ದಾಂಡೇಲಿ : ನಗರದ ವಿವಿದೆಡೆಗಳಲ್ಲಿ ಬುಧವಾರ ಬೆಳಿಗ್ಗೆಯಿಂದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆಯನ್ನು ನೀಡಲಾಗಿತ್ತು. ನಗರದ ಒಟ್ಟು 5 ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಒಂದನೇ ಮತ್ತು ಎರಡನೇ ಕೋವಿಡ್ ಲಸಿಕೆ ನೀಡುವ ಕಾರ್ಯವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಐದು ಕಡೆಗಳಲ್ಲಿಯೂ ನಿಗಧಿತ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡಲಾಗುವುದೆಂದು ಮುಂಚಿತವಾಗಿಯೆ ಸಾರ್ವಜನಿಕ ಆಸ್ಪತ್ರೆ ಮತ್ತು ತಹಶೀಲ್ದಾರ್ ಕಾರ್ಯಾಲಯ ಪ್ರಕಟಣೆಯ ಮೂಲಕ ತಿಳಿಸಿತ್ತು. ಆದಗ್ಯೂ ನಗರದ ಎಲ್ಲ ಕೋವಿಡ್ ಲಸಿಕಾ ಕೇಂದ್ರಗಳಲ್ಲಿಯೂ ನಿಗಧಿಗಿಂತ ಹೆಚ್ಚು ಜನ ಜಮಾಯಿಸಿದ್ದರು. ಹೀಗಾಗಿ ಕೆಲವೆಡೆ ತಕ್ಕಮಟ್ಟಿಗೆ ಗೊಂದಲ ಏರ್ಪಟ್ಟಿತ್ತು.
ಇನ್ನೂ ನಗರದ ಹಳೆದಾಂಡೇಲಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಾಕ್ಸಿನ್ 2ನೇ ಕೋವಿಡ್ ಲಸಿಕೆ 100 ಹಾಗೂ 1 ಮತ್ತು 2ನೇ ಕೋವಿಶಿಲ್ಡ್ ಕೋವಿಡ್ ಲಸಿಕೆಯು 100 ಮಾತ್ರ ಇದ್ದು, ಆದರೆ ಕೋವಿಡ್ ಲಸಿಕೆಗಿಂತ ದುಪ್ಪಟ್ಟು ಜನ ಆಗಮಿಸಿದ್ದರು. ಟೋಕನ್ ನೀಡುವುದರ ಮೂಲಕ ಕೋವಿಡ್ ಲಸಿಕೆ ನೀಡಲು ಕ್ರಮ ಕೈಗೆತ್ತಿಕೊಳ್ಳಲಾಗಿದ್ದರೂ, ಟೋಕನ್ ವಿತರಿಸಲು ಹರಸಾಹಸ ಪಡಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು. ಜನರ ಗದ್ದಲ, ನೂಕು ನುಗ್ಗಲನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಈರಣ್ಣಾ ಅವರು ಟೋಕನ್ ತೆಗೆದುಕೊಂಡು ವಿತರಿಸಲು ಮುಂದಾದರು.
ಇದನ್ನೂ ಓದಿ: ಕೋವಿಡ್ : ಸಂಭಾವ್ಯ 3ನೇ ಅಲೆ ಎದುರಿಸಲು ದ.ಕ. ಜಿಲ್ಲಾಡಳಿತ ಸರ್ವ ಸನ್ನದ್ಧ: ಜಿಲ್ಲಾಧಿಕಾರಿ
ಜನರ ನೂಕುನಗ್ಗಲನ್ನು ನಿಯಂತ್ರಿಸಲು ಹರಸಾಹಸ ಪಟ್ಟ ಈರಣ್ಣಾರವರು ಕೊನೆಗೆ ಶಾಲೆಯ ಆವರಣ ಗೋಡೆಯನ್ನೇರಿ ಟೋಕನ್ ವಿತರಿಸಲು ಮುಂದಾದರು. ಸ್ವಲ್ಪ ಹೊತ್ತಿನ ಬಳಿಕ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೂಲಕವೆ ಟೋಕನ್ ವಿತರಿಸಲು ಕ್ರಮವನ್ನು ಕೈಗೊಂಡರು. ಯಾಕಣ್ಣ ಗದ್ದಲ ಮಾಡುವಿರಿ ಎಂದು ಪೊಲೀಸ್ ಈರಣ್ಣಾರವರು ಎಷ್ಟೆ ಕೇಳಿಕೊಂಡರೂ ಲಸಿಕೆಗಾಗಿ ನೂಕುನುಗ್ಗಲನ್ನು ನಿಯಂತ್ರಿಸಲು ಪ್ರಯಾಸ ಪಡಬೇಕಾಯಿತು.
ಸ್ವಲ್ಪ ಹೊತ್ತಿನ ಬಳಿಕ ಎಲ್ಲವೂ ಸರಿಯಾಗತೊಡಗಿತು. ಒಟ್ಟಿನಲ್ಲಿ ಹಳೆದಾಂಡೇಲಿಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯ ಜನಜಾತ್ರೆಯಾಗಿಯೆ ಪರಿಣಮಿಸಿರುವುದು ವಿಶೇಷವಾಗಿತ್ತು.