ಹುಬ್ಬಳ್ಳಿ: ಜಿಲ್ಲಾಡಳಿತ ಮೂರು ದಿನಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಅವಕಾಶ ನೀಡಿದ್ದರಿಂದ ಮೊದಲ ದಿನವಾದ ಗುರುವಾರ ಮಾರುಕಟ್ಟೆಗೆ ಜನ ಖರೀದಿಗೆ ಮುಗಿಬಿದ್ದಿದ್ದರು. ಬಹುತೇಕ ಮಾರುಕಟ್ಟೆಗಳು ಜನ ಹಾಗೂ ವಾಹನಗಳಿಂದ ತುಂಬಿ ತುಳುಕುತ್ತಿತ್ತು.
ಎಂ.ಜಿ. ಮಾರುಕಟ್ಟೆ, ಬಾರಾದಾನ ಸಾಲು, ಹಿರೇಪೇಟೆ, ಹಳೇಹುಬ್ಬಳ್ಳಿ ದುರ್ಗದ ಬಯಲು, ಜನತಾ ಬಜಾರ, ವಿವಿಧ ಸೂಪರ್ ಮಾರುಕಟ್ಟೆಗಳು, ಕಿರಾಣಿ ಅಂಗಡಿಗಳು ಜನರಿಂದ ತುಂಬಿದ್ದವು. ಜನರು ಬೆಳಗ್ಗೆ 5 ಗಂಟೆಯಿಂದಲೇ ಮಾರುಕಟ್ಟೆಗಳಿಗೆ ಆಗಮಿಸಿ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದರು.
ಸಂಚಾರ ಅಸ್ತವ್ಯಸ್ತ: ಹಿರೇಪೇಟೆ, ಬಾರದಾನ ಸಾಲು, ಅಕ್ಕಿಹೊಂಡ ಪ್ರದೇಶದಲ್ಲಿ ಹೆಚ್ಚಿನ ಜನರು ವಾಹನಗಳಲ್ಲಿ ಬಂದಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಎಸಿಪಿ ಆರ್.ಕೆ. ಪಾಟೀಲರು ಸಹ ಟ್ರಾμಕ್ ಜಾಮ್‌ನಲ್ಲಿ ಸಿಲುಕುವಂತಾಗಿತ್ತು. ಬಹುಹೊತ್ತಿನ ವರೆಗೆ ಕಾದು ನಂತರ ರಸ್ತೆಗೆ ಇಳಿದ ಎಸಿಪಿ ತಮ್ಮ ವಾಹನದ ಮುಂದೆ ನಡೆದುಕೊಂಡು ಹೋಗಿ ವಾಹನ ಸಂಚಾರ ಸುಗುಮಗೊಳಿಸಿದರು. ಇದಾದ ಸ್ವಲ್ಪ ಸಮಯದ ನಂತರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರ ವ್ಯವಸ್ಥೆ ಸರಿಪಡಿಸಲು ಮುಂದಾದರಾದರೂ ಎಸಿಪಿಯವರ ವಾಹನ ಹೋಗುತಿದ್ದಂತೆಯೇ ಅಲ್ಲಿಂದ ಮಾಯವಾದರು.
ಮೊದಲ ದಿನ ಜಾತ್ರೆ: ಕಳೆದ ಕೆಲವು ದಿನಗಳಿಂದ ಸಂಪೂರ್ಣ ಲಾಕ್‌ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಗುರುವಾರ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಿತ್ತು. ಅಂಗಡಿಕಾರರು ಗ್ರಾಹಕರಿಗೆ ಕೇಳಿದ ವಸ್ತುಗಳನ್ನು ನೀಡುವುದರಲ್ಲಿಯೇ ಹೈರಾಣಾದರು. ಕಿರಾಣಿ ಅಂಗಡಿಗಳ ಮುಂದೆ ಜನರು ಸರದಿಯಲ್ಲಿ ನಿಂತು ಖರೀದಿಸಿದರು. ಅಂಗಡಿಕಾರರು ಮೂರು ದಿನಗಳವರೆಗೆ ಅವಕಾಶವಿದೆ ಎಂದು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಗ್ರಾಹಕರು ಇರಲಿಲ್ಲ.