ಬೆಂಗಳೂರು: ದಾರ್ಶನಿಕರಾದ ಬುದ್ಧ ಮತ್ತು ಮಹಾವೀರ ತಮ್ಮ ತತ್ವ ಸಿದ್ಧಾಂತ ಪ್ರಚಾರಕ್ಕಾಗಿ ಸಂಸ್ಕೃತದ ಬದಲಿಗೆ ಜನಸಾಮಾನ್ಯರ ಭಾಷೆ ಬಳಸಿದ್ದರಿಂದ ಜನಾನುರಾಗಿಯಾಗಿದ್ದಾರೆ ಎಂದು ಸಾಹಿತಿ ನಾಡೋಜ ಡಾ.ಹಂಪಾ ನಾಗರಾಜಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಜೈನ ಸಂಘದಿಂದ ಶುಕ್ರವಾರ ಜೈನಭವನದಲ್ಲಿ ಹಮ್ಮಿಕೊಂಡಿದ್ದ ಮಹಾವೀರ ಜಯಂತ್ಯುತ್ಸವ ಹಾಗೂ ಸಿದ್ಧಾಂತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ಪುರಪ್ರವೇಶ ಮತ್ತು ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬುದ್ಧ ಮತ್ತು ಮಹಾವೀರ ಒಂದೇ ಪ್ರದೇಶದಲ್ಲಿ ಸದಾ ಸಂಚಾರ ಮಾಡುತ್ತಿದ್ದರು. ಒಬ್ಬರನ್ನೊಬ್ಬರು ಭೇಟಿಯಾಗಿಲ್ಲ. ಆದರೆ, ಬುದ್ಧನ ಬಗ್ಗೆ ಮಹಾವೀರನಿಗೆ, ಮಹಾವೀರನ ಬಗ್ಗೆ ಬುದ್ಧನಿಗೆ ತಿಳಿದಿತ್ತು. ಅವರು ಭೇಟಿಯಾಗಿದ್ದರೆ ಧಾರ್ಮಿಕ ಚರಿತ್ರೆ ಹಾಗೂ ಸಾಮಾಜಿಕ ವೈಭವವೇ ಬದಲಾಗುತಿತ್ತು. ತಮ್ಮ ತತ್ವ ಸಿದ್ಧಾಂತದ ಪ್ರಚಾರಕ್ಕಾಗಿ ಬುದ್ಧ ಪಾಲಿ ಭಾಷೆ ಬಳಸಿಕೊಂಡರೆ, ಮಹಾವೀರ ಪ್ರಾಕೃತ ಭಾಷೆ ಆಯ್ಕೆ ಮಾಡಿಕೊಂಡಿದ್ದರು ಎಂದರು.
ಜೈನ ಧರ್ಮ ಇಂದು ಸಾಕಷ್ಟು ಬೆಳೆದಿದೆ. ವಿದೇಶಿ ಬರಹಗಾರರಿಂದ ಈ ಧರ್ಮದ ವ್ಯಾಪ್ತಿಯ ನಿಜವಾದ ಅರ್ಥ ಸಿಕ್ಕಿದೆ. ಜೈನ ಧರ್ಮ, ಬೌದ್ಧ ಧರ್ಮದ ಶಾಖೆಯಲ್ಲ. ಅದು ಬೌದ್ಧಧರ್ಮಕ್ಕಿಂತ ಪುರಾತನವಾದದ್ದು. ಹಾಗೇ, ಜೈನ ಧರ್ಮದ ಪ್ರಭಾವದಿಂದ ಬೌದ್ಧಧರ್ಮ ಹುಟ್ಟಿದೆ ಎಂಬುದನ್ನು ವಿದೇಶಿ ಬರಹಗಾರರು ಬರೆದಿದ್ದಾರೆ ಎಂದು ವಿವರಿಸಿದರು.
ಜೈನ ಧರ್ಮವನ್ನು ಹೊಸ ಕಾಲಕ್ಕೆ ತಕ್ಕಂತೆ ಆಧುನಿಕ ಜಗತ್ತಿಗೆ ತಿಳಿಸುವ ಕೆಲಸ ಮಾಡಬೇಕು. ಸಿದ್ಧಾಂತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಮಂಡ್ಯ ಜಿಲ್ಲೆಯ ಅರತಿಪುರದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿ ಸೇವಾ ಕಾರ್ಯ ಮಾಡಬೇಕು. ಸ್ಥಳೀಯರಿಗೆ ನೀರು, ನೆರಳು, ವಿದ್ಯೆ, ವಿವೇಕ ಈ ಕ್ಷೇತ್ರದಿಂದ ಸಿಗುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು, ಸಿದ್ಧಾಂತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರನ್ನು ಮಿಂಟೋ ಆಸ್ಪತ್ರೆ ವೃತ್ತದಿಂದ ಪೂರ್ಣಕುಂಭ ಸ್ವಾಗತ, ಮೆರವಣಿಗೆ ಮೂಲಕ ಕರೆತರಲಾಯಿತು. ಸಮಾರಂಭದಲ್ಲಿ ಸಾಧಕ ಎಂ.ಜೆ.ಬ್ರಹ್ಮಯ್ಯ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಜೈನ ಸಂಘದ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್, ನಿವೃತ್ತ ನ್ಯಾಯಮೂರ್ತಿ ಅಜಿತ್ ಜೆ.ಗುಂಜಾಳ್, ಚಿಕ್ಕಪೇಟೆ ಜಿನಮಂದಿರ ಅಧ್ಯಕ್ಷ ಟಿ.ಜಿ.ದೊಡ್ಡಮನಿ, ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ಡಾ.ಎಸ್.ಡಿ.ಪ್ರೇಮಕುಮಾರಿ ಮೊದಲಾದವರು ಇದ್ದರು.