ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಪದೇ ಪದೆ ತಮ್ಮ ಮಾತಿನಲ್ಲಿ ಪ್ರಧಾನಿ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ತುಚ್ಯವಾಗಿ ಮಾತನಾಡುತ್ತಿದ್ದರು. ಇಂದು ಕರ್ನಾಟಕದ ಜನತೆ ಅವರಿಗೆ ದಿಟ್ಟ ಉತ್ತರ ನೀಡಿದ್ದಾರೆ ಎಂದು ಸಂಸದ ಪ್ರತಾಪ್‌ಸಿಂಹ ಹೇಳಿದರು.
ನಗರದ ಚಾಮರಾಜಪುರಂನ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರೊಮದಿಗೆ ವಿಜಯೋತ್ಸವ ಆಚರಿಸುವ ವೇಳೆ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಹಾಗೂ ಹಿರಿಯರಾದ ವಿ.ಶ್ರೀನಿವಾಸಪ್ರಸಾದ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರಕ್ಕೆ ತಲಾ ಒಂದೊಂದು ಸ್ಥಾನ ಲಭಿಸಿದೆ. ಮೋದಿ ಅವರು ಮೈಸೂರಿಗೆ ಬಂದಾಗ ಮಹಾರಾಜ ಮೈದಾನದಲ್ಲಿ ಸುಮಲತಾ ಅಂಬರೀಷ್ ಅವರನ್ನು ಗೆಲ್ಲಿಸಿ ಎಂದು ಮಂಡ್ಯ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಈಗ ಮಂಡ್ಯ ಜನತೆ ಸುಮಲತಾ ಅವರನ್ನು ಗೆಲ್ಲಿಸಿದ್ದಾರೆಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಮಾತಿಗೂ ಪ್ರಧಾನಿ ಮೋದಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ತುಚ್ಯವಾಗಿ ಮಾತನಾಡುತ್ತಿದ್ದರು. ಇಂದು ಕರ್ನಾಟಕದ ಜನತೆ ಅವರಿಗೆ ದಿಟ್ಟ ಉತ್ತರ ನೀಡಿದ್ದಾರೆ. ಇನ್ನು ಮುಂದೆ ಮೈಸೂರು-ಕೊಡಗು ಹಾಗೂ ಚಾಮರಾಜನಗರದಲ್ಲಿ ಮೋದಿ ಆಡಳಿತ ನಡೆಯುತ್ತದೆ ಎಂದು ಹೇಳಿದರು.
ನಾನು ರಾಜಕಾರಣಿಯಾದಾಗ ದ್ವೇಷಿಸಿದಿರಿ. ಇದರಲ್ಲಿ ತನ್ನ ತಪ್ಪುಗಳಿವೆ. ಆ ತಪ್ಪುಗಳನ್ನು ತಿದ್ದುಕೊಳ್ಳಬೇಕಿತ್ತು. ಕಾರ್ಯಕರ್ತರೊಂದಿಗೆ ಕಟುವಾಗಿ, ಒರಟಾಗಿ ವರ್ತಿಸಿದ್ದೇನೆ. ಇನ್ನುಮುಂದೆ ಈ ರೀತಿ ಮಾಡುವುದಿಲ್ಲ. ಪಕ್ಷದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ಎಂದರು.
2024ರ ಹೊತ್ತಿಗೆ ಮೈಸೂರು ಬೆಂಗಳೂರು ದಶಪಥ ಹಾಗೂ ಮೈಸೂರು ಮಡಿಕೇರಿ ಹೆದ್ದಾರಿ ಹಾಗೂ ಮೈಸೂರಿಗೆ ಹೊಸ ಸ್ಯಾಟಲೈಟ್ ರೈಲು ನಿಲ್ದಾಣ, ಏರ್‌ಪೋರ್ಟ್ ಅಭಿವೃದ್ಧಿಯನ್ನು ಸಾಧಿಸಲಾಗುವುದು. ಮೈಸೂರಿನಲ್ಲಿ ಮೋದಿ ಹೆಸರು ಚಿರಸ್ಥಾಯಿಯಾಗಿ ಉಳಿದುಕೊಳ್ಳುವಂತೆ ಮಾಡುತ್ತೇವೆಂದು ಭರವಸೆ ನೀಡಿದರು.