ಬೆಂಗಳೂರು: ರಾಜ್ಯದ ಒಟ್ಟಾರೆ ಬೇಡಿಕೆ ಹಾಗೂ ಪೂರೈಕೆಯ ಅಂಕಿ ಅಂಶದಂತೆ, ಬೇಡಿಕೆಗಿಂತ ಪೂರೈಕೆ ಹೆಚ್ಚಿದ್ದು ರಾಜ್ಯದ ಜನರು ವಿದ್ಯುತ್ ಪೂರೈಕೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ಗುರುವಾರ ಅಭಯ ನೀಡಿದ್ದಾರೆ.
ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಗೆ ಯಾವುದೇ ಅಡಚಣೆ ಆಗಿಲ್ಲ. ಸದ್ಯ ಕೋಲ್ ಇಂಡಿಯಾ ಲಿಮಿಟೆಡ್ ಹಾಗೂ ಎಸ್ ಸಿ ಸಿಎಲ್‌ನಿಂದ ದಿನಂಪ್ರತಿ 12-13 ರೇಕ್ ಕಲ್ಲಿದ್ದಲು ಪೂರೈಕೆ ಆಗುತ್ತಿದ್ದು ಬೇಡಿಕೆ ಪೂರೈಸಲು ಸಾಧ್ಯವಾಗಿದೆ ಹಾಗೂ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲ ಕೊರತೆಯಿಂದಾಗಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟಿಡ್ ನಿಂದ ಮೂರು ವಿದ್ಯುತ್ ಸ್ಥಾವರಗಳಾದ ರಾಯಚೂರು, ಬಳ್ಳಾರಿ ಹಾಗೂ ಯರಮರಸ್ ಉಷ್ಣ ವಿದ್ಯುತ್ ಸ್ಥಾವರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲಿ 8 ಘಟಕಗಳಿದ್ದು 1720 ಮೆ.ವ್ಯಾ ವಿದ್ಯುತ್ ಉತ್ಪಾದನೆಯ ಶಕ್ತಿ ಹೊಂದಿದೆ. ಬಳ್ಳಾರಿ ಸ್ಥಾವರದ 3 ಘಟಕಗಳಲ್ಲಿ 1700 ಮೆ.ವ್ಯಾ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಇನ್ನು ಯರಮರಸ್ ಸ್ಥಾವರದ 2 ಘಟಕಗಳು 1600 ಮೆ.ವ್ಯಾ ವಿದ್ಯುತ್ ಉತ್ಪಾದನಾ ಶಕ್ತಿ ಹೊಂದಿದೆ.
ಒಟ್ಟಾರೆ 3 ಸ್ಥಾವರಗಳ 13 ಘಟಕಗಳ ಒಟ್ಟು ಉತ್ಪಾದನೆ 5020 ಮೆ.ವ್ಯಾ ಗಳಾಗಿದ್ದು. ಈ 13 ಘಟಕಗಳ ಪೈಕಿ 8 ಘಟಕಗಳು ಕಾರ್ಯಾಚರಿಸುತ್ತಿದ್ದು, ಇನ್ನುಳಿದ 5 ಘಟಕಗಳು ಬೇಡಿಕೆ ಕಡಿಮೆ ಇರುವ ಕಾರಣದಿಂದ ಸ್ಥಬ್ಧವಾಗಿದೆ.
ದಿನಂಪ್ರತಿ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟಿಡ್ (ಕೆಪಿಸಿಎಲ್) 12-13 ರೇಕ್ ಸ್ವೀಕರಿಸುತ್ತಿದ್ದು, ಕರ್ನಾಟಕದಲ್ಲಿ ವಿದ್ಯುತ್ ನ ಅಭಾವ ಆಗದಂತೆ ಗಮನ ಹರಿಸಲಾಗಿದೆ ಎಂದು ಇಂಧನ ಸಚಿವರು ತಿಳಿಸಿದ್ದಾರೆ.