Advertisement

ಪ್ರವಾಹದಿಂದ ಜನರಿಗೆ ಸಂಕಷ್ಟದ ಬರೆ

11:11 AM Aug 11, 2019 | Team Udayavani |

ಜಮಖಂಡಿ: ಕೃಷ್ಣಾನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ 27 ಗ್ರಾಮಗಳ 15ಕ್ಕೂ ಹೆಚ್ಚು ಸಂಪರ್ಕ ರಸ್ತೆಗಳ ಜೊತೆಯಲ್ಲಿ ಪ್ರಮುಖ ಎರಡು ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳ ಸ್ಥಗಿತಗೊಂಡಿದೆ. ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಅನಾನುಕೂಲತೆ ಸೃಷ್ಟಿಯಾಗುತ್ತಿದೆ.

Advertisement

ಗ್ರಾಮೀಣ ಭಾಗದಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಸತತ ಸುರಿಯುತ್ತಿರುವ ಮಳೆಯಿಂದ ರಾಜ್ಯ ಹೆದ್ದಾರಿ ಬಂದ್‌ ಆಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಕಾಯಿಪಲ್ಲೆ, ತರಕಾರಿ, ಕಿರಾಣಿ ವಸ್ತುಗಳ ಬೆಲೆಗಳು ಗಗನಕ್ಕೆ ಏರಿಕೆಯಾಗಿದೆ. 50ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ನಲ್ಲಿ ಇಂಧನ ಇಲ್ಲದ ಪರಿಣಾಮ ದ್ವಿಚಕ್ರ ವಾಹನ ಸವಾರರು, ವಾಹನಗಳು ಪರದಾಡುತ್ತಿವೆ.

ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳು ಲಭಿಸುತ್ತಿಲ್ಲ. ಲಭಿಸಿದರೂ ವಸ್ತುಗಳ ಬೆಲೆ ದುಬಾರಿಯಾಗಿವೆ. ಜಮಖಂಡಿ ಕೇಂದ್ರ ಬಸ್‌ ಘಟಕದ ಸಾರಿಗೆ ವಾಹನ ಸ್ಥಗಿತಗೊಂಡಿವೆ. ಜನರ ಸಂಚಾರವಿಲ್ಲದೇ ಆದಾಯ ಕಡಿಮೆಯಾಗಿದೆ. ಪ್ರತಿನಿತ್ಯ ಪ್ರವಾಹ ಮಾತ್ರ ಏರುತ್ತಲೇ ಇದೆ.

ವಿಜಯಪುರ- ಧಾರವಾಡ ರಾಜ್ಯ ಹೆದ್ದಾರಿ ಪ್ರತಿನಿತ್ಯ ದಿನದ 24 ಗಂಟೆಯಲ್ಲಿ 8 ಸಾವಿರ ಟ್ರಕ್‌, 900 ಸರಕಾರಿ ಸಾರಿಗೆ ಬಸ್‌ಗಳು, 10 ಸಾವಿರ ಖಾಸಗಿ ವಾಹನಗಳು, 6 ಸಾವಿರಕ್ಕೂ ಹೆಚ್ಚು ಓಡಾಡುವ ರಸ್ತೆ ಕೃಷ್ಣಾನದಿ ಪ್ರವಾಹದಿಂದ ಬಿಕೋ ಎನ್ನುತ್ತಿವೆ. ಇನ್ನೊಂದು ವಾರ ಇದೇ ಪರಿಸ್ಥಿತಿ ಮುಂದುವರಿದ್ದಲ್ಲಿ ಜನರ ಜೀವನ ಸಂಕಷ್ಟದಲ್ಲಿ ಸಿಲುಕಲಿದೆ.

ತಾಲೂಕಿನ ಕೃಷ್ಣಾನದಿ ಅಬ್ಬರದ ಪ್ರವಾಹಕ್ಕೆ ಹತ್ತಾರು ಗ್ರಾಮಗಳಲ್ಲಿ ಸಿಲುಕಿರುವ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದು, ತಾಲೂಕಾಡಳಿತ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲೂಕಿನ 27 ಗ್ರಾಮಗಳಿಗೆ ಪ್ರವಾಹ ಭೀತಿ ಮುಂದುವರಿದಿದೆ. ಶಾಸಕರು, ತಾಲೂಕಾಡಳಿತ, ರೆಡ್‌ಕ್ರಾಸ್‌ ಸಂಸ್ಥೆ, ಅರಣ್ಯಇಲಾಖೆ, ಅಗ್ನಿ ಶಾಮಕದಳ ಅಧಿಕಾರಿಗಳು ಜನ- ಜಾನುವಾರುಗಳನ್ನು ಸ್ಥಳಾಂತರಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next