Advertisement

ವಿದ್ಯುತ್‌ ವಾಹನಗಳಿಗೆ ಜನ ಶರಣು; ವರ್ಷದಲ್ಲಿ ಇವಿ ವಾಹನಗಳ ಸಂಖ್ಯೆ ಜಿಗಿತ

04:55 PM Apr 12, 2022 | Team Udayavani |

ಹೊಸದಿಲ್ಲಿ: ದಿನ ಬೆಳಗಾದರೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾಗುತ್ತಿದೆ.ಹೀಗಾಗಿ ಜನರು ವಿದ್ಯುತ್‌ ಚಾಲಿತ ವಾಹನ (ಇವಿ)ಗಳತ್ತ ಮುಖ ಮಾಡಿದ್ದಾರೆ. 2021-22ನೇ ಸಾಲಿನಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಖರೀದಿ ಮೂರು ಪಟ್ಟು ಹೆಚ್ಚಾಗಿದೆ. ಅದರಲ್ಲೂ ದ್ವಿಚಕ್ರ ವಾಹನಗಳ ಪ್ರಮಾಣವೇ ಹೆಚ್ಚು ಎಂದು ವಾಹನ ಡೀಲರ್‌ಗಳ ಒಕ್ಕೂಟ (ಎಫ್ಎಡಿಎ)ವು ದೇಶ ವ್ಯಾಪಿ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ.

Advertisement

ಒಟ್ಟು 4,29,217 ಇವಿಗಳು ಮಾರಾಟ ವಾಗಿವೆ. 2020-21ನೇ ಸಾಲಿನಲ್ಲಿ 1,34,821 ವಾಹನಗಳು ಮಾರಾಟ ವಾಗಿದ್ದವು. ತೈಲೋ ತ್ಪನ್ನ ಗಳ ದರ ಏರಿಕೆ ಮತ್ತು ದುರಸ್ತಿ ವಿಚಾರವೂ ಜನರನ್ನು ಕಂಗೆಡಿಸಿದ್ದು ಇದಕ್ಕೆ ಕಾರಣ.

ಪ್ರಯಾಣಿಕರ ವಾಹನದಲ್ಲೂ ಏರಿಕೆ
ಪ್ರಯಾಣಿಕರ ವಾಹನಗಳ ವಿಭಾಗದಲ್ಲಿ ಕೂಡ ಇವಿಗಳು ಹೆಚ್ಚು ಮಾರಾಟವಾಗಿರುವ ಬಗ್ಗೆ ಒಕ್ಕೂಟ ಮಾಹಿತಿ ನೀಡಿದೆ. 2020-21ನೇ ಸಾಲಿನಲ್ಲಿ 4,984 ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದರೆ, ನಿಕಟಪೂರ್ವ ವಿತ್ತೀಯ ವರ್ಷದಲ್ಲಿ 17,802 ವಾಹನಗಳಿಗೆ ಬೇಡಿಕೆ ಬಂದಿದ್ದವು. ಈ ಪೈಕಿ ಟಾಟಾ ಮೋಟರ್ಸ್‌ನ 15,198 ವಾಹನಗಳು ಗ್ರಾಹಕರನ್ನು ಕಂಡುಕೊಂಡಿವೆ. ಇನ್ನು ಎಂ.ಜಿ. ಮೋಟಾರ್‌ ಇಂಡಿಯಾದ 2,045 ವಾಹನಗಳು ಮಾರಾಟವಾಗುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ. ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಮತ್ತು ಹ್ಯುಂಡೈ ಕ್ರಮವಾಗಿ ತೃತೀಯ ಮತ್ತು ಚತುರ್ಥ ಸ್ಥಾನಗಳಲ್ಲಿವೆ.

ಐದರಷ್ಟು ಹೆಚ್ಚು
ಹೆಚ್ಚು ಮಾರಾಟವಾಗಿರುವುದು ದ್ವಿಚಕ್ರ ವಾಹನಗಳು. 2021-22ನೇ ಸಾಲಿನಲ್ಲಿ 2,31,338 ವಿದ್ಯುಚ್ಛಾಲಿತ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. ಅದಕ್ಕಿಂತ ಹಿಂದಿನ ವಿತ್ತೀಯ ವರ್ಷದಲ್ಲಿ ಕೇವಲ 41,046 ಇವಿಗಳು ಮಾರಾಟವಾಗಿದ್ದವು. ದ್ವಿಚಕ್ರ ವಾಹನಗಳ ಪೈಕಿ ಹೀರೋ ಇಲೆಕ್ಟ್ರಿಕ್‌ ಕಂಪೆನಿಯ ಶೇ. 28.23 ವಾಹನಗಳು ಮಾರಾಟವಾಗಿವೆ. ಒಕಿನಾವಾ ಅಟೋಟೆಕ್‌ ದ್ವಿತೀಯ ಸ್ಥಾನದಲ್ಲಿದೆ. ಆ್ಯಂಪ್ರೀ ವೆಹಿಕಲ್‌ನ 24,648 ವಾಹನಗಳು ಮಾರಾಟವಾಗಿ ತೃತೀಯ, ಎಥರ್‌ ಎನರ್ಜಿಯ 19,97 ವಾಹನಗಳು ಮಾರಾಟವಾಗಿ ನಾಲ್ಕನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next