ವಿಜಯಪುರ: ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು. ಮಂಗಳವಾರ ನಗರದ ಸಾಯಿ ವಿಹಾರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಸ್ವಚ್ಛ ಹಾಗೂ ಕಪ್ಪು ಚುಕ್ಕೆ ಇಲ್ಲದ ಆಡಳಿತ ಬಯಸಿರುವ ರಾಜ್ಯದ ಜನರು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಇದೀಗ ಘೋಷಣೆ ಆಗಿರುವ ಸಿಂದಗಿ ಹಾಗೂ ಹಾನಗಲ್ ವಿಧಾನಸಭೆ ಉಪ ಚುನಾವಣೆಯಲ್ಲೂ ಬಿಜೆಪಿ ಜಯ ಗಳಿಸುವುದು ನಿಶ್ಚಿತ ಎಂದರು.
ಕಳೆದ ಕೆಲವು ದಿನಗಳ ಹಿಂದೆ ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಟಿವಿ ಪರದೆ ತೆರೆದರೆ ಸಾಕು ಕೋಲ್ ಹಗರಣ, 2-ಜಿ ಹಗರಣ, ಕಾಮನವೆಲ್ತ್ ಹಗರಣ ಹೀಗೆ ಹಗರಣಗಳ ಸರಮಾಲೆಯ ಸುದ್ದಿಗಳೇ ಕಂಡು ಬರುತ್ತಿತ್ತು, ಆದರೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸ್ವಚ್ಛ ಹಾಗೂ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದೇ ಉದಾತ್ತವಾದ ತಳಹದಿ ಮೇಲೆ ಆಡಳಿತ ನೀಡುತ್ತಿದ್ದಾರೆ ಎಂದರು.
ಭೂತಾನ್, ಮಾಲ್ಡೀವ್ಸ್, ಶ್ರೀಲಂಕಾ ಹೀಗೆ ಎಲ್ಲ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಮೂಲಕ ಪ್ರಧಾನಿ ಮೋದಿಜಿ ಅವರು ವಿದೇಶಾಂಗ ನೀತಿಯನ್ನು ಇನ್ನಷ್ಟೂ ಬಲಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಸಿಂದಗಿ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು ಎಂದು ಪಕ್ಷದ ವರಿಷ್ಠರು ಘೋಷಣೆ ಮಾಡುತ್ತಾರೆ. ಕಮಲದ ಹೂ ಗುರುತಿನ ಅಭ್ಯರ್ಥಿ ಗೆಲುವಿಗೆ ತಕ್ಷಣದಿಂದಲೇ ಕಾರ್ಯಾರಂಭ ಮಾಡಿ, ಅಭ್ಯರ್ಥಿ ಘೋಷಣೆ ಬಳಿಕ ಅವರ
ಹೆಸರಿನೊಂದಿಗೆ ಪ್ರಚಾರ ನಡೆಸಿ, ಬಿಜೆಪಿ ಗೆಲುವಿಗೆ ಶ್ರಮಿಸಬೇಕು. ಚುನಾವಣೆ ಸಂದರ್ಭದಲ್ಲಿ ವ್ಯಕ್ತಿಗತ ಬಾಂಧವ್ಯ ನೋಡದೇ ಪಕ್ಷದ ದೃಷ್ಟಿಯಿಂದ ಕಮಲದ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಬಿಜೆಪಿಗೆ ಕಾರ್ಯಕರ್ತರೆ ಆಸ್ತಿ. ದೇಶಾಭಿಮಾನ, ಶಿಸ್ತು ಬಿಜೆಪಿ ಉಸಿರಾಗಿದ್ದು, ಅರ್ಥಪೂರ್ಣ ತತ್ವಗಳ ಆಧಾರದ ಮೇಲೆ ಬಿಜೆಪಿಯನ್ನು ಇನ್ನೂ ಬಲಿಷ್ಠವಾಗಿ ಬಲಪಡಿಸುವಲ್ಲಿ ಕಾರ್ಯಕರ್ತರ ಪರಿಶ್ರಮ ಪಡಬೇಕು. ಸಿಂದಗಿ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಯಾರೇ ಆಗಲಿ, ಪಕ್ಷದ ಗೆಲುವಿಗಾಗಿ ಪಣ ತೊಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಸಂಸದ ರಮೇಶ ಜಿಗಜಿಣಗಿ, ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿದರು. ಕರ್ನಾಟಕ ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಪಾಟೀಲ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರುದ್ರ ಬಾಗಲಕೋಟ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ವಿವೇಕಾನಂದ ಡಬ್ಬಿ, ರಾಜಕುಮಾರ ಸಗಾಯಿ, ಈಶ್ವರ ಶಿವೂರ, ರಾಜಶೇಖರ ಪೂಜಾರಿ, ರವೀಂದ್ರ ಲೋಣಿ, ವಿಜಯ ಜೋಶಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.