ವಿಜಯಪುರ: ನಗರದಲ್ಲಿ ಹಾಳಾಗಿದ್ದ ಮನಗೂಳಿ ರಸ್ತೆ ದುರಸ್ತಿ ಕಾರ್ಯ ಮಂದಗತಿಯಲ್ಲಿ ಸಾಗಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗಿದ್ದನ್ನು ವಿರೋಧಿಸಿ ಸಾರ್ವಜನಿಕರು ಮರಾಠಿ ವಿದ್ಯಾಲಯದ ಬಳಿ ರಸ್ತೆ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಸೋಮವಾರ ಬೆಳಗ್ಗೆ 11ರ ವೇಳೆ ರಸ್ತೆಗಿಳಿದ ಮನಗೂಳಿ ರಸ್ತೆ ಮಾರ್ಗದ ವಿವಿಧ ಕಾಲೋನಿ ಜನರು, ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಕಾಮಗಾರಿ ತ್ವರಿತಕ್ಕೆ ಆದೇಶ ನೀಡುವವರೆಗೂ ರಸ್ತೆ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರಿಗೂ ಮಣಿಯಲಿಲ್ಲ. ಬದಲಾಗಿ ಸಂಬಂಧಿಸಿದ ಅಧಿಕಾರಿಗಳನ್ನೇ ಸ್ಥಳಕ್ಕೆ ಕರೆಸಿ ಕಾಮಗಾರಿ ಮುಗಿಸುವ ನಿಖರ ದಿನಾಂಕ ತಿಳಿಸುವಂತೆ ಆಗ್ರಹಿಸಿದರು.
ಸದರಿ ರಸ್ತೆಯನ್ನು ದುರಸ್ತಿ ನೆಪದಲ್ಲಿ ಅಗೆದು ಹಾಕಿ ಸುಮಾರು ಆರೇಳು ತಿಂಗಳಾಗಿದೆ. ಕಳೆದ ಕೆಲವು ತಿಂಗಳಿಂದ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸವಾರರು, ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮತ್ತೂಂದೆಡೆ ರಸ್ತೆಯನ್ನು ಅಗೆದಿರುವ ಕಾರಣ ಧೂಳು ಆವರಿಸುತ್ತಿದ್ದು ರಸ್ತೆ ಎರಡೂ ಬದಿಯಲ್ಲಿರುವ ನಿವಾಸಿಗಳು ಕಂಗೆಟ್ಟಿದ್ದಾರೆ. ಈ ಮಾರ್ಗದ ಬಹುತೇಕ ಸಣ್ಣ ವ್ಯಾಪಾರಿಗಳು ಧೂಳಿನ ಕಾರಣದಿಂದ ಅಂಗಡಿಗಳನ್ನೇ ಸಂಪೂರ್ಣ ಬಂದ್ ಮಾಡಿದ್ದು ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ದೂರಿದರು.
ನಿವಾಸಿಗಳ ಪರವಾಗಿ ಮಾತನಾಡಿದ ಸತೀಶ ಪಾಟೀಲ, ನಗರದ ಮನಗೂಳಿ ರಸ್ತೆ ನಗರದ ಪ್ರಮುಖ ರಸ್ತೆಯಾಗಿದ್ದು ದುರಸ್ತಿ ನೆಪದಲ್ಲಿ ಕಾಮಗಾರಿ ಕೈಗೆತ್ತಿಕೊಂಡರೂ ಹಲವು ತಿಂಗಳಿಂದ ಸಂಪೂರ್ಣ ಸ್ಥಗಿತಗೊಂಡಿದೆ. ಜಿಪಂ ಸಿಇಒ, ಜಿಲ್ಲಾಧಿಕಾರಿ, ಸಚಿವರು, ಶಾಸಕರು, ಸಂಸದರು ಎಲ್ಲರೂ ಇದೇ ಮಾರ್ಗವಾಗಿ ವಾಹನಗಳಲ್ಲಿ ಓಡಾಡುತ್ತಿದ್ದರೂ ಜನರ ಸಮಸ್ಯೆ ಆಲಿಸುತ್ತಿಲ್ಲ. ಸ್ಥಗಿತಗೊಂಡಿರುವ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ ಎಂದು ವಾಗ್ಧಾಳಿ ನಡೆಸಿದರು.
ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವ ಕಾರಣ ಇಡಿ ಪ್ರದೇಶದಲ್ಲಿ ವಾಹನಗಳಿಂದಾಗಿ ಧೂಳು ವ್ಯಾಪಕವಾಗಿದೆ ಹರಡುತ್ತಿದೆ. ಸಂಚಾರವೂ ಅವ್ಯವಸ್ಥೆಯಾಗಿದೆ. ಪರಿಣಾಮ ಈ ಮಾರ್ಗದ ಪರಿಸರದಲ್ಲಿರುವ ನಿವಾಸಿಗಳು ಧೂಳಿನಿಂದ ಹಾಗೂ ಹದಗೆಟ್ಟ ರಸ್ತೆಯಿಂದ ಕಂಗೆಟ್ಟಿದ್ದಾರೆ. ಹೀಗಾಗಿ ತಕ್ಷಣವೇ ರಸ್ತೆ ಕಾಮಗಾರಿ ಆರಂಭಿಸಿ ತುರ್ತಾಗಿ ಮುಗಿಸಬೇಕು. ಈ ಭರವಸೆ ನೀಡಲು ಜಿಲ್ಲಾಡಳಿತ ಹಾಗೂ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಆಗ್ರಹಿಸಿದರು.