Advertisement
ಬೆಳಪು ಗ್ರಾಮದ ಪಣಿಯೂರು ರೈಲ್ವೇ ನಿಲ್ದಾಣ ಸಮೀಪದಲ್ಲಿ ಇರುವ ಪಡುಬೈಲು ತೋಟ ಪರಿಸರದಲ್ಲಿ ವಾಸಿಸುತ್ತಿರುವ 13 ಕುಟುಂಬಗಳ ಪರಿಸ್ಥಿತಿ ದಯನೀಯವಾಗಿದ್ದು, ರೈಲ್ವೇ ಮಾರ್ಗ ನಿರ್ಮಾಣಗೊಂಡು 3 ದಶಕಗಳು ಕಳೆದರೂ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ. ಬೈಲು ತೋಟದ ಪೂರ್ವಕ್ಕೆ ಕೊಂಕಣ ರೈಲ್ವೇ ಮಾರ್ಗ, ಪಶ್ಚಿಮಕ್ಕೆ ಬೆಳಪು – ಉಚ್ಚಿಲ ಸಂಪರ್ಕ ರಸ್ತೆ, ದಕ್ಷಿಣಕ್ಕೆ ಪಣಿಯೂರು-ಉಚ್ಚಿಲ ರಸ್ತೆ, ಉತ್ತರಕ್ಕೆ ಬೆಳಪು-ಮೂಳೂರು ಸಂಪರ್ಕ ರಸ್ತೆಗಳಿದ್ದರೂ ಬೆಳಪು ಗ್ರಾಮದ ಪಣಿಯೂರು ಪಡುಬೈಲು ತೋಟದ ನಿವಾಸಿಗಳ ಜೀವನ ದ್ವೀಪದೊಳಗಿನ ಜೀವನದಂತಾಗಿದೆ.
- ಯಾವುದೇ ಕೆಲಸ ಕಾರ್ಯಗಳಿಗೂ ರೈಲ್ವೇ ಹಳಿ ದಾಟಬೇಕಿರುವುದರಿಂದ ಜನರು ಪ್ರಾಣ ಭಯ ದಿಂದಲೇ ಓಡಾಡಬೇಕಿದೆ. ಜಾನುವಾರುಗಳನ್ನು ಅತ್ತಿಂದಿತ್ತ ಸಾಗಿಸಲೂ ತೊಂದರೆಯಾಗುತ್ತಿದೆ.
- ಆಧುನಿಕ ಯುಗದಲ್ಲಿ ಕೇಬಲ್ ಕನೆಕ್ಷನ್, ಬಿಎಸ್‌ಎನ್‌ಎಲ್ ಲ್ಯಾಂಡ್ ಲೈನ್ ಸೌಕರ್ಯದಿಂದ ವಂಚಿತರಾಗಿದ್ದಾರೆ.
- ಸಮರ್ಪಕ ರಸ್ತೆ ವ್ಯವಸ್ಥೆಯಿಲ್ಲದೇ ಎಲ್ಲ ವಸ್ತುಗಳನ್ನೂ ತಲೆ ಹೊರೆಯಲ್ಲೇ ಮನೆಗೆ ತಲುಪಿಸಬೇಕಾದ ಅನಿವಾರ್ಯತೆ.
- ಹೆಚ್ಚಿನ ರೈತ ಕುಟುಂಬಗಳೇ ಇಲ್ಲಿರುವುದರಿಂದ ಕೃಷಿ ಕಾರ್ಯಗಳನ್ನು ನಡೆಸಲು ಮತ್ತು ಟ್ರ್ಯಾಕ್ಟರ್ ಸುತ್ತು ಬಳಸಿ ಬರುವ ಅನಿವಾರ್ಯತೆಯಿದೆ. ಇದರಿಂದಾಗಿ ಎಕರೆಗಟ್ಟಲೆ ಕೃಷಿ ಭೂಮಿ ಹಡಿಲು ಬಿದ್ದಿವೆ.
- ತೋಡಿನಲ್ಲಿ ಮಳೆ ನೀರು ತುಂಬಿ ಕೃಷಿ ಬೆಳೆ ನಾಶದ ಭೀತಿ, ಮಳೆಗಾಲದಲ್ಲಿ ನೀರು ಹರಿದು ಹೋಗಲು ವ್ಯವಸ್ಥಿತ ನಾಲೆ ಇಲ್ಲದೆ ಕೃತಕ ನೆರೆ ಭೀತಿಯೂ ಇದೆ.
- ಸಮರ್ಪಕ ರಸ್ತೆ ಸೌಲಭ್ಯವಿಲ್ಲದೆ ಗ್ರಾ.ಪಂ.ನ ನೀರು ಪೂರೈಸುತ್ತಿಲ್ಲ, ಕಸ ತ್ಯಾಜ್ಯ ವಿಲೇವಾರಿಗೆ ತೊಂದರೆಯಾಗುತ್ತಿದೆ.
- ಗಿಡ-ಮರಗಳು ಒತ್ತೂತ್ತಾಗಿ ಬೆಳೆದಿರುವುದರಿಂದ ವಿಷ ಪೂರಿತ ಹಾವುಗಳ ಭೀತಿಯೂ ಇದೆ.
- ಮನೆ ನಿರ್ಮಾಣ, ತುರ್ತು ಸಾಗಾಟ ವ್ಯವಸ್ಥೆಗೆ ತೊಂದರೆ, ಬ್ಯಾಂಕ್ ಸಾಲ ವ್ಯವಸ್ಥೆಯಿಂದ ದೂರ.
Related Articles
Advertisement
ಬೆಳಪು ಗ್ರಾಮದಲ್ಲಿ ಹಾದು ಹೋಗಿರುವ ಕೊಂಕಣ ರೈಲ್ವೇ ಮಾರ್ಗ ಮತ್ತು ರೈಲ್ವೇ ನಿಲ್ದಾಣದ ರಚನೆಗಾಗಿ ಕೃಷಿ ಭೂಮಿಯನ್ನು ಬಿಟ್ಟು ಕೊಟ್ಟಿರುವ ಸ್ಥಳೀಯರ ಬೇಡಿಕೆಗೆ ಇಲಾಖೆ ಸ್ವಲ್ಪವೂ ಸ್ಪಂದಿಸುತ್ತಿಲ್ಲ. ಇಲ್ಲಿ ಕ್ರಾಸಿಂಗ್ ರಸ್ತೆ / ಅಂಡರ್ ಪಾಸ್ / ಮೇಲ್ಸೇತುವೆ ನಿರ್ಮಿಸಿ ಕೊಡುವುದಾಗಿ ಇಲಾಖೆಯು 1990ರಲ್ಲೇ ಭರವಸೆ ನೀಡಿತ್ತಾದರೂ ಅದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಅಲ್ಲದೆ ಮಳೆಗಾಲದಲ್ಲಿ ಕೃತಕ ನೆರೆಯ ಭೀತಿ ಎದುರಾಗುತ್ತಿದೆ. ಕೃಷಿ ಭೂಮಿಯೂ ನಾಶವಾಗುತ್ತಿದೆ.–ರವೀಂದ್ರ ಪೂಜಾರಿ, ಬೈಲುತೋಟ
ಪ್ರಸ್ತಾವನೆ ಬಂದಿಲ್ಲ : ಪಡುಬಿದ್ರಿ (ಪಣಿಯೂರು) ರೈಲ್ವೇ ನಿಲ್ದಾಣದ ಮುಂಭಾಗದಲ್ಲಿ ಇರುವ ಮನೆಗಳಲ್ಲಿ ವಾಸಿಸುತ್ತಿರುವ ಜನರಿಗೆ ನಡೆದಾಡಲು ತೊಂದರೆಯಾಗುತ್ತಿರುವ ಬಗ್ಗೆ ಮತ್ತು ಮೂಲ ಸೌಕರ್ಯಗಳ ಜೋಡಣೆಗೆ ರೈಲ್ವೇ ಟ್ರ್ಯಾಕ್ ಅಡ್ಡಿಯಾಗುತ್ತಿರುವ ಬಗ್ಗೆ ಹಾಗೂ ಅಲ್ಲಿನ ಸಮಸ್ಯೆ ಬಗೆಹರಿಸುವ ಬಗ್ಗೆ ಯಾವುದೇ ಪ್ರಸ್ತಾವನೆಗಳು ಕೊಂಕಣ ರೈಲ್ವೇಗೆ ಇದುವರೆಗೆ ಬಂದಿಲ್ಲ . ಆದರೂ ಈ ಬಗ್ಗೆ ಉನ್ನತ ಅಧಿಕಾರಿಗಳ ಜತೆಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇನೆ. –ಸುಧಾಕೃಷ್ಣಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿ, ಕೊಂಕಣ ರೈಲ್ವೇ ಮಂಗಳೂರು ವಿಭಾಗ
-ರಾಕೇಶ್ ಕುಂಜೂರು