Advertisement

ಆಧಾರ್‌ಗಾಗಿ ರಾತ್ರಿಯಿಡೀ ರಸ್ತೇಲಿ ಮಲಗುವ ಜನ

11:41 AM Jun 17, 2019 | Team Udayavani |

ಕನಕಪುರ: ರಾಜ್ಯದ ಪ್ರಭಾವಿ ಮಂತ್ರಿಗಳು ಪ್ರತಿನಿಧಿಸುವ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಆಧಾರ್‌ ಕಾರ್ಡ್‌ಗಾಗಿ ಜನರ ರಾತ್ರಿಯಿಡೀ ನಿದ್ದೆಗೆಟ್ಟರೂ ಆಧಾರ್‌ ಕಾರ್ಡ್‌ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗುವ ಭೀತಿ ಎದುರಾಗಿದೆ.

Advertisement

ಸರ್ಕಾರದ ಅಥವಾ ಇನ್ಯಾವುದೇ ವ್ಯವಸ್ಥೆಯಲ್ಲೇ ಆಧಾರ್‌ ಕಾರ್ಡ್‌ ಪ್ರಧಾನವಾಗಿದ್ದು, ಅದಿಲ್ಲದಿದ್ದರೆ ಯಾವುದೂ ನಡೆಯದು. ಹೀಗಾಗಿ ಕನಕಪುರ ತಾಲೂಕಿನಲ್ಲಿ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸಮರ್ಪಕ ಸೇವೆ ಒದಗಿಸಲು ವಿಫಲವಾಗಿದ್ದು, ಕೆನರಾ ಬ್ಯಾಂಕಿನಲ್ಲಿ ಮಾಡುವ ಆಧಾರ್‌ ಕಾರ್ಡ್‌ಗೆ ರಾತ್ರಿಯಿಡೀ ಸಾರ್ವಜನಿಕರು ರಸ್ತೆಯಲ್ಲಿ ಮಲಗಿ ಕಾಲಕಳೆಯುವಂತಾಗಿದೆ.

ಜನರ ಸಮಸ್ಯೆ ಅರಿತು ಆಡಳಿತ ನಡೆಸಬೇಕಾದವರು ತಾಲೂಕಿಗೆ ಬರವುದೇ ಇಲ್ಲಿನ ಜನರ ಪುಣ್ಯ. ಬಂದರೂ ಜನಸಾಮಾನ್ಯರ ಕೈಗೆ ಸಿಗದಂತಾಗಿದ್ದು, ಇಲ್ಲಿನ ಅಧಿಕಾರಿಗಳೂ ಸಮಸ್ಯೆ ಕೇಳದೆ ತಾಲೂಕು ಆಡಳಿತ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಭಿವೃದ್ಧಿ ಎಂದರೆ ಜನಸಾಮಾನ್ಯರ ತೆರಿಗೆ ಹಣದಲ್ಲಿ ಕಾಮಗಾರಿ ಮಾಡುವುದಲ್ಲ. ಸ್ಥಳೀಯವಾಗಿ ಜನಸಾಮಾನ್ಯರ ಕುಂದುಕೊರತೆಗಳನ್ನು ಕೇಳಿ ಅವುಗಳನ್ನು ಬಗೆ ಹರಿಸುವುದು. ಅಂತಹ ಯಾವುದೇ ಕೆಲಸ ಈವೆರೆಗೆ ಆಗುತ್ತಿಲ್ಲ ಎನ್ನುವುದು ಜನಸಾಮಾನ್ಯರ ಆರೋಪ.

ಟ್ರಬಲ್ಸೂಟರ್‌ ಕ್ಷೇತ್ರದಲ್ಲಿ ಟ್ರಬಲ್: ರಾಜ್ಯ ಸರ್ಕಾರದ ಟ್ರಬಲ್ ಸೂಟರ್‌ ಆಗಿರುವ ಪ್ರಭಾವಿ ಮಂತ್ರಿ ಡಿ.ಕೆ.ಶಿವಕುಮಾರ್‌ರಿಗೆ ರಾಜಕೀಯ ನೆಲೆಕೊಟ್ಟ ಕ್ಷೇತ್ರವಾಗಿರುವ ಇಲ್ಲಿನ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಕೋಟಿಗಟ್ಟಲೆ ಹಣ ತಾಲೂಕಿಗೆ ತಂದು ಅಭಿವೃದ್ಧಿ ಮಾಡಿದ್ದೇನೆ ಎನ್ನುವ ಅವರು, ಜನರ ಸಮಸ್ಯೆ ಕೇಳುತ್ತಿಲ್ಲ. ಇಲ್ಲಿನ ಸಣ್ಣ ಸಣ್ಣ ಸಮಸ್ಯೆಗಳೂ ಜನರ ನಿದ್ದೆಗೆಡಿಸುತ್ತಿದ್ದು ಪ್ರಭಾವಿ ಮಂತ್ರಿಗಳ ಕ್ಷೇತ್ರದಲ್ಲಿ ಆಧಾರ್‌ ಕಾರ್ಡ್‌ ಸಮಸ್ಯೆ ಅತ್ಯಂತ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ಜನರ ಪರದಾಟ: ಸರ್ಕಾರ ವಿತರಣೆ ಮಾಡುವ ಪಡಿತರಕ್ಕೂ ಆಧಾರ್‌ ಅಗತ್ಯವಾಗಿದ್ದು, ಈ ತಿಂಗಳ ಕೊನೆಯಲ್ಲಿ ಆಧಾರ್‌ ನೋಂದಣಿಯಾಗದಿದ್ದರೆ ಆ ಕುಟುಂಬಗಳಿಗೆ ಪಡಿತರ ವಿತರಣೆ ನಿಲ್ಲಿಸುವ ಆದೇಶ ಹೊರಬಿದ್ದಿದೆ. ಇನ್ನುಳಿದಂತೆ ಸರ್ಕಾರದ ಯಾವುದೇ ಸವಲತ್ತುಗಳನ್ನು ಪಡೆಯಲಾಗದ ಜನತೆ ಆಧಾರ್‌ ಕಾರ್ಡ್‌ಗಾಗಿ ದುಂಬಾಲು ಬಿದ್ದಿದ್ದು, ರಾತ್ರಿ-ಹಗಲು ಎನ್ನದೆ ಆಧಾರ್‌ ನೋಂದಣಿ ಕೇಂದ್ರದ ಮುಂದೆ ಕಾಲ ಕಳೆಯುವಂತಾಗಿದೆ. ಇದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಟೆಕ್ಸ್ಟ್ ಮಾಡಿ: ಈ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಕ್ಯಾಪ್ಟನ್‌ ರಾಜೇಂದ್ರ ಅವರನ್ನು ಮತನಾಡಿಸಲು ಕರೆ ಮಾಡಿದರೆ, ಕರೆ ಸ್ಥಗಿತಗೊಳಿಸಿ ಟೈಪ್‌(ಟೆಕ್ಸ್ಟ್) ಮಾಡಿ ಕಳುಹಿಸಿ ಎನ್ನುವ ಸಂದೇಶ ಕಳುಹಿಸುತ್ತಾರೆ. ಜಿಲ್ಲಾಧಿಕಾರಿಗಳಿಗೆ ಮಾಧ್ಯಮಗಳು ಜನರ ಸಮಸ್ಯೆ ಕೇಳಲು ಕರೆ ಮಾಡಿದರೆ ಈ ರೀತಿಯ ಉತ್ತರ ಪಡೆಯಬೇಕಿದೆ. ಟೆಕ್ಸ್ಟ್ ಸಂದೇಶದ ಮೂಲಕ ಜಿಲ್ಲಾಧಿಕಾರಿಗಳಿಗೆ ತಿಳಿ ಸಲು ಸಾಧ್ಯವಾಗದೆ ಇರುವಾಗ ಇನ್ನು ಜನಸಾಮಾನ್ಯರ ಪಾಡೇನು ಎಂಬುದು ಅಸಮಾಧಾನ ತರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next