Advertisement

ದುರುಗಮ್ಮನಹಳ್ಳ ಸ್ವಚ್ಛತೆಗೆ ಬೇಕಿದೆ ಜನರ ಸಹಕಾರ

05:22 PM May 05, 2019 | Team Udayavani |

ಗಂಗಾವತಿ: ನಗರದ ಮಧ್ಯ ಭಾಗದಲ್ಲಿ ಹರಿಯುವ ದುರುಗಮ್ಮನಹಳ್ಳದಲ್ಲಿರುವ ತ್ಯಾಜ್ಯ ಸ್ವಚ್ಛತಾ ಕಾರ್ಯ ಮತ್ತು ಜನಜಾಗೃತಿ ಮೂಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಮೂರು ದಿನಗಳಿಂದ ಸಮಾನ ಮನಸ್ಕರು ಸ್ವಯಂ ಪ್ರೇರಣೆಯಿಂದ ಹಳ್ಳದಲ್ಲಿರುವ ಪ್ಲಾಸ್ಟಿಕ್‌ ಹಾಗೂ ಪರಿಸರ ಹಾನಿಕಾರಕ ವಸ್ತುಗಳನ್ನು ಸಂಗ್ರಹಿಸಿ ನಗರಸಭೆಯ ಮೂಲಕ ವಿಲೇವಾರಿ ಮಾಡುತ್ತಿದ್ದಾರೆ.

Advertisement

ನಿತ್ಯ ಬೆಳಗ್ಗೆ ನೂರಾರು ಜನರು ಹಳ್ಳದ ಸ್ವಚ್ಛತಾ ಕಾರ್ಯ ಮಾಡಲು ಆಗಮಿಸುತ್ತಿರುವುದು ಸಂಘಟಕರಿಗೆ ಹರ್ಷ ತಂದಿದೆ. ಶ್ರಮಾನುಭವ ಮಾಡಲು ಬರುವವರಿಗೆ ಸಂಘಟಕರು ಕೈ ಗ್ಲೌಸ್‌ ಸೇರಿ ಅಗತ್ಯ ಮಾಹಿತಿ ನೀಡುತ್ತಿದ್ದಾರೆ. ನಾಡಿನ ಖ್ಯಾತ ಹಾಸ್ಯ ಭಾಷಣಕಾರ ಬಿ.ಪ್ರಾಣೇಶ ಹಳ್ಳದಲ್ಲಿಳಿದು ಕಸ, ಪ್ಲಾಸ್ಟಿಕ್‌ ಸಂಗ್ರಹ ಮಾಡುವ ಮೂಲಕ ಪ್ರೇರಣೆಯಾಗಿದ್ದಾರೆ.

ಹಳ್ಳಕ್ಕೆ ಹೊಂದಿಕೊಂಡಿರುವ ಮಹೆಬೂಬನಗರ ಸಂತೆ ಬಯಲು ಪ್ರದೇಶ, ಮುಜಾವರ ಕ್ಯಾಂಪ್‌, ಇಸ್ಲಾಂಪುರ, ಇಂದ್ರಾನಗರ, ಗುಂಡಮ್ಮ ಕ್ಯಾಂಪ್‌ ಜನವಸತಿ ಪ್ರದೇಶದಿಂದ ಚರಂಡಿಯ ನೀರು ನೇರವಾಗಿ ಹಳ್ಳ ಸೇರುತ್ತಿದ್ದು, ಇದರಿಂದ ಇಡೀ ಹಳ್ಳ ಗಬ್ಬೆದ್ದು ನಾರುತ್ತಿದೆ. ಸಂತೆ ಬಯಲು ಪ್ರದೇಶದಲ್ಲಿ ಉಳಿಯುವ ತರಕಾರಿ ಹಾಗೂ ಕೆಲ ಹೊಟೇಲ್ ಮಾಲೀಕರು ಉಳಿದ ಆಹಾರ ಪದಾರ್ಥ, ಮಾಂಸದ ತ್ಯಾಜ್ಯವನ್ನು ನೇರವಾಗಿ ಹಳ್ಳಕ್ಕೆ ಹಾಕುತ್ತಿದ್ದಾರೆ. ತ್ಯಾಜ್ಯ ಮತ್ತು ಚರಂಡಿ ನೀರು ಬರದಂತೆ ತಡೆಯುವಲ್ಲಿ ನಗರಸಭೆ ನೈರ್ಮಲ್ಯ ವಿಭಾಗ ಸಂಪೂರ್ಣ ವಿಫಲವಾಗಿದೆ.

ನಗರಸಭೆ ವೈಜ್ಞಾನಿಕವಾಗಿ ಹಳ್ಳವನ್ನು ಸರ್ವೇ ಮಾಡಿ ಗಡಿ ಗುರುತಿಸುವಲ್ಲಿ ವಿಫಲವಾಗಿದೆ. ಕೇಂದ್ರ ಸರಕಾರದ ಅಮೃತ ಸಿಟಿ ಯೋಜನೆಯಲ್ಲಿ ಹಳ್ಳದ ಸ್ವಚ್ಛತೆ ಮತ್ತು ಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು, ಇದು ಅವೈಜ್ಞಾನಿಕವಾಗಿದೆ. ಇಡೀ ಯೋಜನೆ ನಕ್ಷೆ ಬದಲಿಸುವಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಸೂಚನೆ ನೀಡಿದ್ದಾರೆ.

ಹಳ್ಳದ ನೀರು ಒಂದೇ ಕಡೆ ಹರಿದು ಹೋಗಲು ಸದ್ಯ ಹಳ್ಳದ ಮಧ್ಯೆ ಸಣ್ಣ ಪ್ರಮಾಣದ ಕಾಲುವೆ ನಿರ್ಮಿಸಲಾಗಿದ್ದು, ಮಳೆಗಾಲ ಆರಂಭಕ್ಕೂ ಮೊದಲು ಇಡೀ ಹಳ್ಳದಲ್ಲಿ ಪ್ಲಾಸ್ಟಿಕ್‌ ಸಮೇತ ಹೂಳನ್ನು ತೆಗೆಯುವ ಮೂಲಕ ಹಳ್ಳದಲ್ಲಿ ಸಾರ್ವಜನಿಕರು ನಡೆಸುತ್ತಿರುವ ಸ್ವಚ್ಛತಾ ಕಾರ್ಯಕ್ಕೆ ನೆರವಾಗಬೇಕು. ಮಳೆಗಾಲ ಆರಂಭಕ್ಕೂ ಮೊದಲು ಹಳ್ಳದ ಎರಡು ಭಾಗದಲ್ಲಿ ವಿವಿಧ ಬಗೆಯ ಗಿಡದ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಮೂಲಕ ಹಳ್ಳದ ಮೊದಲ ಸೌಂದರ್ಯಕ್ಕೆ ನಗರಸಭೆ ಕಾರಣವಾಗಬೇಕಿದೆ. ಹಳ್ಳದ ಸ್ವಚ್ಛತಾ ಕಾರ್ಯಕ್ಕೆ ನಗರದ ವ್ಯಾಪಾರಸ್ಥರು, ವೈದ್ಯರು, ರಾಜಕಾರಣಿಗಳು ಕನ್ನಡಪರ ಸಂಘಟನೆಗಳು ಮಠಾಧಿಧೀಶರು ವಿವಿಧ ಎನ್‌ಜಿಒ ಸಂಸ್ಥೆಗಳು ದಲಿತಪರ ಸಂಘಟನೆಗಳು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಸಹಕಾರ ನೀಡಬೇಕಾಗಿದೆ.

Advertisement

ಪ್ರತಿದಿನ ಹಳ್ಳದ ಸ್ವಚ್ಛತಾ ಶ್ರಮಾನುಭವ ಕಾರ್ಯ ಭರದಿಂದ ನಡೆಯುತ್ತಿದೆ. ಮಳೆ ಆರಂಭಕ್ಕೂ ಮುಂಚೆ ಇಡೀ ಹಳ್ಳದಲ್ಲಿ ಪ್ಲಾಸ್ಟಿಕ್‌ ಘನತ್ಯಾಜ್ಯ ಸ್ವಚ್ಛ ಮಾಡಲು ತೀರ್ಮಾನಿಸಲಾಗಿದೆ. ಹಳ್ಳಕ್ಕೆ ಹರಿದು ಬರುವ ಚರಂಡಿ ನೀರನ್ನು ತಡೆಯಲು ನಗರಸಭೆ ಕ್ರಮ ಕೈಗೊಳ್ಳಬೇಕಿದೆ. ಉಳಿದ ತರಕಾರಿ ಹಾಗೂ ಮಾಂಸ ಇತರೆ ತ್ಯಾಜ್ಯ ವಸ್ತುಗಳನ್ನು ಹಳ್ಳಕ್ಕೆ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕುರಿತು ನಗರಸಭೆ ಸೂಕ್ತ ನಿಯಮ ಮಾಡಬೇಕಿದೆ. ಅಮೃತಸಿಟಿ ಯೋಜನೆಯಡಿ ಕೈಗೊಳ್ಳುವ ಕಾಮಗಾರಿ ಅವವೈಜ್ಞಾನಿಕ ಅದನ್ನು ಸರಿಪಡಿಸುವಂತೆ ಖುದ್ದು ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಂಘ ಸಂಸ್ಥೆಗಳು ಜನಪ್ರತಿನಿಧಿಗಳು ಮತ್ತು ಧಾರ್ಮಿಕ ಮುಖಂಡರು ಸ್ವಚ್ಛತಾ ಕಾರ್ಯಕ್ಕೆ ಸಹಕಾರ ಮಾರ್ಗದರ್ಶನ ನೀಡಬೇಕು. ಈ ಕಾರ್ಯ ಪಕ್ಷಾತೀತವಾಗಿ ನಡೆಯುತ್ತಿದೆ.

•ಡಾ| ಶಿವಕುಮಾರ ಮಾಲೀಪಾಟೀಲ್, ಸ್ವಚ್ಛತಾ ಕಾರ್ಯದ ಸಂಚಾಲಕರು

ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next