ಬೀದರ: ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಉನ್ನತ ವ್ಯಾಸಂಗಕ್ಕಾಗಿ ಎಲ್ಲಾ ಗ್ರಾಮಗಳ ವಿದ್ಯಾರ್ಥಿಗಳು ನಗರಕ್ಕೆ ಆಗಮಿಸತ್ತಾರೆ. ಹಾಗಾಗಿ ಎಲ್ಲಾ ಹಳ್ಳಿಗಳ ವಿದ್ಯಾರ್ಥಿಗಳಿಗೆ ಪಾಸ್‌ಗಳನ್ನು ಅಚ್ಚುಕಟ್ಟಾಗಿ ನೀಡುವ ವ್ಯವಸ್ಥೆಯಾಗಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.
ನಗರದ ಹಳೆ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾದ ನೂತನ ನಗರ ಸಾರಿಗೆ ಬಸ್ ನಿಲ್ದಾಣ ಹಾಗೂ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಕಟ್ಟಡವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ದೂರದ ಊರುಗಳಿಗೆ ಹೋಗುವ ವಿದ್ಯಾರ್ಥಿಗಳು ಸಮಯಕ್ಕೆ ಬಸ್‌ಗಳು ಸಿಗದೇ ಪರದಾಡುವಂತೆ ಆಗಬಾರದು. ಕೆಲವು ಬಸ್‌ನಿಲ್ದಾಣಗಳಿಗೆ ವಿಶೇಷ ಅಧಿಕಾರಿಗಳನ್ನು ನೇಮಿಸಿ ಪ್ರಯಾಣಿಕರ ಸಮಸ್ಯೆಗಳನ್ನು ತಿಳಿದುಕೊಂಡು ಕೂಡಲೇ ಸಮಸ್ಯೆ ಇತ್ಯರ್ಥಪಡಿಸಲು ಅಧಿಕಾರಿಗಳು ಮುಂದಾಗಬೇಕು. ಸಾರಿಗೆ ಇಲಾಖೆಯು ಅತ್ಯಂತ ಜವಾಬ್ದಾರಿಯುತ ಇಲಾಖೆಯಾಗಿದ್ದು, ಲಾಭಕ್ಕಿಂತ ಜನರ ಸೇವೆಗೆ ಹೆಚ್ಚು ಮಹತ್ವ ನೀಡುತ್ತಿದ್ದು, ಇಲಾಖೆಯು ಇನ್ನಷ್ಟು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಎಷ್ಟು ಲಾಭವಾಗಿದೆ ಎನ್ನುವುದಕ್ಕಿಂತ ಎಷ್ಟು ಸೇವೆ ನೀಡಲಾಗಿದೆ ಎನ್ನುವುದು ಮುಖ್ಯವಾಗಬೇಕು ಎಂದರು.
ಬೀದರ ಪಾರಂಪರಿಕ ನಗವಾಗಿದ್ದು, ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಬೀದರ ಉತ್ಸದಂತಹ ಸಂದರ್ಭಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ವಿಶೇಷ ಬಸ್‌ಗಳನ್ನು ಒದಗಿಸುವ ಚಿಂತನೆ ನಡೆದಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಬೇಕಾಗುವ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಇಲಾಖೆಯ ಅಧಿಕಾರಿಗಳು ಸಲ್ಲಿಸಿದ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು. ಕೇರಳ ಮಾದರಿಯಲ್ಲಿ ಋಣ ಮುಕ್ತ ಆಯೋಗವನ್ನು ರಚಿಸುವ ಬಗ್ಗೆ ಇತ್ತೀಚೆಗೆ ಕೇರಳ
ರಾಜ್ಯಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಚಾಲನೆ ನೀಡುವ ಕಾರ್ಯ ನಡೆದಿದೆ ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್ ಮಾತನಾಡಿ, ಬೀದರ ಜಿಲ್ಲೆಯ ರಸ್ತೆಗಳು ಹಿಂದೆಂದಿಗಿಂತ ಹೆಚ್ಚು ಸುಧಾರಣೆ ಕಂಡಿವೆ. ಸಾಕಷ್ಟು ಹೊಸ ಬಸ್‌ಗಳು ಓಡಾಡುತ್ತಿವೆ. ಬಸ್ ನಿಲ್ದಾಣಗಳಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಇಲಾಖೆಯು ಇನ್ನಷ್ಟು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಕೋಟ್ರಪ್ಪ ಪ್ರಾಸ್ತಾವಿಕ ಮಾತನಾಡಿ, ಬೀದರ ವಿಭಾಗ ವ್ಯಾಪ್ತಿಯಲ್ಲಿ 550 ವಾಹನಗಳು ಓಡಾಡುತ್ತಿವೆ. 1,40,000 ಜನರು ಪ್ರತಿದಿನ ಸಂಚರಿಸುತ್ತಿದ್ದಾರೆ. ವಿಭಾಗದಿಂದ 50,000 ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಸಂಸದ ಭಗವಂತ ಖೂಬಾ, ನಗರಸಭೆ ಅಧ್ಯಕ್ಷೆ ಶಾಲಿನಿರಾಜು ಚಿಂತಾಮಣಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ಕಲಬುರಗಿ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ, ಇಲಾಖೆಯ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಸುನೀಲಕುಮಾರ ಚಂದರಗಿ, ಆಡಳಿತಾಧಿಕಾರಿ ಮಹಾದೇವಪ್ಪ ಉಪ್ಪಿನ್, ಇಇ ಮೆಹಬೂಬ್‌ಸಾಬ್, ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿಯ ಆಪ್ತ ಕಾರ್ಯದರ್ಶಿ ಪ್ರಭುಲಿಂಗಸ್ವಾಮಿ ಹಾಗೂ ಸಾರಿಗೆ ಇಲಾಖೆಯ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಅಂಚೆ ಇಲಾಖೆಯ ಅಧಿಕಾರಿ ಮಂಗಲಾ ಭಾಗವತ್ ನಿರೂಪಿಸಿದರು. ವಿಭಾಗೀಯ ಸಂಚಾರ ಅಧಿಕಾರಿ ಚಂದ್ರಕಾಂತ ಫುಲೇಕರ್ ವಂದಿಸಿದರು.