ಬೆಂಗಳೂರು: ಲಾಕ್‌ಡೌನ್ ತೆರವಾದರೂ ದೂರವಾಗದ ಆತಂಕ, ರಸ್ತೆಗಿಳಿಯದ ಜನ, ವ್ಯಾಪಾರ-ವಹಿವಾಟಿನಲ್ಲಿ ಕಾಣದ ಚೇತರಿಕೆ, ಭಣಗುಡುವ ಹಾಟ್‌ಸ್ಪಾಟ್‌ಗಳು, ಬಿಕೋ ಎನ್ನುವ ಹೃದಯಭಾಗ…!
ವಾರಾಂತ್ಯದ ಲಾಕ್‌ಡೌನ್‌ನಿಂದ ಮುಕ್ತಗೊಂಡ ಬೆಂಗಳೂರಿನಲ್ಲಿ ಭಾನುವಾರ ಕಂಡುಬಂದ ದೃಶ್ಯಗಳಿವು. ಚಿತ್ರ ಮಂದಿರ, ನಮ್ಮ ಮೆಟ್ರೋ, ಜಿಮ್‌ಗಳು ಸೇರಿದಂತೆ ಕೆಲವೇ ಕೆಲವು ಹೊರತುಪಡಿಸಿದರೆ, ನಗರದಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳೂ ಬಂಧ ಮುಕ್ತವಾಗಿವೆ. ಎಂದಿನಂತೆ ಸಾರಿಗೆ ಸಂಚಾರ, ವ್ಯಾಪಾರ-ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ನಿತ್ಯ ದಾಖಲಾಗುತ್ತಿರುವ ಪ್ರಕರಣಗಳು ಸೃಷ್ಟಿಸಿರುವ ಭೀತಿಯು ಜನರಲ್ಲಿ ಸ್ವಯಂ ನಿರ್ಬಂಧ ಹಾಕಿಕೊಳ್ಳುವಂತೆ ಮಾಡಿದೆ. ಪರಿಣಾಮ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಮೊದಲ ವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಸದಾ ಗಿಜಿಗುಡುತ್ತಿದ್ದ ನಗರದ ಹೃದಯ ಭಾಗವಾದ ಮೆಜೆಸ್ಟಿಕ್, ಶಾಂತಿನಗರ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕೆ.ಜಿ.ರಸ್ತೆ,ಇಂದಿರಾನಗರ, ರಾಜಾಜಿನಗರ, ಮಲ್ಲೇಶ್ವರ, ಯಶವಂತಪುರ, ಕೋರಮಂಗಲ ಸೇರಿದಂತೆ ನಗರದ ಬಹುತೇಕ ಪ್ರದೇಶಗಳಲ್ಲಿ ಜನ ಸಂಚಾರ ನಿರೀಕ್ಷೆಗಿಂತ ಕಡಿಮೆ ಇತ್ತು. ಸಾರ್ವಜನಿಕರು ಔಷಧ, ಹಣ್ಣು-ಹಾಲು, ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಸಿ ಮನೆ ಸೇರಿಕೊಳ್ಳುತ್ತಿದ್ದರು. ಕೆಲ ಬಡಾವಣೆಗಳಲ್ಲಿ ಜನಸಂಚಾರ ಸಾಮಾನ್ಯವಾಗಿತ್ತು. ಉಳಿದ ದಿನಗಳಿಗೆ ಹೋಲಿಸಿದರೆ ನಗರದ ರಸ್ತೆಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನ ದಟ್ಟಣೆ ಕಡಿಮೆ ಇತ್ತು. ಅಂಗಡಿ ಮುಂಗಟ್ಟು, ಹೋಟೆಲ್, ರೆಸ್ಟೋರೆಂಟ್, ಮಾಲ್‌ಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು.
ಇನ್ನು ನಗರದಲ್ಲಿ ಏರ್‌ಪೋರ್ಟ್ ಟ್ಯಾಕ್ಸಿ, ಆಸ್ಪತ್ರೆ ಹಾಗೂ ತುರ್ತು ಕಾರ್ಯ ನಿಮಿತ್ತ ಟ್ಯಾಕ್ಸಿ ಹಾಗೂ ಆಟೋಗಳು ಸಂಚಾರ ಎಂದಿನಂತೆ ಮುಂದುವರಿದಿತ್ತು. ಆದರೆ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಪ್ರಯಾಣಿಕರ ಕೊರತೆ ಎದುರಿಸಿದವು. ಹೆದ್ದಾರಿಗಳಲ್ಲಿಯೂ ವಾಹನ ಸಂಚಾರ ವಿರಳವಾಗಿತ್ತು. ಟೋಲ್‌ಗಳ ಬಳಿ ವಾಹನ ಸಂಚಾರ ಸಾಮಾನ್ಯವಾಗಿತ್ತು. ಅಗತ್ಯ ವಸ್ತುಗಳ ಸಾಗಾಟದ ವಾಹನಗಳ ಸೇವೆ ಮುಂದುವರಿದಿತ್ತು. ಹೋಟೆಲ್‌ಗಳು, ರೆಸ್ಟೋರೆಂಟ್, ಮೆಡಿಕಲ್ ಶಾಪ್ ಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಕೆಲ ಹೋಟೆಲ್, ಔಷಧಿ ಅಂಗಡಿಗಳನ್ನು ಮುಚ್ಚಲಾಗಿತ್ತು. ಉಪಹಾರ ಮಂದಿರ, ದರ್ಶಿನಿ ಮಾದರಿಯ ಹೋಟೆಲ್ ಗಳಲ್ಲಿ ತಕ್ಕಮಟ್ಟಿನಲ್ಲಿ ಗ್ರಾಹಕರು ಇದ್ದರು. ಮಟನ್ ಹಾಗೂ ಮದ್ಯದಂಗಡಿಗಳಿಗೆ ವ್ಯಾಪಾರ ಉತ್ತಮವಾಗಿತ್ತು. ಕೆಲ ಮಾಂಸದಂಗಡಿಗಳ ಬಳಿ ಸಾಮಾಜಿಕ ಅಂತರ ಕಾಯ್ದುಕೊಂಡು ಜನ ಮಾಂಸ ಖರೀದಿಸುತ್ತಿದ್ದ ದೃಶ್ಯಗಳು ಕಾಣ ಸಿಕ್ಕವು. ಇನ್ನು ಪಾನಪ್ರಿಯರತು ಮದ್ಯದಂಗಡಿಗಳ ಕೌಂಟರ್‌ಗಳಲ್ಲಿ ನಿಂತು ಉತ್ಸಾಹದಲ್ಲೇ ತಮ್ಮ ಇಷ್ಟದ ಮದ್ಯ ಖರೀದಿಸಿದರು.