Advertisement

ಪೌರತ್ವ ತಿದ್ದುಪಡಿ ಕಾಯಿದೆ ಪರ ಸಮಾವೇಶಕ್ಕೆ ಜನ ಬೆಂಬಲ

10:05 AM Jan 28, 2020 | sudhir |

ಮಹಾನಗರ: ದ.ಕ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಪರವಾಗಿ ನಗರದ ಹೊರವಲಯದ ಗೋಲ್ಡ್‌ಪಿಂಚ್‌ ಸಿಟಿ ಮೈದಾನದಲ್ಲಿ ಸೋಮವಾರ ಬೃಹತ್‌ ಜನಜಾಗೃತಿ ಸಮಾವೇಶ ಆಯೋಜಿಸಿದ್ದ ಹಿನ್ನೆಲೆ ನಗರದಲ್ಲಿಯೂ ವಾಹನ-ಜನ ಸಂಚಾರ ಕಡಿಮೆಯಾಗಿತ್ತು. ಈ ಸಮಾವೇಶಕ್ಕೆ ಬೆಂಬಲ ವ್ಯಕ್ತಪಡಿಸಿ ಕೆಲವೊಂದು ಕಡೆ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಸ್ಟೇಟ್‌ಬ್ಯಾಂಕ್‌ ಬಳಿಯ ಮೀನು ಮಾರುಕಟ್ಟೆ ಮುಚ್ಚಿದ್ದು, ಯಾವುದೇ ವಹಿವಾಟು ನಡೆಯುತ್ತಿರಲಿಲ್ಲ.

Advertisement

ನಗರದಲ್ಲಿ ಹೆದ್ದಾರಿಯ ಇಕ್ಕೆಲಗಳು ಸೇರಿದಂತೆ ವಿವಿದೆಡೆ ಬಿಜೆಪಿ-ಕೇಸರಿ ಬಾವುಟ ರಾರಾಜಿಸುತ್ತಿದ್ದವು. ಸಮಾವೇಶಕ್ಕೆ ಅನೇಕರು ಬಸ್‌-ಬೈಕ್‌ ಸೇರಿದಂತೆ ವಿವಿಧ ವಾಹನಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ತೆರಳುತ್ತಿದ್ದ ದೃಶ್ಯ ಕೂಡ ನಗರದಲ್ಲಿ ಕಂಡುಬಂತು. ಸಮಾವೇಶಕ್ಕೆ ಆಗಮಿಸಲು ಜಿಲ್ಲೆಯ ವಿವಿಧೆಡೆಯಿಂದ ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಿಎಎ ಕುರಿತಾದ ಬೃಹತ್‌ ಜನ ಜಾಗೃತಿ ಸಮಾವೇಶದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಹೆದ್ದಾರಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿತ್ತು. ಹೆದ್ದಾರಿ ಸೇರಿದಂತೆ ಜಿಲ್ಲೆಯ ಪ್ರಮುಖ ರಸ್ತೆಗಳು ಹಾಗೂ ಮಂಗಳೂರು ನಗರಕ್ಕೆ ಹೊಂದಿಕೊಂಡಿರುವ ಪ್ರಮುಖ ರಸ್ತೆಗಳಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಕೆಲವೆಡೆ ವಾಹನ ದಟ್ಟನೆ, ಸಂಚಾರ ವ್ಯತ್ಯಯ ಉಂಟಾದವು.

ನಗರದ ಸೆಂಟ್ರಲ್‌ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಕಡಿಮೆ ಇತ್ತು. ಕೆಲವೊಂದು ಅಂಗಡಿಗಳು ಮುಚ್ಚಿದ್ದವು. ಇನ್ನು, ತಳ್ಳುವ ಗಾಡಿ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ಕೂತಿದ್ದ ದೃಶ್ಯ ಕಂಡು ಬಂತು. ಮುನ್ನೆಚ್ಚರಿಕೆ ದೃಷ್ಟಿಯಿಂದ ಸೆಂಟ್ರಲ್‌ ಮಾರುಕಟ್ಟೆ ಸುತ್ತಮುತ್ತ ಪೊಲೀಸ್‌ ಬಿಗಿ ಬಂದೋಬಸ್ತ್ ಇತ್ತು.
ಸಮಾವೇಶದ ಕಾರಣದಿಂದಾಗಿ ನಗರದಲ್ಲಿ ಖಾಸಗಿ ಬಸ್‌ಗಳು ಎಂದಿಗಿಂತ ಕಡಿಮೆಯಿದ್ದವು. ನಗರದ ಸ್ಟೇಟ್‌ಬ್ಯಾಂಕ್‌ನಲ್ಲಿರುವ ಸಿಟಿ ಬಸ್‌ ನಿಲ್ದಾಣ ಮತ್ತು ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಬಸ್‌ಗಳ ಸಂಖ್ಯೆ ಕಡಿಮೆಯಿತ್ತು. ಇದರಿಂದಾಗಿ ನಗರದ ಜ್ಯೋತಿ ವೃತ್ತ, ಬಂಟ್ಸ್‌ ಹಾಸ್ಟೆಲ್‌, ಬಲ್ಮಠ, ಬೆಸೆಂಟ್‌, ಕೊಡಿಯಾಲ್‌ಬೈಲ್‌, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌, ಪಂಪ್‌ವೆಲ್‌ ಸೇರಿದಂತೆ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಸಾರ್ವಜನಿಕರು ಬಸ್‌ಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂತು.

ಪೊಲೀಸ್‌ ಬಂದೋಬಸ್ತ್
ಮುನ್ನೆಚ್ಚರಿಕಾ ದೃಷ್ಟಿಯಿಂದ ಮಂಗಳೂರು ನಗರದಲ್ಲಿಯೂ ಪೊಲೀಸ್‌ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ನಗರದ ಪ್ರಮುಖ ಜಂಕ್ಷನ್‌ಗಳಾದ ಪಂಪ್‌ವೆಲ್‌, ಬಂಟ್ಸ್‌ಹಾಸ್ಟೆಲ್‌, ಮಣ್ಣಗುಡ್ಡೆ, ಉರ್ವಾ, ನಂತೂರು, ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣ, ಹಂಪನಕಟ್ಟೆ ಸೇರಿದಂತೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ವಾಹನ ದಟ್ಟಣೆ ಹೆಚ್ಚಿದ್ದ ಕಾರಣದಿಂದಾಗಿ ನಗರದ ಬಂಟ್ಸ್‌ ಹಾಸ್ಟೆಲ್‌, ನಂತೂರು, ಪಂಪ್‌ವೆಲ್‌ ಸೇರಿದಂತೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.
ಗೋಲ್ಡ್‌ ಪಿಂಚ್‌ ಮೈದಾನ ಹಾಗೂ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಪೊಲೀಸ್‌ ಇಲಾಖೆ ವ್ಯಾಪಕ ಬಂದೋಬಸ್ತ್ ಕೈಗೊಂಡಿತ್ತು. ಮಂಗಳೂರು ಪೊಲೀಸ್‌ ಆಯುಕ್ತ ಡಾ| ಪಿ.ಎಸ್‌. ಹರ್ಷ ಅವರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ, ನಗರ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕೆಎಸ್‌ಆರ್‌ಪಿ ಸೇರಿದಂತೆ ವಿವಿಧ ಶ್ರೇಣಿಯ ಪೊಲೀಸರು ಭದ್ರತೆಯ ಉಸ್ತುವಾರಿಯಲ್ಲಿದ್ದರು. ಸಾವಿರಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರದ ಆಯಕಟ್ಟಿನ ಪ್ರದೇಶಗಳಲ್ಲಿಯೂ ಭದ್ರತೆ ಹೆಚ್ಚಿತ್ತು. ಸಮಾವೇಶ ನಡೆಯುವ ವ್ಯಾಪ್ತಿಯಲ್ಲಿ ಬಾಂಬ್‌ ನಿಷ್ಕಿÅàಯ ದಳದ ತಂಡದವರು ಕೂಡ ತಪಾಸಣಾ ಕಾರ್ಯ ನಡೆಸುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next