ಗದಗ: ಮಂದಗತಿಯಲ್ಲಿ ಸಾಗುತ್ತಿರುವ ನಗರದ ಹಳೇಬಸ್ ನಿಲ್ದಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಹಳೇ ಬಸ್ ನಿಲ್ದಾಣಕ್ಕೆ ಪಂ| ಪಟ್ಟರಾಜಕವಿ ಗವಾಯಿಗಳ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಪ್ರಗತಿ ಪರ ಸಂಘಟನೆಗಳು ಗುರುವಾರ ಹಳೇ ಬಸ್ ನಿಲ್ದಾಣ ಬಳಿ ರಸ್ತೆ ತಡೆ ಮಾಡಿ, ಪ್ರತಿಭಟನೆ ನಡೆಸಿದರು.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಳೇ ಬಸ್ ನಿಲ್ದಾಣ ಸಮೀಪದ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ನಗರದ ಹಳೆ ಬಸ್ ನಿಲ್ದಾಣವು ಸುಮಾರು 3 ವರ್ಷಗಳಿಂದ ನವೀಕರಣ ಕಾಮಗಾರಿಯು ನಡೆಯುತ್ತಿದ್ದು, ಈವರೆಗೂ ಪೂರ್ಣವಾಗುತ್ತಿಲ್ಲ. ಇದರಿಂದಾಗಿ ಬೇರೆ ಹಳ್ಳಿಗಳಿಂದ ಬರುವ ಪ್ರಯಾಣಿಕರು, ಪ್ರವಾಸಿಗರು ಪರದಾಡುವಂತಾಗಿದೆ. ಜೊತೆಗೆ ಹೊಸ ಬಸ್ ನಿಲ್ದಾಣದಿಂದ ಜಿಲ್ಲಾಸ್ಪತ್ರೆಗೆ ತೆರಳುವವರಿಗೆ ಸಾಕಷ್ಟುತೊಂದರೆಯಾಗುತ್ತಿದೆ ಎಂದು ದೂರಿದರು.
ಮುಖ್ಯವಾಗಿ ಎಲ್ಲ ಬಸ್‌ಗಳು ಹೊಸ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ನಡೆಸುತ್ತಿದ್ದು,ಈ ಭಾಗದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜನಸಂಪರ್ಕವೇ ಇಲ್ಲದಂತಾಗಿದೆ. ಪರಿಣಾಮ ಗದಗಿನ ಮಾರುಕಟ್ಟೆ ಮಂಕಾಗಿದೆ. ಬಹುತೇಕ ಎಲ್ಲ ವ್ಯಾಪಾರಗಳು ನೆಲಕ್ಕಚ್ಚಿದ್ದು, ಸಣ್ಣ- ಪುಟ್ಟವ್ಯಾಪಾರಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಬಸ್ ನಿಲ್ದಾಣದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಕಾಮಗಾರಿ ವರ್ಷದಿಂದ ಕುಂಟುತ್ತಾ ಸಾಗಿದ್ದು, ಸಾಕಷ್ಟು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಬೇಕು. ಹಳೆ ಬಸ್ ನಿಲ್ದಾಣಕ್ಕೆ ಸಂಗೀತ ಲೋಕದ ಧ್ರುವತಾರೆ, ಅಂಧ, ಅನಾಥರ ಆಶ್ರಯದಾತ ಡಾ|ಪಂಡಿತ ಪುಟ್ಟರಾಜ ಗವಾಯಿಗಳ ನಾಮಕರಣ ಮಾಡಬೇಕು ಎಂದು ಕೋರಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬೀದಿ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಭಾಷಾಸಾಬ ಮಲ್ಲಸಮುದ್ರ, ಕರ್ನಾಟಕ ರಾಜ್ಯ ಯುವ ಸೇನೆ ಸಂಸ್ಥಾಪಕ ಮಹಾಂತೇಶ ಮದ್ದೂರ, ಸಯ್ಯದ ಕೊಪ್ಪಳ, ಶೌಕತ ಕಾತರಕಿ, ದಾದಾಪೀರ ಮುಂಡರಗಿ, ಕುಮಾರ ತಡಸದ, ಉಸ್ಮಾನ ಚಿತ್ತಾಪೂರ, ಅಬ್ದುಲ್ ಮುನಾಫ ಮುಲ್ಲಾ, ಲುಕ್ಕಣಸಾ ರಾಜೋಳಿ, ಸಂಗನಗೌಡ ಪಾಟೀಲ, ಸಿದ್ದಯ್ಯ ಚನ್ನಳ್ಳಿಮಠ, ಮಕು¤ಸಮಾಬ, ಬಸವರಾಜ ಗಾಮನಕಟ್ಟಿ, ಕಿರಣ ಗಾಮನಗಟ್ಟಿ, ಶರಣಪ್ಪ ಚಿಂಚಲಿ, ಕಾಶೀಮಸಾಬ ಸಾಲಗಾರ, ಶರಣಪ್ಪ ಮಡಿವಾಳರ, ರಾಮು ಕಬಾಡಿ, ಭೀಮಾ ಕಾಟಿಗರ, ಭರತ ಮಾರೆಪ್ಪನವರ, ಪ್ರವೀಣ ಹಬೀಬ, ಬಸವರಾಜ ಬಾರಕೇರ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಸಂಘ, ಸಂಗಮೇಶ ಅಂಗಡಿಬಳಗ, ಕ್ರಾಂತಿ ಸೇನಾ, ಕರ್ನಾಟಕ ರಕ್ಷಣಾ ವೇದಿಕೆ,ಭಗತಸಿಂಗ್ ಅಭಿಮಾನಿ ಬಳಗ, ಎ.ಡಿ.ಎಸ್. ಎಸ್. ಅಲ್ಪಸಂಖ್ಯಾತರ ಘಟಕದ ಕಾರ್ಯಕರ್ತರು ಪಾಲ್ಗೊಂಡಿದ್ದರು.