Advertisement

ಮದ್ಯ ಖರೀದಿಗೆ ಮುಗಿಬಿದ್ದ ಜನ, ಭರ್ಜರಿ ಮಾರಾಟ

01:50 AM May 05, 2020 | Sriram |

ಮಂಗಳೂರು/ಉಡುಪಿ: ಲಾಕ್‌ಡೌನ್‌ ಕಾರಣಕ್ಕೆ 40 ದಿನಗಳಿಂದ ಮುಚ್ಚಿದ್ದ ಮದ್ಯ ಮಾರಾಟದ ಅಂಗಡಿಗಳು ಸೋಮವಾರ ತೆರೆದುಕೊಂಡಿದ್ದು, ಮೊದಲ ದಿನವೇ ಭರ್ಜರಿ ವ್ಯಾಪಾರ ನಡೆದಿದೆ.

Advertisement

ದ.ಕ. ಜಿಲ್ಲೆಯ ಕಂಟೆನ್ಮೆಂಟ್‌ ಝೋನ್‌ ಹೊರತುಪಡಿಸಿದ ಭಾಗಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 7ರ ವರೆಗೆ ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಗಿತ್ತು. ಉಡುಪಿಯಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಮಾತ್ರ ಅವಕಾಶ ನೀಡಲಾಗಿತ್ತು.

ದ.ಕ. ಜಿಲ್ಲೆಯ 172 ಮದ್ಯದಂಗಡಿಗಳಲ್ಲಿ ಸೋಮವಾರ ವ್ಯಾಪಾರ ನಡೆದಿದೆ. ಕೆಲವು ವೈನ್‌ಶಾಪ್‌ ಮಾಲಕರ ಪ್ರಕಾರ, ಮೂರು ದಿನಗಳಿಗೆ ಬರುವಷ್ಟು ಗ್ರಾಹಕರು ಒಂದೇ ದಿನ ಆಗಮಿಸಿದ್ದು, ಅಷ್ಟೇ ಪ್ರಮಾಣದ ವ್ಯಾಪಾರವೂ ಆಗಿದೆ ಎಂದು ಹೇಳಿದ್ದಾರೆ. ದ.ಕ. ಜಿಲ್ಲೆಯ ಅಬಕಾರಿ ಇಲಾಖೆಯ ಮಾಹಿತಿ ಪ್ರಕಾರ, 65,751 ಲೀ. ಐಎಂಎಲ್‌ ಹಾಗೂ 43,583 ಲೀ. ಬಿಯರ್‌ ಮಾರಾಟವಾಗಿದೆ. 7 ಕೋಟಿ ರೂ. ಮೌಲ್ಯದ ವ್ಯವಹಾರ ನಡೆದಿದೆ. ಸಾಮಾನ್ಯ ದಿನಗಳಲ್ಲಿ ಕೂಡ ಇದೇ ಪ್ರಮಾಣದಲ್ಲಿ ಮದ್ಯ ಮಾರಾಟ ಆಗುತ್ತಿದ್ದು, ರಜಾ ದಿನಗಳಲ್ಲಿ ಇದೇ ಪ್ರಮಾಣದಲ್ಲಿ ವ್ಯಾಪಾರ ನಡೆದದ್ದೂ ಇದೆ.

ಸೋಮವಾರ ಮಂಗಳೂರಿನಲ್ಲಿ 60,000 ರೂ.ಗಳಿಗಿಂತಲೂ ಅಧಿಕ ಮೌಲ್ಯದ ಮದ್ಯವನ್ನು ಒಬ್ಬರೇ ಖರೀದಿಸಿದ ಹಲವು ಉದಾಹರಣೆಗಳೂ ಇವೆ. ಅಷ್ಟೇ ಅಲ್ಲ, ಮುಂಜಾನೆಯಿಂದಲೇ ಸರದಿ ಯಲ್ಲಿ ನಿಂತು ಮದ್ಯ ಖರೀದಿಸಿದವರ ಸಂಖ್ಯೆ ಅಧಿಕವಿದೆ. ಒಂದು ಮದ್ಯದಂಗಡಿಗೆ ದಿನದಲ್ಲಿ ಸಾಮಾನ್ಯವಾಗಿ 300 ಮಂದಿ ಗ್ರಾಹಕರು ಬರುತ್ತಿದ್ದರೆ, ಸೋಮವಾರ ಇದರ ಮೂರು ಪಟ್ಟು ಅಧಿಕ ಗ್ರಾಹಕರು ಬಂದು ಮದ್ಯ ಖರೀದಿ ಮಾಡಿದ್ದಾರೆ ಎಂದು ಮದ್ಯದಂಗಡಿ ಮಾಲಕರೊಬ್ಬರು ತಿಳಿಸುತ್ತಾರೆ.

ಅಂಗಡಿಗಳ ಮುಂದೆ ಬ್ಯಾರಿಕೇಡ್‌ ಅಳವಡಿಸ ಲಾಗಿತ್ತು. ಸಾಮಾಜಿಕ ಅಂತರ ಕಾಪಾಡುವುದಕ್ಕೂ ವ್ಯವಸ್ಥೆ ಮಾಡಲಾಗಿತ್ತು. ನೂಕುನುಗ್ಗಲು ಆಗುವುದನ್ನು ತಪ್ಪಿಸಲು ಭದ್ರತಾ ಸಿಬಂದಿಯನ್ನು ನಿಯುಕ್ತಿಗೊಳಿಸಲಾಗಿತ್ತು. ಗ್ರಾಹಕರು ಹಾಗೂ ಸಿಬಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು, ಸ್ಯಾನಿಟೈಸರ್‌ ಬಳಸಲು ಸೂಚಿ ಸಲಾಗಿತ್ತು.

Advertisement

ಅಬಕಾರಿ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ 10,000ಕ್ಕೂ ಅಧಿಕ ಮದ್ಯದಂಗಡಿ ಗಳಿದ್ದು, ಪ್ರತಿ ತಿಂಗಳು ಸುಮಾರು 4.27 ಕೋಟಿ ಲೀಟರ್‌ ಮದ್ಯ ಮಾರಾಟವಾಗುತ್ತದೆ. 2018-19ರಲ್ಲಿ 19,943 ಕೋಟಿ ರೂ. ಆದಾಯ ಸಂಗ್ರಹ ವಾಗಿತ್ತು. 2019-20ರಲ್ಲಿ 20,950 ಕೋಟಿ ರೂ. ಆದಾಯ ಸಂಗ್ರಹದ ನಿರೀಕ್ಷಿಸಲಾಗಿತ್ತು.

ಉಡುಪಿಯಲ್ಲೂ ಭರ್ಜರಿ ವ್ಯಾಪಾರ
ಉಡುಪಿ ಜಿಲ್ಲೆಯ 104 ವೈನ್‌ ಸ್ಟೋರ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಈ ಪೈಕಿ 89 ವೈನ್‌ ಶಾಪ್ಸ್‌, 15 ಎಂಎಸ್‌ಐಎಲ್‌ ಮಳಿಗೆಗಳಲ್ಲಿ ಮಾರಾಟ ನಡೆದಿದೆ. ಇನ್ನು 399 ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಅನುಮತಿ ಸಿಗದೆ ತೆರೆದುಕೊಂಡಿರಲಿಲ್ಲ. 41,927 ಲೀ. ಲಿಕ್ಕರ್‌ ಮಾರಾಟವಾಗಿ ಸುಮಾರು 1.21 ಕೋ.ರೂ., 15,872 ಲೀ. ಬಿಯರ್‌ ಮಾರಾಟವಾಗಿ 25 ಲ.ರೂ. ಸಂಗ್ರಹವಾಗಿದೆ. ಮಧ್ಯಾಹ್ನ ತನಕದ 4 ತಾಸುಗಳ ಒಟ್ಟು ಅವಧಿಯಲ್ಲಿ ಸುಮಾರು 1.5 ಕೋ.ರೂ. ಸಂಗ್ರಹವಾಗಿದೆ.

ಜಿಲ್ಲೆಯ ಎಲ್ಲ ಮದ್ಯದಂಗಡಿಗಳ ಮುಂದೆ ಬೆಳಗ್ಗೆಯಿಂದ ಭಾರೀ ಸಂಖ್ಯೆಯಲ್ಲಿ ಜನ ಸಾಲುನಿಂತು ಮದ್ಯ ಖರೀದಿಗೆ ಮುಗಿಬಿದ್ದರು. ಮದ್ಯಪ್ರಿಯರನ್ನು ಹತೋಟಿಗೆ ತರುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಅವಧಿ ಮುಗಿಯುತ್ತಲೇ ಬಂದ್‌ ಆಗಿದ್ದರಿಂದ ಕೊನೆಯ ಕ್ಷಣದಲ್ಲಿ ಒಂದಷ್ಟು ಗೊಂದಲ ಏರ್ಪಟ್ಟಿತು.

ಆರೋಗ್ಯ ಅವಗಣನೆ ಸಲ್ಲದು; ಕಾಳಜಿಯೂ ಇರಲಿ
ಮದ್ಯಪಾನ ಯಾವತ್ತೂ ಉತ್ತಮವಲ್ಲ. ಅದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಕೋವಿಡ್‌ ದಾಳಿಗೆ ಸುಲಭದ ತುತ್ತಾಗುವ ಅಪಾಯಯೇ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ತಿಳಿಸಿದೆ.

ಸ್ಥಳೀಯ ವೈದ್ಯರ ಪ್ರಕಾರವೂ ಮದ್ಯಪಾನದಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುವುದು ಖಚಿತ. ಅದರಲ್ಲೂ ಕೋವಿಡ್‌ ಇರುವ ಸಂದರ್ಭ ನಾವು ಗರಿಷ್ಠ ಜಾಗರೂಕತೆಯಿಂದ ಇರಬೇಕು.

ಲಾಕ್‌ಡೌನ್‌ ನಡುವೆಯೇ ಸರಕಾರ ಅನುಮತಿ ನೀಡಿದ್ದರಿಂದ ಸೋಮವಾರ ಮದ್ಯದಂಗಡಿಗಳ ಎದುರು ಜನರು ಸಾಮಾಜಿಕ ಅಂತರ ಮೀರಿ ಗುಂಪು ಸೇರಿದ್ದು, ಇನ್ನು ಕೆಲವೆಡೆ ಸಮಯ ಮೀರಿದ ಬಳಿಕವೂ ಮದ್ಯ ನೀಡುವಂತೆ ಅತಿ ಯಾದ ಒತ್ತಡ ಹೇರಿದ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಘಟನೆಗಳ ಕುರಿತಂತೆ ಜನರೂ ಬೇಸರ ವ್ಯಕ್ತಪಡಿಸಿದ್ದಾರೆ.

ಧಾವಂತ ಬೇಡ, ಸಾಕಷ್ಟು ಮದ್ಯವಿದೆ
ಜಿಲ್ಲೆಯಲ್ಲಿ ಮಧ್ಯಾಹ್ನದ ತನಕ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಗ್ರಾಹಕರ ಸಂಖ್ಯೆ ದೊಡ್ಡದಿತ್ತು. ಇದೇ ಕಾರಣಕ್ಕೆ ಒಂದಷ್ಟು ನೂಕುನುಗ್ಗಲು ಉಂಟಾಗಿತ್ತು. ಅದು ಬಿಟ್ಟರೆ ಬೇರೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮದ್ಯ ಖರೀದಿಗೆ ಯಾರೂ ನೂಕುನುಗ್ಗಲು ಮಾಡುವ ಆವಶ್ಯಕತೆಯಿಲ್ಲ. ಮದ್ಯ ಸಾಕಷ್ಟು ದಾಸ್ತಾನಿದೆ.
– ನಾಗೇಶ್‌ ಕುಮಾರ್‌
ಅಬಕಾರಿ ಉಪ ಆಯುಕ್ತರು, ಉಡುಪಿ

ಸಾಮಾನ್ಯ ದಿನಗಳಷ್ಟೇ ಮಾರಾಟ
ಸಾಮಾನ್ಯ ದಿನಗಳಲ್ಲಿ ಮಾರಾಟವಾಗುವಷ್ಟೇ ಪ್ರಮಾಣದಲ್ಲಿ ಸೋಮವಾರವೂ ದ.ಕ. ಜಿಲ್ಲೆಯಲ್ಲಿ ಮದ್ಯ ಮಾರಾಟ ಆಗಿದೆ. ಇದು ಉಳಿದ ದಿನಗಳಿಗೆ ಹೋಲಿಕೆ ಮಾಡಿದಾಗ ಹೆಚ್ಚು ಎಂಬಂತಿಲ್ಲ. ಅನುಮತಿ ನೀಡಿರುವ 172 ಮದ್ಯದಂಗಡಿಗಳಲ್ಲಿ ವ್ಯಾಪಾರ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ.
– ಶೈಲಜಾ ಕೋಟೆ, ಉಪ ಆಯುಕ್ತರು,
ಅಬಕಾರಿ ಇಲಾಖೆ, ದ.ಕ.

ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವುದು ಉತ್ತಮವಲ್ಲ. ಜಿಲ್ಲೆಯಲ್ಲಿ ಮದ್ಯ ಖರೀದಿಸಿದ ಶೇ. 80ರಷ್ಟು ಮಂದಿ ಕಳೆದ 40 ದಿನಗಳಿಂದ ಮದ್ಯ ಸೇವಿಸದೆ ಆರೋಗ್ಯದಿಂದ ಇದ್ದಾರೆ. ಅತಿಯಾದ ಮದ್ಯ ಸೇವನೆ ಮನುಷ್ಯನನ್ನು ಅಮಲುಗೊಳಿಸುತ್ತದೆ. ಈ ಸಂದರ್ಭದಲ್ಲಿ ಆ ವ್ಯಕ್ತಿ ಸೇವಿಸುವ ಆಹಾರ ನೇರವಾಗಿ ಹೊಟ್ಟೆಗೆ ಹೋಗದೆ ಶ್ವಾಸಕೋಶವನ್ನು ಸೇರುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾ ಜ್ವರ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಸುಲಭವಾಗಿ ಕೋವಿಡ್‌-19 ವೈರಸ್‌ಗೆ ತುತ್ತಾಗುವ ಸಾಧ್ಯತೆ ಇದೆ.
– ಡಾ| ಶಶಿಕಿರಣ್‌ ಉಮಾಕಾಂತ್‌
ಉಡುಪಿ ಕೋವಿಡ್‌ ಮೀಸಲು ಆಸ್ಪತ್ರೆಯ ನೋಡಲ್‌ ಅಧಿಕಾರಿ

ದೀರ್ಘ‌ಕಾಲದಿಂದ ಮದ್ಯ ಸೇವನೆ ಮಾಡುವ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ದೇಹದಲ್ಲಿ ವೈರಸ್‌ ಪ್ರವೇಶಿಸಿದಾಗ ಅದರ ವಿರೋಧ ಹೋರಾಡುವ ಶಕ್ತಿ ಅವರಲ್ಲಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೋಗನಿರೋಧಕ ಶಕ್ತಿ ಅಧಿಕವಿರುವವರಲ್ಲಿ ಕೋವಿಡ್‌-19 ಸೋಂಕು ಪ್ರವೇಶಿಸಿದರೂ ಅದರ ವಿರುದ್ಧ ಹೋರಾಡುವ ಶಕ್ತಿ ಇರುತ್ತದೆ. ಮದ್ಯ ವ್ಯಸನದಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.
-ಡಾ| ಸುಧೀರ್‌ಚಂದ್ರ ಸೂಡಾ, ಡಿಎಚ್‌ಒ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next