ಗದಗ: ಹೋಳಿ ಹುಣ್ಣಿಮೆಯಾಗುತ್ತಿದ್ದಂತೆ ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೂರ್ಯನ ಪ್ರಖರ ಹೆಚ್ಚುತ್ತಿದೆ. ದಿನದಿಂದ ದಿನಕ್ಕೆ ಬಿಸಲಿನ ಝಳ ಹೆಚ್ಚುತ್ತಿದ್ದು, ಭೂಮಿ ಕಾದ ಕಾವಲಿಯಂತಾಗುತ್ತಿದೆ. ಹೀಗಾಗಿ ಜನರು ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ತಂಪು ಪಾನೀಯ ಹಾಗೂ ಕೊಡೆಗಳ ಮೊರೆ ಹೋಗುವಂತಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಬೇಸಿಗೆ ಬಿಸಿಲು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಕಳೆದ ಹಿಂಗಾರಿನಲ್ಲಿ ಅತಿವೃಷ್ಟಿಯಾಗಿ, ಹಲವೆಡೆ ಹಳ್ಳ-ಕೊಳ್ಳಗಳು ಸಮೃದ್ಧವಾಗಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಿ, ಭೂಮಿಯಲ್ಲಿ ತೇವಾಂಶವೂ ಕಡಿಮೆಯಾಗಿಲ್ಲ. ಹೀಗಾಗಿ ಫೆಬ್ರವರಿ ಕೊನೆಯ ವಾರದವರೆಗೂ ಶೀತಗಾಳಿ ಬೀಸುತ್ತಿತ್ತು. ಆದರೆ, ಮಾರ್ಚ್ ಆರಂಭಗೊಂಡ ಬಳಿಕ ಬೇಸಿಗೆ ಬಿಸಿಲು ಚುರುಕುಗೊಂಡಿದ್ದು, ದಿನದಿಂದ ದಿನಕ್ಕೆ ಝಳ ಹೆಚ್ಚುತ್ತಿದೆ. ರವಿವಾರ ಗರಿಷ್ಠ 36 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು, ಈಗಾಗಲೇ ರಣ ಬಿಸಲಿನ ತಾಪದಿಂದ ಜನರು ಬೆವರುವಂತಾಗಿದೆ. ಕಳೆದೊಂದು ದಶಕಗದಲ್ಲೇ ಗರಿಷ್ಠ ಎಂದರೆ ನಾಲ್ಕು ವರ್ಷಗಳ ಹಿಂದೆ (2016) ಮಾರ್ಚ್ ನಲ್ಲಿ 39.4 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. 1953ರ ಮಾರ್ಚ್ ತಿಂಗಳಲ್ಲಿ ಗರಿಷ್ಠ 40 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಇದೇ ಈ ವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.
ಹೆಚ್ಚಿದ ತಾಪ: ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಜಿಲ್ಲೆಯಲ್ಲಿ 35 ರಿಂದ 38.9 ಡಿಗ್ರಿ ಸೆಲ್ಸಿಯಸ್ ವಾಡಿಕೆ ಉಷ್ಣಾಂಶ ಇರುತ್ತದೆ. ಆದರೆ, ಈ ಬಾರಿ ಮಾರ್ಚ್ ಆರಂಭದಿಂದಲೇ ಬಿಸಿಲಿನ ಝಳದಲ್ಲಿ ವಿಪರೀತವಾಗಿ ಏರಿಕೆಯಾಗುತ್ತಿದೆ. ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ತೀವ್ರ ಬಿಸಿಲಿರುತ್ತದೆ. ಬಿಸಿಲಿನ ಪ್ರಖರತೆಯಿಂದ ಮಧ್ಯಾಹ್ನದ ವೇಳೆಗೆ ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುವಂತಾಗಿದೆ.
ಹೀಗಾಗಿ ಮಧ್ಯಾಹ್ನದ ವೇಳೆಗೆ ಮಾರುಕಟ್ಟೆ ಸೇರಿದಂತೆ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಜನ ಸಂದಣಿ ಕಡಿಮೆಯಾಗುತ್ತಿದೆ. ಈಗಲೇ ಇಷ್ಟೊಂದು ಬಿಸಿಲಿದ್ದರೆ,ಮುಂದಿನ ಏಪ್ರಿಲ್, ಮೇ ತಿಂಗಳ ಪರಿಸ್ಥಿತಿ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆ. ಹವಾಮಾನ ಇಲಾಖೆ ಮುನ್ನೋಟದ ಪ್ರಕಾರ ಇನ್ನೂ ಒಂದು ವಾರದವರೆಗೆ ಇದೇ ಉಷ್ಣಾಂಶ ಮುಂದುವರಿಯುವ ಲಕ್ಷಣಗಳಿವೆ ಎಂದು ಹೇಳಲಾಗಿದೆ.
ತಂಪು ಪಾನೀಯಕ್ಕೆ ಬೇಡಿಕೆ: ಕೆಲಸದ ನಿಮಿತ್ತ ನಗರ ಹಾಗೂ ಸುತ್ತಲಿನ ಗ್ರಾಮಗಳಿಂದ ಪಟ್ಟಣಕ್ಕೆ ಬರುವ ಜನರು ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದಾರೆ. ಪಾದಚಾರಿಗಳು ನೆತ್ತಿ ಸುಡುವ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕೊಡೆ, ಮರದ ನೆರಳು ಹುಡುಕುತ್ತಿದ್ದಾರೆ. ಬಿಸಿಲಿನ ತಾಪದಿಂದ ದಾಹವೂ ಹೆಚ್ಚುತ್ತಿದ್ದು, ಜನರು ಕಬ್ಬಿನ ಹಾಲು, ಎಳೆ ನೀರು ಹಾಗೂ ಇತರೆ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ನಗರದ ಪಂಚರ ಹೊಂಡ, ಗಾಂಧಿ ಸರ್ಕಲ್, ಭೂಮರೆಡ್ಡಿ ಸರ್ಕಲ್, ಬೆಟಗೇರಿ ಬಸ್ ನಿಲ್ದಾಣ ಭಾಗದಲ್ಲಿರುವ ತಂಪು ಪಾನೀಯ ಅಂಗಡಿಗಳಿಗೆ ಜನರು ಮುಗಿಬೀಳುತ್ತಿದ್ದಾರೆ.
ದಿನ ಕಳೆದಂತೆ ಬೇಸಿಗೆ ಬಿರು ಬಿಸಿಲು ಹೆಚ್ಚುತ್ತಿದ್ದು, ಎಷ್ಟೇ ನೀರು, ತಂಪು ಪಾನೀಯಗಳನ್ನು ಕುಡಿದರೂ ದಾಹ ನೀಗುತ್ತಿಲ್ಲ. ದಿನಕ್ಕೆ 50 – 80 ರೂ. ಸೋಡಾ, ಹಣ್ಣಿಗೆ ಖರ್ಚಿ ಮಾಡುವಂತಾಗುತ್ತದೆ. ಬಿಸಿಲಿನಿಂದ ಸಾಕಾಗಿದೆ.
–ಶ್ರೀನಿವಾಸ ಕೆ.ಎಂ. ಖಾನತೋಟ ನಿವಾಸಿ
-ವಿಶೇಷ ವರದಿ