ಎಚ್.ಡಿ.ಕೋಟೆ: ರಾಜ್ಯದಲ್ಲಿ ಕೋವಿಡ್ ತುಸು ನಿಯಂತ್ರಣಕ್ಕೆ ಬಂದಿದ್ದರೆ, ಇತ್ತ ನೆರೆಯ ಕೇರಳದಲ್ಲಿ ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಸೋಂಕಿತರು ಕಂಡು ಬರುತ್ತಿದ್ದಾರೆ. ಈ ನಡುವೆ, ಎಚ್.ಡಿ.ಕೋಟೆ ತಾಲೂಕಿನ ಆದಿವಾಸಿಗಳನ್ನು ಶುಂಠಿ, ಕಾಫಿ ಕೆಲಸಕ್ಕಾಗಿ ಖಾಸಗಿ ವಾಹನಗಳಲ್ಲಿ ಕುರಿಗಳನ್ನು ತುಂಬಿಕೊಂಡು ಹೋಗವಂತೆ ಕರೆದೊಯ್ಯಲಾಗುತ್ತಿದೆ.
9-10 ಪ್ರಯಾಣಿಕರನ್ನು ಸಾಗಿಸಲು ಅನುಮತಿ ಇರುವ ವಿಂಗರ್ ಹಾಗೂ ತೂಫಾನ್ ವಾಹನಗಳಲ್ಲಿ 20-25 ಮಂದಿಯನ್ನು ತುಂಬಲಾಗುತ್ತಿದೆ. ತಾಲೂಕಿನ ಬಹುತೇಕ ಕಡೆ ಖಾಸಗಿ ವಾಹನಗಳಲ್ಲಿ ಆದಿವಾಸಿ ಬಡಮಹಿಳೆಯರನ್ನು ಈ ರೀತಿ ತುಂಬಿಕೊಂಡು ಹೋಗಿ ಕೂಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಶುಂಠಿ ಮತ್ತು ಕಾಫಿ ಕೆಲಸಕ್ಕೆ ಕೇರಳ ಹಾಗೂ ಕೊಡಗು ಜಿಲ್ಲೆಗೆ ಮುಂಜಾನೆ ಕರೆದುಕೊಂಡು ಹೋಗಿ ಸಂಜೆ ವಾಪಸ್ ಕರೆತರುವ ಕಾರ್ಯ ಪ್ರತಿದಿನ ನಡೆಯುತ್ತಿದೆ.
ಜೀವನಕ್ಕಾಗಿ ಕೂಲಿ: ತಾಲೂಕಿನಲ್ಲಿ 120ಕ್ಕೂ ಅಧಿಕ ಆದಿವಾಸಿಗರ ಹಾಡಿಗಳಿವೆ. ಬಹುಸಂಖ್ಯೆಯಲ್ಲಿ ಬಡ ವರೇ ಇದ್ದು, ಜೀವನೋಪಾಯಕ್ಕಾಗಿ ಪ್ರತಿದಿನ ಕೂಲಿಯನ್ನೇ ಅವಲಂಬಿಸಿ, ಅಂದು ಗಳಿಸಿದ ಕೂಲಿ ಹಣದಿಂದಲೇ ಆ ದಿನದ ಜೀವನ ನಡೆಸುವ ಅನಿವಾರ್ಯತೆ ಇದೆ. ಇಂತಹ ಹಾಡಿಗಳ ಮಂದಿಯನ್ನು ಕೊಡಗು ಮತ್ತು ಕೇರಳದ ತೋಟದ ಮಾಲೀಕರು ವಿಂಗರ್ ಮತ್ತು ತೂಫಾನ್ ವಾಹನಗಳಲ್ಲಿ ಕರೆಸಿಕೊಳ್ಳುತ್ತಿದ್ದಾರೆ.
ಮಿತಿಯೇ ಇಲ್ಲ: 10 ಜನ ಸಂಚರಿಸುವ ವಾಹನಗಳಲ್ಲಿ 20ರಿಂದ 25ಮಂದಿ ಕೂಲಿ ಕಾರ್ಮಿಕ ಮಹಿಳೆಯರನ್ನು ಕುರಿಗಳಂತೆ ತುಂಬಿಕೊಂಡು ಪ್ರತಿದಿನ ಕರೆ ದೊಯ್ಯವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಉಸಿರು ಕಟ್ಟಿಸುವಂತಹ ವಾತಾವರಣದಲ್ಲಿ ದೈಹಿಕ ಅಂತರ ಇರುವುದೇ ಇಲ್ಲ. ಮಹಿಳೆಯರು ಒಬ್ಬರಿ ಗೊಬ್ಬರು ಅಂಟಿಕೊಂಡು ಕುಳಿತ್ತಿರುತ್ತಾರೆ. ಮಾಸ್ಕ್ ಕೂಡ ಇರುವುದಿಲ್ಲ. ಸ್ವತ್ಛತೆ ಎಂಬುದು ಮರೀಚಿಕೆಯಾಗಿದೆ. ಆದಿವಾಸಿ ಮಹಿಳೆಯರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ಒಂದು ಕಡೆ ಕೋವಿಡ್ ಸೋಂಕು ತಗುಲುವ ಭೀತಿ ಕಾಡಿದರೆ, ಮತ್ತೂಂದು ಕಡೆ ಮಿತಿಮೀರಿದ ಸಂಖ್ಯೆಯಲ್ಲಿ ಪ್ರಯಾಣಿಸುವಾಗ ಅಪಘಾತ ಸಂಭವಿಸುವ ಆತಂಕ ಕಾಡುತ್ತಿದೆ.
ದುಡ್ಡಿನಾಸೆ: ದುಡ್ಡಿನಾಸೆಗಾಗಿ ಜೀವದ ಹಂಗು ತೊರೆದು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಹೀಗೆ ಸುರಕ್ಷತಾ ಹಾಗೂ ಮುನ್ನೆಚ್ಚರಿಕೆ ಕ್ರಮಗಳಿಲ್ಲದೇ ಅದಿವಾಸಿ ಮಹಿಳೆಯರನ್ನು ಸಾಗಿಸುತ್ತಿದ್ದರೂ ಸಂಬಂಧ ಪಟ್ಟ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. 2 ವಾಹನಗಳಿಗೆ ಮಾತ್ರ ದಂಡ: ತಾಲೂಕಿನ ಎನ್. ಬೆಳತ್ತೂರು ಆಸುಪಾಸಿನ ಹಾಡಿಗಳಿಂದ ವಿಂಗರ್ ಮತ್ತು ತೂಫಾನ್ ವಾಹನಗಳೆರಡಲ್ಲಿ ಸುಮಾರು 45 ರಿಂದ 50 ಮಂದಿ ಆದಿವಾಸಿ ಮಹಿಳೆಯರನ್ನು ಕುರಿಗಳಂತೆ ಸಾಗಿಸಲಾಗುತ್ತಿತ್ತು. ಈ ವಾಹನಗಳು ಎಚ್.ಡಿ.ಕೋಟೆ ಪೊಲೀಸ್ ಠಾಣೆ ಎದುರು ಹಾದು ಹೋಗುತ್ತಿದ್ದವು. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಎರಡು ವಾಹನಗಳನ್ನು ವಶಕ್ಕೆ ತೆಗೆದುಕೊಂಡ ಪಿಎಸ್‌ಐ ಎಂ.ನಾಯಕ್ ತಲಾ 1 ಸಾವಿರ ದಂಡ ವಿಧಿಸಿದ್ದಾರೆ. ಮುಂದೆ ಮಿತಿಮೀರಿದ ಸಂಖ್ಯೆಯಲ್ಲಿ ಕಾರ್ಮಿಕರನ್ನು ಸಾಗಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಪ್ರತಿದಿನ ನೂರಾರು ವಾಹನಗಳಲ್ಲಿ ಮಹಿಳೆಯರನ್ನು ಕುರಿಗಳಂತೆ ತುಂಬಿಕೊಂಡು ಕೇರಳ, ಕೊಡಗು ಜಿಲ್ಲೆಗಳಿಗೆ ಕರೆದೊಯ್ಯಲಾಗುತ್ತಿದೆ. ಒಂದುವೇಳೆ ಕೋವಿಡ್ ಸೋಂಕು ತಗುಲಿದರೆ ಇಡೀ ಆದಿವಾಸಿಗಳು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಹೀಗಾಗಿ ತಾಲೂಕು ಆಡಳಿತ ಕಾರ್ಯಾಚರಣೆ ನಡೆಸಿ, ವಾಹನಗಳನ್ನು ಹಿಡಿದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜಿಲ್ಲಾಡಳಿತ ಇತ್ತ ಗಮನ ಹರಿಸಲಿ… : ಸೋಂಕು ನಿಯಂತ್ರಣಕ್ಕೆ ದೇಶಕ್ಕೆ ಮಾದರಿ ಯಾಗಿದ್ದ ಕೇರಳದಲ್ಲಿ ಇದೀಗ ಕೋವಿಡ್ ಸಂಖ್ಯೆ ಮಿತಿ ಮೀರಿದೆ. ಇತ್ತೀಚೆಗೆ ನಿತ್ಯ ಸರಾಸರಿ 8 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ.ಎಚ್.ಡಿ. ಕೋಟೆ ತಾಲೂಕಿನ ಬಹುತೇಕ ಪ್ರದೇಶ ಗಳು ಕೇರಳಕ್ಕೆ ಹೊಂದಿಕೊಂಡಿವೆ. ತಾಲೂಕಿನ ಜನರು ಕೂಲಿ ಕೆಲಸ, ವ್ಯಾಪಾರ ವಹಿವಾಟು ನಡೆಸಲು ಕೇರಳ ಹಾಗೂ ಕೊಡಗು ಜಿಲ್ಲೆಗಳಿಗೆ ತೆರಳುವುದು ಸಾಮಾನ್ಯವಾಗಿದೆ. ಅದರಲ್ಲೂ ಗಿರಿಜನ ಮಹಿಳೆ ಯರನ್ನು ತೋಟಗಳ ಮಾಲೀ ಕರು ವಾಹನಗಳಲ್ಲಿ ಬೆಳಗ್ಗೆ ಕರೆದುಕೊಂಡು ಹೋಗಿ ಸಂಜೆ ವಾಪಸ್ ಕರೆತಂದು ಬಿಡುತ್ತಿದ್ದಾರೆ. ಏನೂ ಅರಿಯದ ಮುಗ್ಧ ಮಹಿಳೆಯರನ್ನು ದುಡ್ಡಿನಾಸೆಗೆ ಕುರಿಗಳಂತೆ ಬೇಕಾಬಿಟ್ಟಿಯಾಗಿ ವಾಹನಗಳಲ್ಲಿ ತುಂಬಿಕೊಂಡು ತೋಟಗಳಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿ, ಕೋವಿಡ್ ಒಬ್ಬರಿಂದ ಒಬ್ಬರಿಗೆ ಹರಿಡಿದರೆ ತಾಲೂಕಿನ ಹಾಡಿಗಳಿಗೆ ಸೋಂಕು ಹರಡುವ ಸಾಧ್ಯತೆ ಇದೆ. ತಾಲೂಕಿಗೂ ವ್ಯಾಪಿಸುವ ಸಾಧ್ಯತೆ ಗಳನ್ನು ತಳ್ಳಿ ಹಾಕುವಂತಿಲ್ಲ. ಎಚ್ಚರ ವಹಿಸಬೇಕಾದ ಸಮಯದಲ್ಲಿ ಜನರನ್ನು ಹೀಗೆ ತಂಬಿದರೆ ಎಷ್ಟರ ಮಟ್ಟಿಗೆ ಸರಿ ಎಂದು ನಾಗರಿಕರು ಪ್ರಶ್ನಿಸಿದ್ದಾರೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿ ಗಣಿಸಿ, ವಾಹನಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಈ ಭಾಗಗಳಲ್ಲಿ ಅಧಿಕಾರಿ ಗಳು ಸಂಚರಿಸಿ, ಸುರಕ್ಷತಾ ಹಾಗೂ ಮುನ್ನೆಚ್ಚರಿಕೆಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಬೇಕಿದೆ ಎಂದು ಆಗ್ರಹಿಸಿದ್ದಾರೆ.
-ಎಚ್.ಬಿ.ಬಸವರಾಜು