ಗಜೇಂದ್ರಗಡ: ಕಳೆದೊಂದು ವರ್ಷದಿಂದ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಕುಂಟುತ್ತ ಸಾಗುತ್ತಿವೆ.
ಇದರಿಂದಾಗಿ ಆಲ್ಲಿನ ಜನರು ಹಾಗೂ ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುತ್ತ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಪುರಸಭೆ ನಗರೋತ್ಥಾನ ಯೋಜನೆಯಡಿ 2016-17ನೇ ಸಾಲಿನಲ್ಲಿ ಮಂಜೂರಾದ 6.37 ಕೋಟಿ ವೆಚ್ಚದಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ ಕಾಮಗಾರಿಗಳು ಆರಂಭವಾಗಿ ವರ್ಷಗಳೇ ಉರುಳಿವೆ. ಆದರೆ ಕಾಮಗಾರಿಗಳು ಮಾತ್ರ ಮುಗಿದಿಲ್ಲ. ಪುರಸಭೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ಪಟ್ಟಣದ ಹುಡೇದ ಮಹಾಲಕ್ಷ್ಮೀ ವೃತ್ತದಿಂದ ಉದ್ಯಾನವನ ವರೆಗಿನ ಮುಖ್ಯರಸ್ತೆ ಕಾಮಗಾರಿ ಕೈಗೆತ್ತಿಕೊಂಡು ಹಲವು ತಿಂಗಳುಗಳೇ ಕಳೆದಿವೆ. ಕಾಮಗಾರಿ ಅರ್ಧಕ್ಕೆ ನಿಂತಿದೆ. ಮುಖ್ಯರಸ್ತೆಯಲ್ಲಿ ದೊಡ್ಡ ಜಲ್ಲಿಕಲ್ಲು ಹಾಕಿ ಕೈಬಿಟ್ಟಿರುವ ಗುತ್ತಿಗೆದಾರರ ವಿಳಂಬ ನೀತಿಯಿಂದಾಗಿ ಅಲ್ಲಿ ಸಂಚರಿಸುವ ಬಹುತೇಕ ವಾಹನ ಸವಾರರು ಎದ್ದುಬಿದ್ದು ಸಾಗುವಂತಾಗಿದೆ. ಸರ್ಕಾರಗಳು ಕಚ್ಚಾರಸ್ತೆ ಮುಕ್ತ ಪಟ್ಟಣವನ್ನಾಗಿಸುವ ನಿಟ್ಟಿನಲ್ಲಿ ಕೋಟ್ಯಂತರ ಅನುದಾನ ಬಿಡುಗಡೆ ಮಾಡಿ, ಗುತ್ತಿಗೆದಾರರಿಗೆ ನಿಯಮಗಳನ್ನು ಹೇರುತ್ತದೆ. ಆದರೆ ಗುತ್ತಿಗೆದಾರರು ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ತಮಗೆ ತೋಚಿದಾಗ ಕಾಮಗಾರಿ ನಡೆಸುತ್ತಿರುವುದರಿಂದ ವರ್ಷ ಕಳೆದರೂ ರಸ್ತೆ ಕಾಮಗಾರಿಗಳು ಮುಗಿಯುತ್ತಿಲ್ಲ.
ಪಟ್ಟಣದ 21ನೇ ವಾರ್ಡ್‌ನ ಎರಡು ಪ್ರಮುಖ ರಸ್ತೆಗಳಲ್ಲಿ ಡಾಂಬರೀಕರಣಕ್ಕಾಗಿ ಜಲ್ಲಿಕಲ್ಲುಗಳನ್ನು ಹಾಕಿ ಹಲವು ತಿಂಗಳು ಕಳೆದಿವೆ. ಆದರೆ ಈವರೆಗೂ ಕಾಮಗಾರಿ ಆರಂಭಿಸಿಲ್ಲ. ಈದ್ಗಾ ಮೈದಾನ ಬಳಿ ಚರಂಡಿ ಕಾಮಗಾರಿಯೂ ಅರ್ಧಕ್ಕೆ ನಿಂತಿದೆ. ಇದರಿಂದ ಖಾಸಗಿಯವರ ಜಾಗೆಯಲ್ಲಿ ಚರಂಡಿ ನೀರು ಸಂಗ್ರಹವಾಗುತ್ತಿದೆ. ನಗರೋತ್ಥಾನ ಯೋಜನೆ ನಿಯಮಾವಳಿ ಪ್ರಕಾರ ಒಂಭತ್ತು ತಿಂಗಳಿಗೆ ಎಲ್ಲ ಕಾಮಗಾರಿಗಳೂ ಸಂಪೂರ್ಣವಾಗಿ ಪೂರ್ಣಗೊಳ್ಳಬೇಕು. ಆದರೆ ಇನ್ನೂ ಕೆಲ ವಾರ್ಡ್‌ಗಳಲ್ಲಿ ರಸ್ತೆ ಕಾಮಗಾರಿಯನ್ನೇ ಕೈಗೊಂಡಿಲ್ಲ. ಅಧಿಕಾರಿಗಳು ಮುಗುಮ್ಮಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.