ಗಜೇಂದ್ರಗಡ: ಗಜೇಂದ್ರಗಡ ತಾಲೂಕಿಗೆ ಚಾಲನೆ ದೊರೆತು ಎರಡು ವರ್ಷ ಕಳೆದರೂ ಈವರೆಗೂ ಸರ್ಕಾರ ಕನಿಷ್ಠ ಮೂಲ ಸೌಕರ್ಯ ಒದಗಿಸಿಲ್ಲ. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಹೊಸ ತಾಲೂಕುಗಳಿಗೆ ಈ ಬಾರಿಯಾದರೂ ಅನುದಾನ ನೀಡಿ ತಾಲೂಕು ಕೇಂದ್ರಕ್ಕೆ ಶಕ್ತಿ ತುಂಬಲಿದ್ದಾರೆಯೇ? ಎನ್ನುವ ಕುತೂಹಲ ಜನತೆಯಲ್ಲಿ ಮನೆ ಮಾಡಿದೆ.
ಕಳೆದ 2018 ಜ.26ರಂದು ಗಜೇಂದ್ರಗಡ ಸೇರಿ ರಾಜ್ಯದ 47 ಹೊಸ ತಾಲೂಕುಗಳನ್ನಾಗಿ ಆಡಳಿತಾತ್ಮಕ ಚಾಲನೆ ನೀಡಲಾಗಿದೆ. ಆದರೆ ಯಾವೊಂದು ತಾಲೂಕುಗಳಿಗೆ ಸರ್ಕಾರ ಅನುದಾನ ನೀಡಿ, ಮೂಲ ಸೌಲಭ್ಯ ಕಲ್ಪಿಸಿಲ್ಲ. ಹೀಗಾಗಿ ತಾಲೂಕು ಕೇಂದ್ರದಲ್ಲಿ ಖಾಯಂ ತಹಶೀಲ್ದಾರ್ ಸೇರಿ ಯಾವುದೇ ಕಚೇರಿಗಳು ಇಲ್ಲದ ಪರಿಣಾಮ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ನೆಲೆ ನಿಲ್ಲದ ತಹಶೀಲ್ದಾರರು! : ಈಗಾಗಲೇ ಸರ್ಕಾರ ಘೋಷಿಸಿದ ತಾಲೂಕು ಕೇಂದ್ರಗಳು ಕನಿಷ್ಠ ಮೂಲ ಸೌಕರ್ಯದ ಕೊರತೆ ಎದುರಿಸುತ್ತಿವೆ. ಸರ್ಕಾರ ಅನುದಾನ ನೀಡದ ಪರಿಣಾಮ ಕೇವಲ ನಾಮಫಲಕಕ್ಕೆ ಅಷ್ಟೇ ತಾಲೂಕು ಕೇಂದ್ರಗಳು ಸೀಮಿತವಾಗಿವೆ. ಕಳೆದೊಂದು ವರ್ಷದಲ್ಲಿ 5ರಿಂದ 6 ಜನ ತಹಶೀಲ್ದಾರರು ವರ್ಗಾವಣೆಯಾಗಿದ್ದಾರೆ. ಅಧಿಕಾರ ವಹಿಸಿಕೊಂಡ ಕೆಲ ತಿಂಗಳಲ್ಲಿಯೇ ವರ್ಗಾವಣೆಯ ಕಾಟದಿಂದಾಗಿ ನೂತನ ತಾಲೂಕು ಕಚೇರಿಯಲ್ಲಿ ಯಾವೊಬ್ಬ ತಹಶೀಲ್ದಾರರು ನೆಲಕಚ್ಚಿ ನಿಲ್ಲದ ಪರಿಸ್ಥಿತಿ ಸಾರ್ವಜನಿಕರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ರೋಣಕ್ಕೆ ತಪ್ಪದ ಅಲೆದಾಟ! : ಈ ಭಾಗದ ಜನತೆ ಹಲವಾರು ದಶಕಗಳಿಂದ ನಿರಂತರ ಹೋರಾಟ ಮಾಡಿದ ಫಲವಾಗಿ ಗಜೇಂದ್ರಗಡ ತಾಲೂಕನ್ನಾಗೇನೊ ಘೋಷಣೆ ಮಾಡಿ, ಕೈ ತೊಳೆದುಕೊಂಡಿದ್ದಾರೆ. ತಾಲೂಕು ಕೇಂದ್ರಕ್ಕೆ ಸಿಗಬೇಕಾದ ಸೌಕರ್ಯಗಳು ಇಲ್ಲವಾಗಿದೆ. ತಾಲೂಕು ಕ್ರೀಡಾಂಗಣ, ಉಪ ಖಜಾನೆ, ಮಿನಿ ವಿಧಾನಸೌಧ, ಅಗ್ನಿಶಾಮಕ ದಳ, ಕ್ಷೇತ್ರ ಶಿಕ್ಷಣಾಧಿಕಾರಿ, ಸಿಪಿಐ, ತಾಲೂಕು ಪಂಚಾಯತ್ ಸೇರಿ ಹಲವಾರು ಇಲಾಖೆಗಳ ಕೊರತೆಯಿಂದಾಗಿ ಈಗಲೂ ಜನತೆ ರೋಣ ಪಟ್ಟಣಕ್ಕೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಆಶಾಭಾವನೆಯಲ್ಲಿ ಜನತೆ : ಗಜೇಂದ್ರಗಡ ತಾಲೂಕುಗಬೇಕೆಂದು ನಾಲ್ಕು ದಶಕಗಳಿಂದ ಬೀದಿಗಿಳಿದು ಹೋರಾಟ ಮಾಡಲಾಗಿತ್ತು. ಇದಕ್ಕೆ ಸರ್ಕಾರ ಸಹ ಸ್ಪಂದಿಸಿತು. ಪ್ರತಿ ವರ್ಷ ಸರ್ಕಾರ ಮಂಡಿಸುವ ಬಜೆಟ್‌ನಲ್ಲಿ ನೂತನ ತಾಲೂಕಿಗೆ ಏನಾದರೂ ಕೊಡುಗೆ ಸಿಗಬಹುದೆಂದು ನಿರೀಕ್ಷೆಯಲ್ಲಿರುವ ಜನತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈ ಬಾರಿಯ ಬಜೆಟ್‌ನಲ್ಲಿ ಸ್ಪಂದಿಸುತ್ತಾರಾ ಎಂದು ಜನತೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಬೇಕಿದೆ ಸೌಲಭ್ಯ : ದಶಕದ ಹೋರಾಟದ ಫಲಕ್ಕೆ ನಿಟ್ಟುಸಿರು ಬಿಟ್ಟಿದ್ದ ಬಯಲು ಸೀಮೆ ಜನತೆಗೆ, ತಾಲೂಕು ಕೇಂದ್ರವಾದರೂ, ಕಿರಿ, ಕಿರಿ ಮಾತ್ರ ಇನ್ನು ತಪ್ಪಿಲ್ಲ. ತಾಲೂಕು ಕಚೇರಿ ಆರಂಭವಾಗಿ ಎರಡು ವರ್ಷ ಗತಿಸಿದರೂ, ಸೌಲಭ್ಯಗಳಿಲ್ಲದೇ ಕಚೇರಿ ಬಳಲುತ್ತಿದೆ. ವಿವಿಧ ಕಚೇರಿಗಳು ಈ ವರ್ಷ ಕಾರ್ಯಾರಂಭ ಆಗಬಹುದು, ಇನ್ನು ಕೆಲ ತಿಂಗಳಲ್ಲಿ ಆರಂಭ ಆಗುತ್ತೆ ಎಂದು ಜನತೆ ಜಾತಕ ಪಕ್ಷಿಯಂತೆ ಕಾದು, ನಿರಾಶಾದಾಯಕರಾಗಿ, ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಸಾರ್ವಜನಿಕರ ಅಲೆದಾಟ ತಪ್ಪಿಸುವ ಉದ್ದೇಶದಿಂದ ಸತತ ನಾಲ್ಕು ದಶಕಗಳ ಹೋರಾಟದ ಫಲವಾಗಿ ದೊರೆತ ನೂತನ ಗಜೇಂದ್ರಗಡ ತಾಲೂಕಿಗೆ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ನೀಡುವ ಮೂಲಕ ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸಿ, ಜನತೆಗೆ ಸರ್ಕಾರದ ಸೇವೆಗಳನ್ನು ತ್ವರಿತಗತಿಯಲ್ಲಿ ಸಿಗುವಂತೆ ಮಾಡದಿದ್ದರೆ, ಮತ್ತೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ. ವೀರಣ್ಣ ಸೊನ್ನದ, ತಾಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ
-ಡಿ.ಜಿ ಮೋಮಿನ್