ಮಾಗಡಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಇಲ್ಲದೇ ಬಂದ್ ಮಾಡಲಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಜನರು ಶುದ್ಧ ನೀರಿಗಾಗಿ ಪರದಾಡುವಂತಾಗಿದೆ. ತಾಲೂಕಿನಲ್ಲಿ 131 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸ ಲಾಗಿದೆ.
ಈ ಪೈಕಿ 18 ಘಟಕಗಳು ವಿವಿಧ ಕಾರಣಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಲ್ಲಿ ನಿರ್ವ ಹಣೆ ಕೊರತೆಯಿಂದ 18 ಘಟಕಗಳು ಮುಚ್ಚಿದ್ದು, ಡೇರಿಗಳು ಸ್ಥಾಪಿ ಸಿರುವ 2 ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ನೀರು ಪೂರೈಕೆ ಮಾಡಲು ಪಂಚಾಯ್ತಿ ಅಧಿಕಾರಿಗಳು ಮಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ, ನೀರಿಗಾಗಿ ಊರು ಅಲೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಘಟಕ ನಿರ್ಮಾಣ: ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ಗ್ರಾಮ ನೈರ್ಮಲ ಕೆಆರ್‌ಐಡಿಎಲ್ 12 ಘಟಕಗಳು, ಡಿಆರ್ ಡಬ್ಲೂ ಎಸ್ 31 ಘಟಕಗಳು, ಹಾಲು ಉತ್ಪಾ ದಕರ ಸಂಘ 29 ಘಟಕಗಳು, ಹಾಗೂ ಡಿಕೆಸಿ ಚಾರಿಟಬಲ್ ಟ್ರಸ್ಟ್ 25 ಘಟಕಗಳು ಇತರೆ ಲ್ಯಾಂಡ್ ಆರ್ಮಿ, ಟಯೋಟ, ಅಪೆಕ್ಸ್ ಕಂಪನಿ ಕಂಪನಿಗಳ 8 ಘಟಕಗಳು ಸೇರಿ ಒಟ್ಟು 131 ಘಟಕಗಳು ಸ್ಥಾಪನೆಯಾಗಿವೆ. ಈ ಪೈಕಿ 8 ಪ್ರಗತಿಯಲ್ಲಿ, 105 ಸುಸ್ಥಿತಿಯಲ್ಲಿವೆ. 18 ಘಟಕಗಳು ದುರಸ್ತಿಯಾಗಬೇಕಿದೆ.
ಅನೇಕ ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಘಟಕಗಳು ಆಗಾಗ್ಗೆ ಕೈಕೊಡುತ್ತಿವೆ. ಎಂದು ಗ್ರಾಹಕರು ಆರೋಪಿಸುತ್ತಿದ್ದಾರೆ. ಕೆಲವು ಘಟಕಗಳಲ್ಲಿ ಬೇಕಾದಷ್ಟು ನೀರು ಇದ್ದರೂ, ವಿದ್ಯುತ್ ಸಮಸ್ಯೆಯಿಂದ ಗ್ರಾಹಕರಿಗೆ ದೊರಕುತ್ತಿಲ್ಲ. ಕೆಲವಡೆ ಅಗತ್ಯ ನೀರು ಸಿಗುತ್ತಿಲ್ಲ. ಈ ದೂರುಗಳಿಗೆ ಅಧಿಕಾರಿ ಅಥವಾ ಜನಪ್ರತಿನಿಧಿಗಳಲ್ಲಿ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂಬ ಆರೋಪಗಳು ಇವೆ.
6 ತಿಂಗಳಿಗೊಮ್ಮೆ ದುರಸ್ತಿ: ಕನಿಷ್ಠ ಆರು ತಿಂಗಳಿಗೊಮ್ಮೆ ಘಟಕ ದುರಸ್ತಿಪಡಿಸಲು 30 ರಿಂದ 40 ಸಾವಿರ ರೂ. ಖರ್ಚು ಬರುತ್ತದೆ. ಕೊಳವೆ ಬಾವಿಯಲ್ಲಿ ನೀರಿದ್ದು, ಅಂರ್ಜಲ ಕಲುಷಿತಗೊಂಡರೆ ದುರಸ್ತಿ ವೆಚ್ಚ ಇನ್ನೂ ಅಧಿಕವಾಗುತ್ತದೆ ಎಂಬುದು ತಾಪಂ ಇಓ ಪ್ರದೀಪ್ ಹೇಳುತ್ತಾರೆ. ಇಷ್ಟೊಂದು ಹಣ ಭರಿಸಲು ಗ್ರಾಮ ಪಂಚಾಯ್ತಿಗಳು ಸದೃಢವಾಗಿಲ್ಲ ಹೀಗಾಗಿ ಗ್ರಾಪಂ ನೀರಿನ ಘಟಕ ನಿರ್ವಹಣೆ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ ಎಂದು ಹೇಳಲಾಗುತ್ತಿದೆ.
ನಮ್ಮ ಗ್ರಾಮದಲ್ಲಿನ ನೀರಿನ ಘಟಕ ಕೆಟ್ಟು ನಿಂತಿದೆ. ನೀರು ಸಿಗುತ್ತಿಲ್ಲ. ಪಂಚಾಯ್ತಿ ಅಧಿಕಾರಿಗಳನ್ನು ಕೇಳಿದರೆ, ಅದರ ದುರಸ್ಥಿ ವೆಚ್ಚ ಅಧಿಕವಾಗಿದೆ. ಪಂಚಾಯ್ತಿಯಿಂದ ಅಷ್ಟೊಂದು ಹಣ ಭರಿಸಿ ದುರಸ್ಥಿ ಮಾಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಜನಪ್ರತಿನಿಧಿಗಳು ನಮ್ಮನ್ನ ನೀರಿಗಾಗಿ ಊರೂರು ಸುತ್ತುವ ಪರಿಸ್ಥಿತಿ ತಂದೊಡ್ಡಿದ್ದಾರೆ.
–ನೇತೇನಹಳ್ಳಿ ಗ್ರಾಮಸ್ಥ.
-ಶ್ರೀನಿವಾಸ್. ಎಸ್