ಬಿಗಿದ ಪ್ಲಾಸ್ಟಿಕ್‌ ಕೊಡ, ಸ್ಟೀಲ್‌ ಪಾತ್ರೆ ಹಾಗೂ ಮಣ್ಣಿನ ಮಡಿಕೆಗಳು ನೀರು ತಂಪಾಗಿಸುವ ಫ್ರಿಡ್ಜ್ ಗಳಾಗಿ ಬಳಕೆಯಾಗುತ್ತಿವೆ. ಒಟ್ಟಾರೆ ಬಿಸಿಲಬೇಗೆ ದೇಹದ ಬೆವರಿಳಿಸಲು ಮುಂದಾದರೆ, ಮನೆಯ ಮಡಿಕೆಗಳಿಂದ ತಂಪಾಗುತ್ತಿರುವ ನೀರು ಬಡವರ ಒಡಲು ತಣ್ಣಗಾಗಿಸುತ್ತಿದೆ.

ಬಿಸಿಲು ಹೆಚ್ಚಾಗುತ್ತಿದ್ದಂತೆ ಬಿಸಿಗಾಳಿ ಬೀಸುತ್ತಿದೆ. ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಬೇಸಿಗೆ ತಾಪಮಾನ ಭಯಂಕರವಾಗಿರುವ ಮುನ್ಸೂಚನೆ ನೀಡಿದೆ. ಈಗಲೇ
ಬೆಳಗ್ಗೆ 8 ಗಂಟೆಗೆ ಪ್ರಖರವಾದ ಬಿಸಿಲು ಬಂದಿರುತ್ತದೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಅಧಿಕಾರಿಗಳು ಮುಂದಾಗಬೇಕು. ಕೆಂಡ ಕಾರುತ್ತಿರುವ ಕಾಂಕ್ರಿಟ್‌ ರಸ್ತೆಗಳಿಗೆ ನೀರು ಸಿಂಪರಣೆ ಮಾಡಲು ಪುರಸಭೆ ಆಡಳಿತ ಮುಂದಾಗಬೇಕು. ವ್ಯವಹಾರ, ಆಸ್ಪತ್ರೆ, ಸರಕಾರಿ ಕಚೇರಿಗಳಿಗೆಂದು ನಗರಕ್ಕೆ ಬರುವ ಸಾರ್ವಜನಿಕರಿಗೆ ಪ್ರಮುಖ ವೃತ್ತಗಳಲ್ಲಿ ಕುಡಿಯುವ ತಂಪು ನೀರಿನ ವ್ಯವಸ್ಥೆ ಮಾಡಲು ಪುರಸಭೆ ಕ್ರಮ ಕೈಗೊಳ್ಳಬೇಕು.
ವಿ.ಕೆ. ಕೆದಿಲಾಯ, ನಗರದ ಹಿರಿಯ ನಾಗರಿಕ

*ಮಡಿವಾಳಪ್ಪ ಹೇರೂರ

Advertisement
Advertisement

Udayavani is now on Telegram. Click here to join our channel and stay updated with the latest news.

Next