ಹರಪನಹಳ್ಳಿ: ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಅನ್ನಪೂರ್ಣಮ್ಮ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕಿನ ನ್ಯಾಯ ಬೆಲೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ಇಲ್ಲ. ನೇರವಾಗಿ ಮಿಲ್‌ಗಳಿಂದ ಅಕ್ಕಿ ಸರಬರಾಜು ಆಗುತ್ತಿರುವುದರಿಂದ ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಆಹಾರ ನಿರೀಕ್ಷಕ ಬಿ.ಟಿ.ಪ್ರಕಾಶ್ ಸ್ಪಷ್ಟಪಡಿಸಿದರು.
ತಾಪಂ ಉಪಾಧ್ಯಕ್ಷ ಎಲ್.ಮಂಜನಾಯ್ಕ ಅವರು, ನ್ಯಾಯ ಬೆಲೆ ಅಂಗಡಿಗಳಲ್ಲಿ ಸರ್ಕಾರ ನೀಡುವ ಉಚಿತ ಅಕ್ಕಿಯ ಜೊತೆಗೆ ನ್ಯಾಯ ಬೆಲೆ ಅಂಗಡಿ ಮಾಲೀಕರು ಸ್ವಂತಕ್ಕೆ ಟೀ-ಪುಡಿ, ಸೋಪು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ಟೀ-ಪುಡಿ ನೀಡಿ 50ರೂಗಳನ್ನು ವಸೂಲಿ ಮಾಡುತ್ತಾರೆ. ಟೀ-ಪುಡಿ ತೆಗೆದುಕೊಳ್ಳದಿದ್ದರೆ ಗಾಡಿ ಬಾಡಿಗೆ ಕೊಡಿ ಎಂದು ಜನರಿಂದ 10ರೂಗಳನ್ನು ವಸೂಲಿ ಮಾಡುತ್ತಾರಂತೆ.
ಅದ್ದರಿಂದ ಕಟ್ಟುನಿಟ್ಟಿನ ಕ್ರಮವಹಿಸಿ ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಹೇಳಿದಾಗ ಉಚಿತವಾಗಿ ಅಕ್ಕಿ ಮಾತ್ರ ವಿತರಿಸಬೇಕು. ಟೀ-ಪುಡಿ ವಿಚಾರ ಗಮನಕ್ಕೆ ಬಂದಿಲ್ಲ, ನ್ಯಾಯ ಬೆಲೆ ಅಂಗಡಿ ಮಾಲೀಕರನ್ನು ಕರೆಸಿ, ಮಾರಾಟ ಮಾಡಬಾರದು ಸೂಚಿಸುತ್ತೇನೆ ಎಂದು ಆಹಾರ ನೀರಿಕ್ಷರು ಉತ್ತರಿಸಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಮಿಷನ್ ದಂಧೆ ನಡೆಯುತ್ತದೆ ಈ ಬಗ್ಗೆ ಜಿಪಂ ಸಿಇಒ ಅವರು ಗಮನ ಹರಿಸಬೇಕು ಎಂದು ಉಪಾಧ್ಯಕ್ಷ ಮಂಜನಾಯ್ಕ ಸಭೆಯ ಮೂಲಕ ಕೋರಿದಾಗ ಕಮಿಷನ್ ಬಗ್ಗೆ ಸಾಕ್ಷಿ ಕೊಡಿ ಕ್ರಮಕೈಗೊಳ್ಳುತ್ತೇವೆ ಎಂದು ಇಒ ರೇವಣ್ಣ ಹೇಳಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹರಪನಹಳ್ಳಿ ತಾಲೂಕು ಜಿಲ್ಲೆಯಲ್ಲಿ ಕೊನೆಯ ಸ್ಥಾನದಲ್ಲಿದೆ, ಉತ್ತಮ ಪಡಿಸಲು ಪ್ರಯತ್ನ ನಡೆದಿದೆ ಎಂದು ಬಿಇಒ ರಾಮಪ್ಪ ಹೇಳಿದರು. ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದ್ದು, ಮೇಲಾಧಿಕಾರಿಗಳು ಗಮನ ಹರಿಸಬೇಕು ಎಂದು ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಮಂಜನಾಯ್ಕ ದೂರಿದಾಗ, ಬಿಇಒ ರಾಮಪ್ಪ ಅವರು ಖಾಸಗಿ ಶಾಲಾ ಕಾಲೇಜುಗಳಲ್ಲಿ ಇಷ್ಟೆ ಶುಲ್ಕ ತೆಗೆದುಕೊಳ್ಳಬೇಕು ಎಂದು ಸರ್ಕಾರ ನಿಗದಿ ಮಾಡಿದೆ.
ಸರ್ಕಾರದ ಮಾರ್ಗಸೂಚಿ ಬಿಟ್ಟು ಹೆಚ್ಚು ವಸೂಲಾತಿ ಮಾಡಿದರೆ ದೂರು ನೀಡಿದರೆ ಹೆಚ್ಚುವರಿ ಶುಲ್ಕ ವಾಪಾಸು ಕೊಡಿಸುತ್ತೇನೆ ಎಂದು ಭರವಸೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ ಅವರು, ಪೂರ್ವ ಮುಂಗಾರಿನಲ್ಲಿ ಶೇ.58ರಷ್ಟು ಮಳೆಯ ಕೊರತೆ ಆಗಿದೆ. ಬಿದ್ದ ಅಲ್ಪ-ಸ್ವಲ್ಪ ಮಳೆಗೆ ರೈತರು ಬಿತ್ತನೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಬಿತ್ತನೆ ಬೀಜ ವಿತರಣೆಗೆ ತಾಲೂಕಿನಲ್ಲಿ ಹೆಚ್ಚುವರಿ ಬೀಜ ವಿತರಣಾ ಕೇಂದ್ರ ತೆರೆಯಲಾಗಿದೆ.
ಸಿರಿ ಧಾನ್ಯ ಬೆಳೆದ ರೈತರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ರೇಷ್ಮೆ ಇಲಾಖೆವತಿಯಿಂದ ರೈತರಿಗೆ ಸಹಾಯ ಧನದ ಚೆಕ್ ವಿತರಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ರಹಮತುಲ್ಲಾ ಸಾಹೇಬ, ಇಒ ಬಿ.ರೇವಣ್ಣ, ಯೋಜನಾಧಿಕಾರಿ ವಿಜಯಕುಮಾರ ಉಪಸ್ಥಿತರಿದ್ದರು.