Advertisement

ಜನರಲ್ಲಿ ಮತದಾನ ಜಾಗೃತಿ ಅಗತ್ಯ

03:26 PM Apr 08, 2018 | |

ಶಿವಮೊಗ್ಗ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವಿಕಲ ಚೇತನರು ಗೌರವಯುತವಾಗಿ ಮತಗಟ್ಟೆಗಳಿಗೆ ಬಂದು ಮತವನ್ನು ಚಲಾಯಿಸಲು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಲೋಕೇಶ್‌ ಹೇಳಿದರು.  ನಗರದ ಅಂಬೇಡ್ಕರ್‌ ಭವನದ ಆವರಣದಲ್ಲಿ ವಿಕಲಚೇತನರಿಂದ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಜಿಲ್ಲೆಯಲ್ಲಿ ಒಟ್ಟು 12714 ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ. ಅವರ ಅಗತ್ಯಕ್ಕೆ ಅನುಸಾರವಾಗಿ ಆಯಾ
ಮತಗಟ್ಟೆಗಳಲ್ಲಿ ಗಾಲಿಕುರ್ಚಿ, ಬ್ರೈಲ್‌ ಮಾರ್ಗಸೂಚಿಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ವಿಕಲಚೇತನರು ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು. ಪ್ರತಿಯೊಬ್ಬರು ಗೌರವಯುತವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ಖಾತ್ರಿ ಪಡಿಸಬೇಕಾಗಿದೆ ಎಂದರು.

ಚುನಾವಣಾ ಆಯೋಗವು ಈ ಬಾರಿಯ ಚುನಾವಣೆಯನ್ನು “ಸರ್ವರನ್ನೂ ಒಳಗೊಂಡ ಚುನಾವಣೆ’ ಎಂದು ಘೋಷವಾಕ್ಯದೊಂದಿಗೆ ನಡೆಸುತ್ತಿದ್ದು, ಇದನ್ನು ಅರ್ಥಪೂರ್ಣಗೊಳಿಸಬೇಕಾಗಿದೆ.

ವಿಕಲಚೇತನ ಮತದಾರರಿಗೆ ಕಲ್ಪಿಸಲಾಗಿರುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಶೇ.100 ರಷ್ಟು ಮತದಾನ ಆಗುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು. ಅಂಬೇಡ್ಕರ್‌ ಭವನದಿಂದ ಹೊರಟ ಜಾಥಾ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಪಂ ಆವರಣದಲ್ಲಿ ಸಮಾಪನಗೊಂಡಿತು. 

ಮತದಾರರ ಜಾಗೃತಿ ಫಲಕಗಳನ್ನು ಹೊತ್ತು ವಿಕಲಚೇತನರು ಜಾಥಾದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕಲಾವಿದ ಗಣೇಶ್‌ ಹಾಗೂ ತಂಡದ ಕಲಾವಿದರು ಮತದಾರರ ಜಾಗೃತಿ ಕುರಿತಾದ ಬೀದಿ ನಾಟಕ ಪ್ರದರ್ಶಿಸಿದರು. ಚಿತ್ರಕಲಾವಿದ ಏಕನಾಥ ಬೊಂಗಾಳೆ ಅವರು ಮತದಾರರ ಜಾಗೃತಿ ಕುರಿತಾಗಿ ರಚಿಸಿದ ವ್ಯಂಗ್ಯಚಿತ್ರಗಳನ್ನು ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

Advertisement

ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಕೇಶ್‌ ಕುಮಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಷಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಿಲ್ಪಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಚಾಡೊ ಮತ್ತಿತರರು ಇದ್ದರು. 

ವಿವಿಪ್ಯಾಟ್‌ ಪ್ರಾತ್ಯಕ್ಷಿಕೆ
ಶಿವಮೊಗ್ಗ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೊಸದಾಗಿ ಅಳವಡಿಸಲಾಗುತ್ತಿರುವ ವಿವಿಪ್ಯಾಟ್‌ ಯಂತ್ರದ ಬಗ್ಗೆ ಜಿಲ್ಲಾಧಿಕಾರಿಗಳು ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದಲ್ಲಿ ಪ್ರಾತ್ಯಕ್ಷಿತೆ ನೀಡಿದರು. ಪ್ರಾಯೋಗಿಕವಾಗಿ ಮತಯಂತ್ರದಲ್ಲಿ ಮತ ಚಲಾಯಿಸಿ ವಿವಿಪ್ಯಾಟ್‌ ಯಂತ್ರದಲ್ಲಿ ತಾವು ಚಲಾಯಿಸಿರುವ ಅಭ್ಯರ್ಥಿಗೆ ಮತ ಬಿದ್ದಿರುವುದನ್ನು ನಾಗರಿಕರು ಈ ಸಂದರ್ಭದಲ್ಲಿ ಖಾತ್ರಿ ಪಡಿಸಿಕೊಂಡರು.

ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರು ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಇದುವರೆಗೆ ನೋಂದಾಯಿಸದವರು, ಹೆಸರು ನೋಂದಾಯಿಸಲು ಏ. 14ರವರೆಗೆ ಅವಕಾಶವಿದೆ. ಇದಕ್ಕಾಗಿ ಏ. 8ರಂದು ಜಿಲ್ಲೆಯಾದ್ಯಂತ ವಿಶೇಷ ನೋಂದಣಿ ಅಭಿಯಾನ ನಡೆಸಲಾಗುತ್ತಿದೆ. ಮತದಾನ ಕೇಂದ್ರದಲ್ಲಿ ಅಧಿಕಾರಿಗಳು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಹಾಜರಿದ್ದು, ತಕ್ಷಣ ನೊಂದಣಿಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next